ಮುದ್ದೇಬಿಹಾಳ: ಮಹಾರಾಷ್ಟ್ರ ಸೇರಿದಂತೆ ಸೋಂಕಿನ ಪ್ರಭಾವ ಹೆಚ್ಚಾಗಿರುವ ರಾಜ್ಯಗಳಿಂದ ಜಿಲ್ಲೆಗೆ ಮರಳಿರುವ ವಲಸೆ ಕಾರ್ಮಿಕರು ಸಾರ್ವಜನಿಕರ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮಕ್ಕೆ ಸೂಕ್ತ ಸಾಂಸ್ಥಿಕ ಕ್ವಾರೆಂಟೈನ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರುವಾರ ಹೊರ ರಾಜ್ಯದಿಂದ ಬರುವವರಿಗೆ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ವ್ಯವಸ್ಥೆ ಅವಲೋಕಿಸಿದ ಅವರು, 14, 28 ದಿನಗಳ ಕ್ವಾರೆಂಟೈನ್‌ಗೊಳಗಾಗುವವರಿಗೆ ಎಲ್ಲ ಮೂಲಸೌಕರ್ಯ ಒದಗಿಸಲು ತಾಲೂಕಾಡಳಿತ ಕ್ರಮ ಕೈಕೊಳ್ಳುವಂತೆ ತಿಳಿಸಿದರು.
ಗರ್ಭಿಣಿಯರಿಗೆ ಲಾಡ್ಜಿಂಗ್ ವ್ಯವಸ್ಥೆ: ಮಹಾರಾಷ್ಟ್ರದ ಸಾವಂತವಾಡಿಯಿಂದ ಬಂದಿದ್ದ 40 ಕಾರ್ಮಿಕರಲ್ಲಿ 4-5 ಮಹಿಳೆಯರು ಗರ್ಭಿಣಿಯರಿದ್ದ ಮಾಹಿತಿ ಪಡೆದ ಶಾಸಕರು, ಅವರನ್ನು ಕ್ವಾರೆಂಟೈನ್ ಕೇಂದ್ರಕ್ಕೆ ಕಳುಹಿಸಬಾರದು. ಪಟ್ಟಣದ ಲಾಡ್ಜಿಂಗ್‌ನಲ್ಲಿ ಇರಿಸಲು ಕ್ರಮ ಕೈಕೊಳ್ಳಬೇಕು ಎಂದು ಶಾಸಕರು ತಹಸೀಲ್ದಾರ್ ಜಿ.ಎಸ್.ಮಳಗಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಸಿಪಿಐ ಆನಂದ ವಾಗಮೋಡೆ ಅವರಿಗೆ ಸೂಚಿಸಿದರು. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ವಿದ್ಯಾನಗರದಲ್ಲಿರುವ ಲಾಡ್ಜಿಂಗ್ ವ್ಯವಸ್ಥೆ ಪರಿಶೀಲನೆಗೆ ತೆರಳಿದರು.
ಕಾಲೇಜಿಗೆ ಭೇಟಿ ನೀಡಿದ್ದ ಶಾಸಕರು ಖುದ್ದು ತಾವೇ ಮುಂದೆ ನಿಂತು ಪುರಸಭೆ ಪೌರ ಕಾರ್ಮಿಕರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ ಇಡೀ ಕಾಲೇಜನ್ನು ಹೈಪೋಕ್ಲೋರೈಟ್ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸುವಂತೆ ನೋಡಿಕೊಂಡರು. ಪಟ್ಟಣದ ಹೊರವಲಯದಲ್ಲಿರುವ ಸೋಮಶೇಖರ ಶಿವಾಚಾರ್ಯ ಪದವಿಪೂರ್ವ ಕಾಲೇಜಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಮಹಾರಾಷ್ಟ್ರದಿಂದ ಬಂದಿರುವ ಕಾರ್ಮಿಕರನ್ನು ಅಲ್ಲಿ ಇರಿಸುವ ಕುರಿತು ಚರ್ಚಿಸಿದರು. ಈ ಕಾಲೇಜನ್ನು ಕ್ವಾರೆಂಟೈನ್ ಕೇಂದ್ರವನ್ನಾಗಿ ಮಾಡಲು ಕ್ರಮಕ್ಕೆ ಶಿಫಾರಸು ಮಾಡಿದರು.