ಮೈಸೂರು: ಸಮಾಜಕ್ಕೆ ವೈದ್ಯರಷ್ಟೇ ವಕೀಲರ ಅಗತ್ಯವಿದೆ. ದೇಹದ ಕಾಯಿಲೆಗೆ ವೈದ್ಯರು ಮದ್ದು ನೀಡಿದರೆ, ಸಮಾಜದ ಸಂಕಟಗಳಿಗೆ, ಬಿಕ್ಕಟ್ಟುಗಳಿಗೆ ವಕೀಲರು ಮಿಡಿಯಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಕೀಲರ ಪಾತ್ರ ಸದಾ ದೊಡ್ಡದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್. ರಘುನಾಥ್ ಅಭಿಪ್ರಾಯಪಟ್ಟರು.
ವಿದ್ಯಾವರ್ಧಕ ಕಾನೂನು ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೂರು ದಿನಗಳ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡು ನೀವು ಕಾನೂನು ವ್ಯಾಸಂಗ ಮಾಡಲು ಬಂದಿದ್ದೀರೋ ಗೊತ್ತಿಲ್ಲ. ಇಂದು ಸಮಾಜದ ಎಲ್ಲಾ ವೃತ್ತಿಗಳಲ್ಲಿ ನೈತಿಕತೆ ಕಾಣೆಯಾಗುತ್ತಿದೆ. ನ್ಯಾಯ ಪಡೆಯುವ ದಾರಿಗಳು ತೀರಾ ದುಬಾರಿಯಾಗಿ ಜನ ಸಾಮಾನ್ಯರು ನ್ಯಾಯಾಲಯಗಳಿಗೆ ಬರುವುದನ್ನೇ ಬಿಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಯುವ ವಕೀಲರು ತಮ್ಮ ವೃತ್ತಿಯನ್ನು ಸವಾಲಾಗಿ ಸ್ವೀಕರಿಸಿ ಸದಾ ದುರ್ಬಲರ ಪರವಾಗಿ ನಿಲ್ಲಬೇಕಿದೆ ಎಂದು ಸಲಹೆ ನೀಡಿದರು.
ಕಣ್ಣು-ಕಿವಿಯಾಗಿ ಸಂರಕ್ಷಕನ ರೀತಿ ವರ್ತಿಸಿ: ವ್ಯಕ್ತಿಯೊಬ್ಬನ ವೈಯಕ್ತಿಕ ಮತ್ತು ಸಮಾಜದ ಸಾಮೂಹಿಕ ಸಮಸ್ಯೆಗಳೆರಡು ನ್ಯಾಯಾಲಯಗಳಿಗೆ ಬರುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳು ಸಮಾಜದಲ್ಲಿ ಹೊಸಬಗೆಯ ಬಿಕ್ಕಟ್ಟುಗಳನ್ನು ಹುಟ್ಟುಹಾಕುತ್ತಿವೆ. ವಕೀಲರು ಆಸ್ತಿ, ತೆರಿಗೆ, ಕಾರ್ಪೊàರೆಟ್ ಸಮಸ್ಯೆಗಳಿಗೆ ಸ್ಪಂದಿಸುವಷ್ಟೇ ಈ ಕೌಟುಂಬಿಕ ಸಮಸ್ಯೆಗಳತ್ತಲೂ ಕಣ್ಣು ಹಾಯಿಸಬೇಕಿದೆ. ಏಕಕಾಲಕ್ಕೆ ವಕೀಲರು ವ್ಯಕ್ತಿಯೊಬ್ಬನ ವೈಯಕ್ತಿಕ ಸಮಸ್ಯೆ ಹಾಗೂ ಸಮಾಜದ ಬಿಕ್ಕಟ್ಟುಗಳಿಗೂ ಕಣ್ಣು-ಕಿವಿಯಾಗಿ ಸಂರಕ್ಷಕನ ರೀತಿ ವರ್ತಿಸಬೇಕಿದೆ ಎಂದು ಹೇಳಿದರು.
ಭಾಷೆಯ ಮೇಲೂ ಹಿಡಿತ ಸಾಧಿಸಬೇಕು: ಕನ್ನಡದಲ್ಲಿ ಹೆಚ್ಚು ಕಾನೂನು ಪುಸ್ತಕಗಳು, ಸುಪ್ರೀಂ ಕೋರ್ಟಿನ ತೀರ್ಪುಗಳು ಸಿಗದ ಈ ಸಂದರ್ಭದಲ್ಲಿ ನೀವು ಕಾನೂನು ಅಧ್ಯಯನಕ್ಕೆ ಬಂದಿದ್ದೀರಿ. ಈ ನಿಟ್ಟಿನಲ್ಲಿ ಇಂಗ್ಲಿಷ್ ಕಲಿಯುವ ಅನಿವಾರ್ಯವನ್ನು ನಾವೆಲ್ಲ ಇನ್ನಾದರೂ ಮನಗಾಣಬೇಕಿದೆ. ಕಲಿಯುವ ಅವಕಾಶಗಳ ಹೆಚ್ಚಿನ ಸಾಧ್ಯತೆಗಳನ್ನು ನಾವು ಇಂಗ್ಲಿಷ್ ಭಾಷೆಯಲ್ಲಿ ನೋಡಬಹುದು. ಇಂಗ್ಲಿಷ್ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಕಾನೂನು ವೃತ್ತಿಯನ್ನು ಗಂಭೀರವಾಗಿ ತೆಗೆದು ಕೊಂಡ ಪ್ರತಿಯೊಬ್ಬರಿಗೂ ಅವಶ್ಯಕ. ಕಾನೂನಿನ ಜತೆಗೆ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಮೇಲೂ ಹಿಡಿತ ಸಾಧಿಸಬೇಕಿದೆ. ಇದು ಅಗತ್ಯವೂ ಹೌದು, ಅನಿವಾರ್ಯವೂ ಹೌದು ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೀಪು, ಕಾನೂನು ಅಧ್ಯಯ ನದ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ ಇದ್ದರು.