ದಾವಣಗೆರೆ: ಕಾನೂನು ಪರಿಪೂರ್ಣತೆಯೊಂದಿಗೆ ವಕೀಲ ಸಮುದಾಯ ಉನ್ನತ ಮಟ್ಟದ ವೃತ್ತಿ ಶ್ರೇಷ್ಠತೆ ಮೆರೆಯಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಆಶಿಸಿದ್ದಾರೆ.
ಶನಿವಾರ ಜಿಲ್ಲಾ ವಕೀಲರ ಸಂಘದಿಂದ ನರಹರಿಶೇಠ ಸಭಾಭವನದಲ್ಲಿ ಏರ್ಪಡಿಸಿದ್ದ ವಕೀಲರ ವೃತ್ತಿ-ಒಂದು ಚಿಂತನ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಅಭ್ಯಾಸ, ಮಾಹಿತಿ ಇಲ್ಲದೆ ವಕೀಲ ವೃತ್ತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕಾನೂನು ಅರಿವೇ ಪ್ರಮುಖ ಸಾಮರ್ಥ್ಯ. ಹಾಗಾಗಿ ವಕೀಲ ಸಮುದಾಯ ಸದಾ ಅಧ್ಯಯನಶೀಲರಾಗಬೇಕು ಎಂದು ತಿಳಿಸಿದರು.
ಸದಾ ಕಲಿಕೆಯಿಂದ ಜ್ಞಾನ ಸಂಪಾದನೆಯ ಜೊತೆಗೆ ಸುಳಿವುಗಳು ತಿಳಿಯುತ್ತವೆ. ವಕೀಲಿ ವೃತ್ತಿ ಅತ್ಯುತ್ತಮ ವೃತ್ತಿ ಶ್ರೇಷ್ಠತೆ ಹೊಂದಿದೆ. ವಕೀಲಿ ವೃತ್ತಿಯಲ್ಲಿ ಶ್ರೇಷ್ಠ ಜೀವನ ಮೌಲ್ಯ ಅಳವಡಿಸಿಕೊಂಡಿರಬೇಕಾಗುತ್ತದೆ. ವೃತ್ತಿಯ ಬಗೆಗಿನ ಮಹತ್ವಾಕಾಂಕ್ಷೆಯು ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
ವಕೀಲರು ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡಲು ಸದಾ ಸಿದ್ಧರಿರಬೇಕು. ಭಾರತ ಸ್ವಾತಂತ್ರ್ಯ ಪಡೆಯಲು ಮುಂಚೂಣಿಯಲ್ಲಿದ್ದಂತಹ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಸಹ ವಕೀಲರಾಗಿದ್ದರು ಎಂಬುದು ಹೆಮ್ಮೆಯ ವಿಚಾರ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ದೇಶದಲ್ಲಿ ಪ್ರಮುಖ ಸ್ಥಾನದಲ್ಲಿದ್ದಂತಹ ಸರ್ದಾರ್ ವಲ್ಲಭಭಾಯಿ ಪಟೇಲ್, ಮೊಟ್ಟ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಸೇರಿದಂತೆ ಅನೇಕರು ವಕೀಲರು ಎಂದು ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಭಾರತಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ್ದಾರೆ. ಶ್ರೇಷ್ಠವಾದ ಸಂವಿಧಾನವನ್ನ ಬಹಳ ಯೋಗ್ಯವಾಗಿ ಇಟ್ಟುಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ದೇಶದ ವಿವಿಧ ನ್ಯಾಯಾಲಯಗಳಲ್ಲಿ 3 ಕೋಟಿಯಷ್ಟು ಕೇಸ್‌ಗಳು ವಿಳಂಬವಾಗುತ್ತಿವೆ. ನ್ಯಾಯಾಲಯಕ್ಕೆ ಸಮಯಕ್ಕೆ ಸರಿಯಾಗಿ ಬಾರದೇ ಇರುವುದು, ಕೌಶಲ್ಯ ಇಲ್ಲದೆ ಇರುವುದು, ಮೂಲಭೂತ ಸೌಲಭ್ಯ, ನ್ಯಾಯಾಧೀಶರ ಕೊರತೆ, ನ್ಯಾಯಾಲಯಕ್ಕೆ ನ್ಯಾಯಾಧೀಶರು ಹೋಗದಂತೆ ಕೇಸ್ ಹಾಕುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ಕೋರ್ಟ್‌ನಲ್ಲಿರುವ ಕೇಸ್‌ಗಳಿಗೆ ನ್ಯಾಯ ದೊರೆಯುವುದು ತಡವಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳು ಇದ್ದರೂ ಸಹ ಜನರು ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ಇದಕ್ಕೆ ಕಾರಣ ನ್ಯಾಯಾಲಯದ ಮೇಲೆ ಜನರ ವಿಶ್ವಾಸ ಇದೆ. ಅದನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್ ಜಿ., ಮಾತನಾಡಿ, ದಿನದಿಂದ ದಿನಕ್ಕೆ ವಕೀಲರ ಜವಾಬ್ದಾರಿ ಹೆಚ್ಚಾಗುತ್ತಿದೆ. ಎಲ್ಲಾ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ವಕೀಲ ಕೆಲಸ ಪ್ರಾರಂಭದಲ್ಲಿ ಸ್ವಲ್ಪ ಕಷ್ಟದಂತೆ ಕಂಡು ಬಂದರೂ ಮುಂದೆ ಸುಲಭವಾಗಲಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಉಪಾಧ್ಯಕ್ಷ ಎಚ್. ದಿವಾಕರ್, ಅನುಪಮ ಇತರರು ಇದ್ದರು.