ಶಹಾಪುರ: ನಗರ ನ್ಯಾಯಾಲಯದ ಆವರಣದಲ್ಲಿ ಹೊಸದಾಗಿ ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಿದೆ. ಆದರೆ ಕಟ್ಟಡವನ್ನು ನ್ಯಾಯಾಲಯದ ಆವರಣದ ಖಾಲಿ ಜಾಗದಲ್ಲಿ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಈ ಬಗ್ಗೆ ಗಮನಹರಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಯಾದಗಿರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಇ.ಎಸ್. ಇಂದಿರೇಶ ಅವರಿಗೆ 16ಕ್ಕೂ ಹೆಚ್ಚು ವಕೀಲರು ಸಹಿ ಮಾಡಿದ ಮನವಿ ಪತ್ರ ಸಲ್ಲಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ವಕೀಲರ ಕಟ್ಟಡ ನಿರ್ಮಾಣ ಮಾಡಿದರೆ ಜಾಗ ಇಕ್ಕಟ್ಟಾಗ ಲಿದೆ. ಅಲ್ಲದೇ ಈಗಾಗಲೇ ಶ್ರಮವಹಿಸಿ ಬೆಳೆಸಿದ 20ಕ್ಕೂ ಹೆಚ್ಚು ಮರಗಳನ್ನು ಕಡಿದು ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತವಲ್ಲ. ನ್ಯಾಯಾಲಯದ ಹೊರಗಡೆ ವಿಶಾಲ ಜಾಗವಿದೆ. ಅಲ್ಲಿ ಕಟ್ಟಡ ನಿರ್ಮಿಸಿದರೆ ಅನುಕೂಲವಾಗಲಿದೆ. ಖಾಲಿ ಜಾಗ ಅತಿಕ್ರಮಿಸುವುದನ್ನು ತಪ್ಪಿಸಿದಂತಾಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಹೀಗಾಗಿ ವಕೀಲರ ಸಂಘದಲ್ಲಿ ಒಂದು ಬಣ ನ್ಯಾಯಾಲಯದ ಹೊರಗಡೆ ಇರುವ ಖಾಲಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನೊಳಗೊಂಡ ಕಟ್ಟಡ ನಿರ್ಮಾಣವಾಗಲಿದೆ. ಇದರಿಂದ ಸಂಘಕ್ಕೂ ಆದಾಯ ಬರಲಿದೆ ಎಂಬ ವಿಚಾರ ವ್ಯಕ್ತಪಡಿಸಿದ್ದಾರೆ.
ತರಾತುರಿಯಲ್ಲಿ ಕಟ್ಟಡ ನಿರ್ಮಾಣ ಬೇಡ. ಸೂಕ್ತ ಸ್ಥಳವನ್ನು ಪರಿಶೀಲಿಸಿ, ವಕೀಲರಿಗೂ ಹಾಗೂ ಕಕ್ಷಿದಾರರಿಗೂ ಅನುಕೂಲವಾಗುವ ರೀತಿಯಲ್ಲಿ ಕಟ್ಟಡ ನಿರ್ಮಾಣವಾಗಬೇಕು. ಇದರ ಬಗ್ಗೆ ಲೋಕೋಪಯೋಗಿ ಎಂಜಿನಿಯರ್ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ವಕೀಲರಾದ ಉಮೇಶ ಮೂಡಬೂಳ, ಅಮರೇಶ ಇಟಗಿ, ಶರಣಪ್ಪ ಪ್ಯಾಟಿ, ದೇವರಾಜ ಚೆಟ್ಟಿ, ಜಯಲಕ್ಷ್ಮೀ ಬಸರಡ್ಡಿ, ಸತ್ಯಮ್ಮ ಹೊಸಮನಿ, ಮರೆಪ್ಪ ಹಳಿಸಗರ, ವಿಶ್ವನಾಥ ಫಿರಂಗಿ, ಮಲ್ಲಿಕಾರ್ಜುನ ಪೂಜಾರಿ, ಶಿವಪ್ಪ ನಾಯ್ದೋಡಿ, ನಿಂಗಣ್ಣ ಶಾರದಹಳ್ಳಿ ಮನವಿ ಪತ್ರದಲ್ಲಿ ಸಹಿ ಮಾಡಿದ್ದು, ಪ್ರಕಟಣೆಗೂ ತಿಳಿಸಿದ್ದಾರೆ.
ವಕೀಲರ ಸಂಘದ ಕಟ್ಟಡ ಕ್ರಿಯಾಯೋಜನೆ ಸಿದ್ಧಪಡಿಸುವ ಮುಂಚೆ ಸಂಘದ ಎಲ್ಲಾ ಸದಸ್ಯರ ಸಲಹೆ ಹಾಗೂ ಸೂಚನೆ ತೆಗೆದುಕೊಂಡು ನ್ಯಾಯಾಲಯ ಆವರಣದ ಒಳಗಡೆ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಎಲ್ಲ ಸದಸ್ಯರ ನಿರ್ಧಾರವಿದೆ ಎಂದು ವಕೀಲರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಾಂತಗೌಡ ವಿ. ಪಾಟೀಲ್ ಹಾಲಭಾವಿ ಸ್ಪಷ್ಟಪಡಿಸಿದ್ದಾರೆ.