ಶಿವಮೊಗ್ಗ: ಲಕ್ಷ್ಮಣ್ ಸವದಿಯವರು ಹಿರಿಯರು. ದೈಹಿಕವಾಗಿ ಅವರು ಅಲ್ಲಿದ್ದರೂ ಮಾನಸಿಕವಾಗಿ ಬಿಜೆಪಿಯಲ್ಲಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ನಾವಾಗಿ ಯಾರ ಹಿಂದೆ ಹೋಗುತ್ತಿಲ್ಲ. ಅವರೇ ಬರುತ್ತಿದ್ದಾರೆ. ಪಕ್ಷಕ್ಕೆ ಯಾರು ಬಂದರೂ ಸ್ವಾಗತ. ಕಾಂಗ್ರೆಸ್ ಮೊದಲು ಇರುವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ನಮ್ಮ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಇರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಮರಳಿ ಕೂಡಿಗೆ ಬಂದಿದ್ದಾರೆ. ಅವರು ಯಾವುದೇ ಬೇಡಿಕೆ ಇಟ್ಟಿಲ್ಲ. ಮೋದಿ ಪ್ರಧಾನಿಯಾಗಬೇಕೆಂಬುದು ಅಷ್ಟೇ ಉದ್ದೇಶ. ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. 28 ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂದರು.
ಪ್ರಧಾನಿ ಮೋದಿ ಹಗಲು ರಾತ್ರಿ ದೇಶದ ಸೇವೆ ಮಾಡುತ್ತಿದ್ದಾರೆ. ಅವರು ಈವರೆಗೂ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವು ಹಾಗೇ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾಗುವುದನ್ನ ಯಾರು ತಡೆಯಲು ಸಾಧ್ಯವಿಲ್ಲ ಎಂದರು.
ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ ಸರ್ಕಾರ ಜನರಿಗೆ ಕಿವಿಗೆ ಹೂ ಇಡುವ ಕೆಲಸ ಮಾಡುತ್ತಿದೆ. ಬರ ಇದ್ದರೂ ಈ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ರೈತರಿಗೆ ಬರೆ ಕೊಡುವ ಕೆಲಸ ಮಾಡುತ್ತಿದೆ. ರೈತರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಕಳಕಳಿ ಇಲ್ಲ. ರಾಜ್ಯದ ಪರಿಸ್ಥಿತಿ ಡೋಲಾಯಮನವಾಗಿದೆ. ಅನುಭವಿ ಸಿಎಂಗೆ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲಾಗುತ್ತಿಲ್ಲ. ಇದು ರೈತ, ಬಡವ, ದಲಿತ ವಿರೋಧಿ ಸರ್ಕಾರ ಇದು. ಕೇವಲ ಅಲ್ಪಸಂಖ್ಯಾತರ ಓಲೈಕೆ ಮಾಡುವುದಕ್ಕೆ ಮುಂದಾಗಿದೆ ಎಂದರು.
ಬರದ ವಿಷಯದಲ್ಲಿ ಸಹ ಕೇಂದ್ರದ ಕಡೆ ಬೆರಳು ತೊರಿಸುತ್ತಿದೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಯಡಿಯೂರಪ್ಪ ನವರು ನಿಮ್ಮ ಥರ ಕೈ ತೋರಿಸಿ ಕೂತಿರಲಿಲ್ಲ. ರೈತರಿಗೆ ಬರದ ಸಮಯದಲ್ಲಿ ಎರಡು ಸಾವಿರ ಕೊಡುತ್ತೇವೆಂದು ಹೇಳುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಈ ಸರ್ಕಾರಕ್ಕೆ ಬುದ್ದಿ ಕಲಿಸುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಜ.22 ತಾರೀಖು ಭಾರತ ಅಷ್ಟೇ ಅಲ್ಲ ಜಗತ್ತೇ ಅಯೋಧ್ಯೆ ಕಡೆ ನೋಡುತ್ತಿತ್ತು. ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜಗತ್ತಿನ ಗಮನ ಸೆಳೆಯಿತು. ಭಾರತೀಯ ಜನತಾ ಪಕ್ಷದಿಂದ ನಮ್ಮ ಪ್ರಣಾಳಿಕೆಯಲ್ಲಿ ಸಹ ಹೇಳಿದ್ದೆವು. ರಾಮ ಮಂದಿರ ಲೋಕಾರ್ಪಣೆ ಆಗಿರುವುದು ಸಂತಸ ತಂದಿದೆ. ದೇಶದ ಐಕ್ಯತಾ ಭಾವನೆ ಮೂಡಿದೆ. ದೇಶದ ಕಾಂಗ್ರೆಸ್ ನಾಯಕರು ದ್ವಂದ್ವ ನಿಲುವು ತೋರಿಸಿದರು. ಅಯೋಧ್ಯೆಗೆ ಹೊದರೆ ಅಲ್ಪ ಸಂಖ್ಯಾತರಿಗೆ ನೋವು ಆಗುತ್ತದೆಂದು ತಿರಸ್ಕರಿಸಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವುದು ದುರಂತವೇ ಸರಿ. ರಾಜ್ಯ ಸರ್ಕಾರ ಮುಜರಾಯಿ ದೇವಸ್ಥಾನದಲ್ಲಿ ಪೂಜೆ ಆಗಬೇಕು ಎನ್ನುತ್ತಾರೆ. ಅಲ್ಪಸಂಖ್ಯಾತ ಭಾವನೆಗಳಿಗೆ ಧಕ್ಕೆ ಆಗುತ್ತದೆಂದು ಹೀಗೆ ಮಾಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.
ಭಾರತೀಯ ಜನತಾ ಪಾರ್ಟಿ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮಾಜದವರನ್ನು ಒಟ್ಟಿಗೆ ತಗೆದುಕೊಂಡು ಹೋಗುವ ಪಕ್ಷ ಬಿಜೆಪಿ. ವೀರಶೈವ ಲಿಂಗಾಯತ ಎಂದು ಬೆಂಕಿ ಹಂಚಲು ಹೋಗಿದ್ದು ಇದೇ ಕಾಂಗ್ರೆಸ್ ಎಂದು ವಿಜಯೇಂದ್ರ ಹೇಳಿದರು.