ನವದೆಹಲಿ:ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ 16 ಮಂದಿಯಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತೆ, ವಕೀಲೆ ಸುಧಾ ಭಾರದ್ವಾಜ್ ಮೂರು ವರ್ಷಗಳ ಜೈಲುಶಿಕ್ಷೆಯ ನಂತರ ಗುರುವಾರ(ಡಿಸೆಂಬರ್ 09) ಜಾಮೀನಿನ ಮೇಲೆ ಬಿಡುಗಡೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು: 13 ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಚೋರರ ಬಂಧನ
ಡಿಸೆಂಬರ್ 1ರಂದು ಬಾಂಬೆ ಹೈಕೋರ್ಟ್ ಸುಧಾ ಭಾರದ್ವಾಜ್ ಗೆ ನೀಡಿರುವ ಡಿಫಾಲ್ಟ್ ಬೇಲ್ ಗೆ ತಡೆ ನೀಡಬೇಕೆಂಬ ಎನ್ ಐಎ ಮನವಿಯನ್ನು ಸುಪ್ರೀಂಕೋರ್ಟ್ ಎರಡು ಹಿಂದೆ ವಜಾಗೊಳಿಸಿತ್ತು. ಹೈಕೋರ್ಟ್ ನೀಡಿರುವ ಆದೇಶದಲ್ಲಿ ನಾವು ಮಧ್ಯಪ್ರವೇಶಿಸಬೇಕಾದ ಯಾವುದೇ ಕಾರಣ ನಮಗೆ ಕಂಡು ಬಂದಿಲ್ಲ ಎಂದು ತಿಳಿಸಿದ್ದ ಸುಪ್ರೀಂಕೋರ್ಟ್ ಎನ್ ಐಎ ಅರ್ಜಿಯನ್ನು ವಜಾಗೊಳಿಸಿತ್ತು.
ಸುಪ್ರೀಂಕೋರ್ಟ್ ನ ಜಸ್ಟೀಸ್ ಯು,ಯು ಲಿಲಿತ್, ಜಸ್ಟೀಸ್ ಎಸ್ ಆರ್ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಬೈಕುಲ್ಲಾ ಮಹಿಳಾ ಕಾರಾಗೃದಿಂದ ಸುಧಾ ಭಾರದ್ವಾಜ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರಾಗಿರುವ 16 ಮಂದಿಯಲ್ಲಿ ಸುಧಾ ಅವರು ಡಿಫಾಲ್ಟ್ ಜಾಮೀನು ಪಡೆದ ಮೊದಲಿಗರಾಗಿದ್ದಾರೆ.
ಈ ಮೊದಲು ಪುಣೆ ಪೊಲೀಸರು ಎಲ್ಗಾರ್ ಪರಿಷತ್ ಪ್ರಕರಣದ ತನಿಖೆ ನಡೆಸಿದ್ದರು. ನಂತರ ಎನ್ ಐಎಗೆ ಹಸ್ತಾಂತರಿಸಲಾಗಿತ್ತು. ಆರಂಭದಲ್ಲಿ ಸುಧಾ ಅವರನ್ನು ಪುಣೆಯ ಯರವಾಡ ಕಾರಾಗೃಹದಲ್ಲಿ ಇರಿಸಲಾಗಿತ್ತು. ಎನ್ ಐಎ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬಳಿಕ ಸುಧಾ ಅವರನ್ನು ಬೈಕುಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತೆ ಸುಧಾಗೆ ಎನ್ ಐಎ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಪಾಸ್ ಪೋರ್ಟ್ ಅನ್ನು ಕೋರ್ಟ್ ಗೆ ಹಾಜರುಪಡಿಸಬೇಕು ಹಾಗೂ ಮುಂಬೈಯಲ್ಲಿ ವಾಸ್ತವ್ಯ ಹೂಡಬೇಕು, ಮುಂಬೈ ನಗರ ಬಿಟ್ಟು ತೆರಳಬೇಕಾದರೆ ಅನುಮತಿ ಪಡೆಯಬೇಕೆಂದು ಷರತ್ತು ವಿಧಿಸಿರುವುದಾಗಿ ವರದಿ ತಿಳಿಸಿದೆ.