ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಕೊಲೆ ಪ್ರಕರಣದ ಮತ್ತೂಬ್ಬ ಆರೋಪಿಯ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಒಂದೇ ಪ್ರಕರಣದ ಮೂವರು ಆರೋಪಿಗಳಿಗೆ ನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಂಬತ್ತಕ್ಕೆ ಏರಿದೆ. ಹೆಸರುಘಟ್ಟ ನಿವಾಸಿ ಆಕಾಶ್ ಅಲಿಯಾಸ್ ಮಳೆರಾಯ (24) ಬಂಧಿತ. ಆರೋಪಿಯಿಂದ ಹಲ್ಲೆಗೊಳಗಾದ ಪೊಲೀಸ್ ಕಾನ್‌ಸ್ಟೆಬಲ್ ಅರುಣ್ ಕುಮಾರ್ ಸ್ಥಳೀಯ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಕಾಶ್ ವಿರುದ್ಧ ಚನ್ನಪಟ್ಟಣ, ಸೋಲ ದೇವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ, ರೌಡಿ ಹೇಮಂತ್ ಅಲಿಯಾಸ್ ಹೇಮಿ ಸಹಚರನಾಗಿ ರುವ ಆಕಾಶ್, ಕೆಲ ವರ್ಷಗಳ ಹಿಂದೆ ನಡೆದ ಮಂಡ್ಯದ ಜಡೇಜ ರವಿ ಹತ್ಯೆ ಪ್ರಕರಣ ಹಾಗೂ 2016ರಲ್ಲಿ ನಡೆದ ಚನ್ನಪಟ್ಟಣದ ಚಂದ್ರು ಅಲಿಯಾಸ್ ಆಂಬೋಡೆ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಚನ್ನಪಟ್ಟಣ ಠಾಣೆಯಲ್ಲಿ ಆತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಲಕ್ಷ್ಮಣ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆಕಾಶ್ ಬಂಧನಕ್ಕೆ ವಿಶೇಷ ತಂಡ ರಚಿಸ ಲಾಗಿತ್ತು. ಈ ತಂಡಕ್ಕೆ ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಉತ್ತರಹಳ್ಳಿಯ ಪೂರ್ಣಪ್ರಜ್ಞ ನಗರದ ನಿರ್ಜನ ಪ್ರದೇಶದಲ್ಲಿ ಆಕಾಶ್ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಮುರುಗೇಂದ್ರಯ್ಯ, ಪೇದೆ ಅರುಣ್‌ಕುಮಾರ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಲು ತೆರಳಿದ್ದರು.
ಆದರೆ, ಪೊಲೀಸರನ್ನು ಕಂಡ ಆಕಾಶ್ ತಪ್ಪಿಸಿ ಕೊಳ್ಳಲು ಯತ್ನಿಸಿದ್ದು, ಪೇದೆ ಅರುಣ್ ಕುಮಾರ್ ಮುಖಕ್ಕೆ ಕಾರದ ಪುಡಿ ಎರಚಿ, ಹಲ್ಲೆ ನಡೆಸಿದ್ದಾನೆ. ಪರಿಣಾಮ ಅರುಣ್‌ಕುಮಾರ್ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಆಗ ಇನ್‌ಸ್ಪೆಕ್ಟರ್ ಮುರುಗೇಂದ್ರಯ್ಯ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆಕಾಶ್ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಒಂದು ಪ್ರಕರಣ, ಮೂರು ಗುಂಡೇಟು: ಮಾ.7ರಂದು ಮಹಾಲಕ್ಷ್ಮೀ ಲೇಔಟ್‌ನ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ ಹಿಂಭಾಗದ ಗೌತಮನಗರದ ರೆನೆಸಾನ್ಸ್ ಟೆಂಪಲ್ ಬೆಲ್ಸ್ ಅಪಾರ್ಟ್‌ಮೆಂಟ್ ಮುಂಭಾಗ ಕುಖ್ಯಾತ ರೌಡಿ ಲಕ್ಷ್ಮಣನ ಬರ್ಬರ ಹತ್ಯೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಮಹಾಲಕ್ಷ್ಮೀ ಲೇಔಟ್ ಪೊಲೀಸರು, ಮಾ.9ರಂದು ಪ್ರಮುಖ ಆರೋಪಿ ಸುಪಾರಿ ಕಿಲ್ಲರ್ ಕ್ಯಾಟ್ ರಾಜನನ್ನು ಬಂಧಿಸಿದ್ದರು. ಆದರೆ, ಮಹಜರು ಸ್ಥಳದಲ್ಲಿ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾದ ಆತನ ಮೇಲೆ ಇನ್ ಸ್ಪೆಕ್ಟರ್ ಎಂ.ಪ್ರಶಾಂತ್ ಗುಂಡು ಹಾರಿಸಿ ಬಂಧಿಸಿದ್ದರು.
ಹೆಚ್ಚಿನ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಮಾ.12ರಂದು ಮುಂಜಾನೆ 5 ಗಂಟೆ ಸುಮಾರಿಗೆ ರೌಡಿಶೀಟರ್ ಹೇಮಂತ್ ಅಲಿ ಯಾಸ್ ಹೇಮಿಯನ್ನು ಅನ್ನಪೂರ್ಣೇಶ್ವರಿ ನಗರದ ಹನುಮಗಿರಿ ದೇವಾಲಯದ ಬಳಿ ಬಂಧಿಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಹರೀಶ್, ಹೇಮಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು. ಮಾ.13ರಂದು ಮುಂಜಾನೆ 5.30ರ ಸುಮಾರಿಗೆ ಪ್ರಕರಣದ ಮತ್ತೂಬ್ಬ ಆರೋಪಿ ಆಕಾಶ್ ಅಲಿಯಾಸ್ ಮಳೆ ರಾಯನಿಗೆ ಗುಂಡೇಟಿನ ರುಚಿ ತೋರಿಸಿದ್ದಾರೆ.
ತಪ್ಪೊಪ್ಪಿಗೆ ಹೇಳಿಕೆ ನೀಡಿದ ರೂಪೇಶ್ “ಪ್ರೇಯಸಿ ವರ್ಷಿಣಿ ವಿಚಾರವಾಗಿ ಲಕ್ಷ್ಮಣ ತನ್ನ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದ. ಇದೇ ವಿಚಾರಕ್ಕೆ ಜೈಲಿನಲ್ಲೇ ಕೊಲೆಗೆ ಸಂಚು ರೂಪಿಸಲಾಗಿತ್ತು. ಹೊರ ಬಂದ ಬಳಿಕ ವರ್ಷಿಣಿ ನಂಬರ್‌ಗೆ ಕರೆ ಮಾಡಿದಾಗ ಆಕೆ ಲಂಡನ್‌ನಲ್ಲಿ ಇದ್ದಳು. ಆದರೆ, ಲಕ್ಷ್ಮಣನಿಗೆ ಬುದ್ಧಿ ಕಲಿಸಬೇಕು ಎಂದು ಹೇಳುತ್ತಿದ್ದಳು. ನನಗೂ ಲಕ್ಷ್ಮಣ ಬಹಳಷ್ಟು ಬಾರಿ ಹಿಂಸೆ ನೀಡಿದ್ದ. ಹೀಗಾಗಿ ಸಂಚು ರೂಪಿಸಿ ಕೊಲೆ ಮಾಡಿದೆವು’ ಎಂದು ಹೇಳಿಕೆ ನೀಡಿರುವುದಾಗಿ ಸಿಸಿಬಿ ಪೊಲೀಸರು ಹೇಳಿದರು.
ಆಡಿಯೋ ಬಿಡುಗಡೆ ರೂಪೇಶ್ ಮತ್ತು ವರ್ಷಿಣಿಯ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಲಕ್ಷ್ಮಣನಿಂದ ಪಡೆದುಕೊಂಡಿದ್ದ ಒಂದು ಲಕ್ಷ ರೂ. ಅನ್ನು ರೂಪೇಶ್ ಬ್ಯಾಂಕ್ ಖಾತೆಗೆ ವರ್ಷಿಣಿ ವರ್ಗಾವಣೆ ಮಾಡುವುದು ಮತ್ತು ಆ ಹಣ ವಾಪಸ್ ಕೊಡುವಂತೆ ವರ್ಷಿಣಿ ರೂಪೇಶ್‌ನನ್ನು ಕೇಳಿರುವುದು, ಅಲ್ಲದೆ, ಕೆಲ ಖಾಸಗಿ ವಿಚಾರಗಳನ್ನು ಇಬ್ಬರು ಮಾತನಾಡಿದ್ದಾರೆ.