ಚೆನ್ನೈ: ಬಾಂಗ್ಲಾ ವಿರುದ್ದದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭಾರತವು (Team India) ತನ್ನ ನಿಯಂತ್ರಣಕ್ಕೆ ಪಡೆದಿದೆ. ಭಾರತದ ಬೌಲರ್ ಗಳ ಬಿಗು ದಾಳಿಗೆ ನಲುಗಿದ ಬಾಂಗ್ಲಾ ತಂಡವು ಪ್ರಥಮ ಇನ್ನಿಂಗ್ಸ್ ಕೇವಲ 149 ರನ್ ಗಳಿಗೆ ಆಲೌಟಾಗಿದೆ. ಈ ಮೂಲಕ ಭಾರತ 227 ರನ್ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತವು 376 ರನ್ ಗಳಿಸಿದ್ದರೆ, ಬಾಂಗ್ಲಾ 149 ರನ್ ಮಾತ್ರ ಮಾಡಿದೆ.
ಭಾರತದ ತ್ರಿವಳಿ ವೇಗಿಗಳು ಬಾಂಗ್ಲಾ ಬ್ಯಾಟರ್ ಗಳ ಮೇಲೆ ಸವಾರಿ ಮಾಡಿದರು. ಮೊದಲ ಓವರ್ ನಲ್ಲಿ ಶದ್ಮಾನ್ ಇಸ್ಲಾಂ ಅವರನ್ನು ಬೌಲ್ಡ್ ಮಾಡುವ ಮೂಲಕ ಬುಮ್ರಾ ವಿಕೆಟ್ ಬೇಟೆ ಆರಂಭಿಸಿದರು. ಬಳಿಕ ಆಕಾಶ್ ದೀಪ್ ಸತತ ವಿಕೆಟ್ ಗಳ ಮೂಲಕ ಬಾಂಗ್ಲಾ ಕುಸಿತಕ್ಕೆ ನಾಂದಿ ಹಾಡಿದರು. ಇವರಿಗೆ ಸಾಥ್ ನೀಡಿದ ಸಿರಾಜ್ ಬಾಂಗ್ಲಾ ಹುಲಿಗಳಿಗೆ ಕಂಟವಾದರು.
ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 32 ರನ್, ಮೆಹದಿ ಹಸನ್ 27 ರನ್, ಲಿಟನ್ ದಾಸ್ 22 ರನ್ ಮತ್ತು ನಾಯಕ ನಜ್ಮುಲ್ ಶಾಂಟೋ 20 ರನ್ ಗಳಿಸಿದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ನಾಲ್ಕು ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು.
376 ರನ್ ಪೇರಿಸಿದ ಭಾರತ
ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದ್ದ ಭಾರತ ಇಂದಿನ ದಿನದ ಆರಂಭದಲ್ಲಿ ಸತತ ವಿಕೆಟ್ ಕಳೆದುಕೊಂಡಿತು. 86 ರನ್ ಗಳಿಸಿದ್ದ ಜಡೇಜಾ ಇಂದು ಅದೇ ಮೊತ್ತಕ್ಕೆ ಔಟಾದರು. ಆಶ್ವಿನ್ 113 ರನ್ ಮಾಡಿದರು. ಬಾಂಗ್ಲಾ ಪರ ಹಸನ್ ಮೊಹಮೂದ್ ಐದು ವಿಕೆಟ್ ಪಡೆದರೆ, ತಸ್ಕಿನ್ ಮೂರು ವಿಕೆಟ್ ಕಿತ್ತರು.