Advertisement
ಈ ಲಕ್ಷ್ಮಣ ರೇಖೆಗಳು ಬಾಲ್ಯದಲ್ಲಿ ಶಿಸ್ತಿನ ಜೀವನವನ್ನು ಕಲಿಸಿದರೆ ದೊಡ್ಡವರಾದಂತೆ ಅದೇ ರೇಖೆಗಳು ಉಸಿರುಗಟ್ಟುವಂತೆ ಮಾಡುವುದೂ ಸುಳ್ಳಲ್ಲ. ಮನಸ್ಸೂ ವಿನಾಕಾರಣ ಎಗರಾಡುತ್ತಿರುತ್ತದೆ. ಆಸೆ, ಸಿಟ್ಟು, ದ್ವೇಷ, ದುಃಖ, ಪ್ರೀತಿ, ಅಸೂಯೆ ಎಲ್ಲವನ್ನೂ ಮೆಟ್ಟಿ ನಿಲ್ಲಬೇಕೆಂದು ಇನ್ನೊಬ್ಬರಿಗೆ ಹೇಳಿದರೂ ಉಪ್ಪು$ಹುಳಿ ತಿನ್ನುವ ದೇಹದಲ್ಲಿ ಆಕಾರ, ವಿಕಾರಗಳು ಎದ್ದೇಳುವುದು ಸಹಜ, ಆದರೂ ಎಲ್ಲವೂ ಒಂದು ಹದ್ದುಬಸ್ತಿನಲ್ಲಿದ್ದರೆ ಚೆಂದ. ಅದು ಸೀಮೋಲ್ಲಂಘನ ಮಾಡಿತೋ ಆಗ ಅನಾಹುತ ತಪ್ಪಿದ್ದಲ್ಲ. ಲಕ್ಷ್ಮಣ, ಲಕ್ಷ್ಮಣರೇಖೆ ಎಳೆದದ್ದು ಸೀತೆಗಾಗಿ. ಅಂದರೆ ಗಂಡು ಹೆಣ್ಣಿಗೆ, ಅಪಾಯ ಅರಿತು ಎಳೆದ ರೇಖೆಯದು. ಅಂದಿನಿಂದ ಇಂದಿನವರೆಗೂ ಹೆಣ್ಣು ಸುಲಭದಲ್ಲಿ ಶಿಕಾರಿಗೆ ಬಲಿಯಾಗುತ್ತ ಬಂದಳು ಎಂದರೆ ತಪ್ಪಾಗಲಾರದು. ಹೆಣ್ಣು ಅರಿತೋ, ಅರಿಯದೆಯೋ ಲಕ್ಷ್ಮಣ ರೇಖೆ ದಾಟಿದಾಗ ಬೆಲೆ ತೆತ್ತಿದ್ದು ಅವಳೇ, ಸೀತೆ ಹಲವು ವರ್ಷಗಳ ಕಾಲ ಲಂಕೆಯ ಅಶೋಕ ವನದಲ್ಲಿ ಶೋಕ ತಪ್ತಳಾಗಿ ಕುಳಿತುಕೊಳ್ಳಬೇಕಾಗಿ ಬಂತು. ಕಡೆಗೂ ರಾಮ, ಸೀತೆಯರು ಒಂದಾದಾಗ ಒಟ್ಟಿಗೆ ಇದ್ದದ್ದಾದರೂ ಎಷ್ಟು ದಿನ? ಮತ್ತೆ ಪರಿತ್ಯಕ್ತೆಯಾಗಿ ಕಾಡಿನಲ್ಲಿ ಒಂಟಿಜೀವನ ಮಕ್ಕಳೊಂದಿಗೆ, ತನ್ನ ಪರಿಶುದ್ಧತೆಯನ್ನು ಪರೀಕ್ಷಿಸಲು ಅಗ್ನಿ ಪ್ರವೇಶ, ಇವೆಲ್ಲವೂ ಸೀತೆ ಲಕ್ಷ್ಮಣ ರೇಖೆ ದಾಟಿದ ಪರಿಣಾಮವೆ? ಸೀತೆ ಲಕ್ಷ್ಮಣ ರೇಖೆ ದಾಟುವ ಸಾಹಸ ಮಾಡಿದ್ದಾದರೂ ಏಕೆ?
Related Articles
Advertisement
ಮಧ್ಯ ರಾತ್ರಿಯ ಹೆಣ್ಣಿನ ಒಂಟಿ ತಿರುಗಾಟದಲ್ಲಿ ನಡೆದಿರುವ ಅತ್ಯಾಚಾರವನ್ನು ಗಮನಿಸಿದರೆ ಎಲ್ಲಿಯವರೆಗೆ ಗುಮ್ಮ, ರಾವಣ, ದುಶ್ಯಾಸನರು ಹೊರಗೆ ಆರಾಮವಾಗಿ ತಿರುಗಾಡುತ್ತಿರುತ್ತಾರೋ ಅಲ್ಲಿಯವರೆಗೆ ಹೆಣ್ಣು ತನಗೆ ತಾನೇ ಲಕ್ಷ್ಮಣ ರೇಖೆಯ ಒಳಗಿರುವುದೇ ಸರಿ ಅನ್ನಿಸದಿರುವುದಿಲ್ಲವೆ? ಸ್ವಾತಂತ್ರ್ಯದ ಹೆಸರಲ್ಲಿ ಬಿಯರು, ಬಾರ್‌ಗಳಲ್ಲಿ ನಲಿದಾಟ, ಫ್ಯಾಷನ್ನಿನ ಹೆಸರಲ್ಲಿ ಬಿಚ್ಚಾಟ ಮಾಡುವುದು ಎಷ್ಟು ಸರಿ? ಇಲ್ಲಿ ಸಂಸ್ಕೃತಿಯ ಚೌಕಟ್ಟಿನ ಲಘು ಲಕ್ಷ್ಮಣ ರೇಖೆ ಒಳ್ಳೆಯದು.
ಇನ್ನೂ ಪತ್ರಿಕೆಗಳ ಮುಖಪುಟವನ್ನು ಆವರಿಸುತ್ತಿರುವ, ಸದ್ಯಕ್ಕೆ ದೇಶದ ಉದ್ದಗಲಕ್ಕೂ ದೊಡ್ಡ ಬಿರುಗಾಳಿಯಂತೆ ಹಬ್ಬುತ್ತಿರುವ ಮೀ ಟೂ ಮೂವಮೆಂಟ್‌ನತ್ತ ಗಮನ ಹರಿಸೋಣ. ಗಂಡು -ಹೆಣ್ಣಿನ ಮಧ್ಯೆ ಇರಬೇಕಾದ ಲಕ್ಷ್ಮಣ ರೇಖೆ ದಾಟಿ ದಾಂಧಲೆ ಮಾಡಿದ ದುಶ್ಯಾಸನರತ್ತ ಲೋಕದ ಚಿತ್ತ ಸೆಳೆಯುತ್ತಿರುವ ದ್ರೌಪದಿಯ ಕಣ್ಣೀರಿನ ಕತೆಗಳಿವು. ಎದ್ದ ಬಿರುಗಾಳಿ ಹಲವರನ್ನು ಬೇರು ಸಮೇತ ಕಿತ್ತೆಸೆಯುತ್ತಿವೆ, ರಾಮ-ಧರ್ಮರಾಯನೆನಿಸಿಕೊಂಡವರ ಮುಖವಾಡ ಕಳಚುತ್ತಿದೆ. ರಾಮನೆಂದು ಪೂಜಿಸಿದರೆ ಹಿಂದಿರುವುದು ರಾವಣನೆಂದು ಗೊತ್ತಾದಾಗ ಪ್ರಶ್ನೆಗಳು ಏಳುತ್ತವೆ ಇಲ್ಲಿ ರಾಮ ಯಾರು? ರಾವಣನಾರು? ತಪ್ಪುತಪ್ಪೇ, ಎಷ್ಟು ದಿನ ತಪ್ಪುಗಳನ್ನು ಮುಚ್ಚಿಡಬಹುದು? ಅನ್ಯಾಯಕ್ಕೇ ಯಾವತ್ತೂ ಜಯವೇ? ಲಕ್ಷ್ಮಣ ರೇಖೆ ದಾಟಿದವರಿಗೆ ದಂಡನೆ ಬೇಡವೇ? ಆದರೆ ದ್ರೌಪದಿ ಕಣ್ಣೀರು ಸುರಿಸುವಾಗ ಪ್ರಶ್ನೆಗಳೂ ಏಳುತ್ತವೆ ದ್ರೌಪದಿಯ ವರ್ಷಗಳ ಮೌನದ ಕಾರಣವೇನು? ದ್ರೌಪದಿ(/ಸೀತೆ) ಮಾಯಾಮೃಗಕ್ಕೆ ಆಸೆ ಪಟ್ಟಿದ್ದಾದರೂ ಏಕೆ? ಅದು ಮಾಯಾ ಮೃಗವೆಂದು ದ್ರೌಪದಿ ತಿಳಿದಿರಲಿಲ್ಲವೇ? ಬೂದಿ ಮುಚ್ಚಿದ ಕೆಂಡವು ಬೆಂಕಿಯಾಗಿ ಹತ್ತಿ ಉರಿಯುತ್ತಿವೆ, ಕೆಲವರು ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದಾರೆ, ಮೌನವಾಗಿ ಅಳುತ್ತಿದ್ದವರು ಸ್ವರ ಏರಿಸಿ ಅಳುತ್ತಿದ್ದಾರೆ. ನನಗನ್ನಿಸುವುದಿಷ್ಟೇ ಸಿನೆಮಾಗಿಂತ ನಿಜಜೀವನ ಭೀಕರವೂ ಹೌದು, ಸ್ವಾರಸ್ಯವೂ ಹೌದು. ಎಲ್ಲವೂ ಆಯಾಯ ಚೌಕಟ್ಟಿನಲ್ಲಿ ಅಂದರೆ ಲಕ್ಷ್ಮಣ ರೇಖೆಯೊಳಗೆ ಇದ್ದರೆ ಚೆಂದ, ಪರಿಮಿತಿ ದಾಟಿದರೆ ವಿಕೃತ, ಅನಾಹುತ ತಪ್ಪಿದ್ದಲ್ಲ. – ಗೀತಾ ಕುಂದಾಪುರ