Advertisement

ಲಕ್ಷಾನಟ್ಟಿ ಗ್ರಾಮ ಪಂಚಾಯಿತಿಗಿಲ್ಲ ಚುನಾವಣೆ

11:04 AM Jun 13, 2022 | Team Udayavani |

ಮುಧೋಳ: ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದು ಅರ್ಧ ಅವಧಿ  ಸಮೀಪಿಸುತ್ತ ಬಂದರೂ ತಾಲೂಕಿನ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿಗೆ ಮಾತ್ರ ಇದೂವರೆಗೂ ಚುನಾವಣೆ ಭಾಗ್ಯ ಕೂಡಿ ಬಂದಿಲ್ಲ.

Advertisement

ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಪಂಚಾಯಿತಿ ಚುನಾವಣೆ ನಡೆಸಲಾಗುತ್ತದೆ. ಆದರೆ, ಹಲವು ತಾಂತ್ರಿಕ ಕಾರಣದಿಂದಾಗಿ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿಗೆ ಚುನಾವಣೆಯಾಗದ ಕಾರಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳ ಅಭಿವೃದ್ಧಿಗೆ ತೊಡಕುಂಟಾಗಿದೆ.

ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಂಡ ಹಳ್ಳಿಗಳು: 2021ರಲ್ಲಿ ತಾಲೂಕಿನ ಲೋಕಾಪುರ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿತು. ಈ ಪಟ್ಟಣ ಪಂಚಾಯಿತಿಗೆ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದ ಎರಡು ಗ್ರಾಮಗಳು ಸೇರ್ಪಡೆಗೊಂಡಿದ್ದರಿಂದ ಇದೀಗ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ಚುನಾವಣೆಗೆ ತೊಡಕುಂಟಾಗಿದೆ. ಲೋಕಾಪುರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಪರಿಣಾಮ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿಯ ಸದಸ್ಯತ್ವ ಸಂಖ್ಯೆ ಕಡಿಮೆಯಾಯಿತು. ಇದರಿಂದ ಮೀಸಲಾತಿ ಸ್ಥಾನ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗುತ್ತಿರುವ ಕಾರಣ ಚುನಾವಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಏಳು ಹಳ್ಳಿಗಳು: ಲೋಕಾಪುರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವ ಮುನ್ನ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಕ್ಷಾನಟ್ಟಿ, ವರ್ಚಗಲ್ಲ, ಚೌಡಾಪುರ, ಜಾಲಿಕಟ್ಟಿ ಬಿ.ಕೆ., ಜಾಲಿಕಟ್ಟಿ ಕೆ.ಡಿ, ಪಾಲ್ಕಿಮಾನಿ, ನಾಗನಾಪುರ, ಬ್ಯಾಡರ ಅರಳಿಕಟ್ಟಿ, ಜೇಡರ ಅರಳಿಕಟ್ಟಿ ಹಳ್ಳಿಗಳು ಬರುತ್ತಿದ್ದವು. ಇದೀಗ ಜಾಲಿಕಟ್ಟಿ ಬಿ.ಕೆ. ಹಾಗೂ ಜಾಲಿಕಟ್ಟಿ ಕೆ.ಡಿ. ಗ್ರಾಮಗಳು ಲೋಕಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಇದೀಗ 7 ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿಗೆ ಆಡಳಿತ ಮಂಡಳಿಯಿಲ್ಲದೆ ಕೇವಲ ಅಧಿಕಾರಿಗಳ ಹುಕುಮಿನಂತೆ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೀಟು ಹಂಚಿಕೆಯ ಗೊಂದಲ: 9 ಹಳ್ಳಿಗಳನ್ನು ಹೊಂದಿದ್ದ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ಒಟ್ಟು 22 ಸ್ಥಾನಗಳನ್ನು ಒಳಗೊಂಡಿತ್ತು. ಇದೀಗ ಜಾಲಿಕಟ್ಟಿ ಕೆ.ಡಿ., ಹಾಗೂ ಜಾಲಿಕಟ್ಟಿ ಕೆ.ಬಿ. ಗ್ರಾಮಗಳು ಗ್ರಾಮ ಪಂಚಾಯಿತಿಯಿಂದ ಹೊರಬರುವ ಕಾರಣ ಮೀಸಲಾತಿ ವಿಂಗಡಿಸಿ ಸ್ಥಾನ ಹಂಚಿಕೆಯ ಗೊಂದಲದಿಂದ ಚುನಾವಣೆ ಕಾರ್ಯಕ್ಕೆ ಮಂಕು ಕವಿದಂತಾಗಿದೆ.

Advertisement

ಅಭಿವೃದ್ಧಿ ಕಾರ್ಯ ನಿಧಾನ: ಗ್ರಾಮ ಪಂಚಾಯಿತಿಗೆ ಆಡಳಿತ ಮಂಡಳಿ ನಿರ್ಮಾಣವಾಗದ ಕಾರಣ ಏಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿವೆ ಎಂಬುದು ಸ್ಥಳೀಯರ ಮಾತು. ಅಧಿ ಕಾರಿಗಳಿಗೆ ಸ್ಥಳೀಯ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರೆಯುತ್ತದೆ. ಆದ್ದರಿಂದ ಶೀಘ್ರ ಚುನಾವಣೆ ನಡೆದರೆ ಒಳ್ಳೆಯದು ಎನ್ನುತ್ತಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು.

ಲಕ್ಷಾನಟ್ಟಿ ಗ್ರಾಮ ಪಂಚಾಯತಿಯಲ್ಲಿ ಮೊದಲಿದ್ದ 2ಹಳ್ಳಿಗಳು ಲೋಕಾಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಂಡ ಹಿನ್ನೆಲೆ ಚುನಾವಣೆ ತಡವಾಗಿದೆ. ಸರ್ಕಾರದ ಮಟ್ಟದಲ್ಲಿ ನಿರ್ದೇಶನ ಬಂದ ಕೂಡಲೇ ಚುನಾವಣೆ ನಡೆಸುತ್ತೇವೆ. –ಕಿರಣ ಘೋರ್ಪಡೆ, ಆಡಳಿತಾಧಿಕಾರಿ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಕಾರ್ಯ ನಿರ್ವಾಹಕ ಅಧಿಕಾರಿ, ಮುಧೋಳ

ನಮ್ಮ ಗ್ರಾಮ ಪಂಚಾಯಿತಿ ಚುನಾವಣೆಗಿರುವ ಅಡತಡೆಗಳು ಶೀಘ್ರ ಬಗೆಹರಿದು ಚುನಾವಣೆ ನಡೆದರೆ ಆಡಳಿತ ಮಂಡಳಿಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಕ್ಕಂತಾಗುತ್ತದೆ. -ಬಾಬುಗೌಡ ಪಾಟೀಲ, ಗ್ರಾಪಂ ಮಾಜಿ ಸದಸ್ಯ, ಲಕ್ಷಾನಟ್ಟಿ

„ಗೋವಿಂದಪ್ಪ ತಳವಾರ/ ಸಲೀಂ ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next