ರಾಯಚೂರು: ಕೊರೊನಾದಂತ ಮಹಾ ಮಾರಿಯಿಂದ ದೂರವಿರಲು ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಬೇಕು ಎಂದು ನಗರ ಶಾಸಕ ಡಾ| ಶಿವರಾಜ್ ಪಾಟೀಲ್ ತಿಳಿಸಿದರು. ನೇತಾಜಿ ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಭದ್ರಕಾಳಿ ದೇವಸ್ಥಾನ ಸಮಿತಿ, ಕನ್ನಡ ಕಲಾ ಯುವ ವೇದಿಕೆ ಹಾಗೂ ಬಿಜೆಪಿ ನಗರ ಘಟಕದಿಂದ ಹಮ್ಮಿಕೊಂಡ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ 2ನೇ ಅಲೆಯಲ್ಲಿ ಸಾಕಷ್ಟು ಜನ ಮೃತಪಟ್ಟರು. ಇನ್ನೂ ಅನೇಕರಿಗೆ ಆಕ್ಸಿಜನ್ ಸಿಗದೇ ಸಾವು ಬದುಕಿನ ಮಧ್ಯೆ ಹೋರಾಡಿ ಬಂದಿದ್ದಾರೆ. ಇಂಥ ವೇಳೆ ಪ್ರಯೊಬ್ಬರು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯ. ಕೋವಿಡ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜತೆಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಈಗ ಕೋವಿಡ್ 3ನೇ ಅಲೆ ಆತಂಕ ಎದುರಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಎದುರಾಗಬಹುದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ ಕಡ್ಡಾಯವಾಗಿ ಬಳಸುವುದನ್ನು ಮರೆಯಬಾರದು. ಇದರಿಂದ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸಾಧ್ಯ ಎಂದರು.
ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಆರೋಗ್ಯ ಚನ್ನಾಗಿದ್ದರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಮಾತ್ರ ಸೋಂಕು ಎದುರಿಸಲು ಸಾಧ್ಯ. ಹೀಗಾಗಿ ಸರ್ಕಾರ ಉಚಿತವಾಗಿ ನೀಡುತ್ತಿರುವ ಕೋವಿಡ್ ಲಸಿಕೆಯನ್ನು ಎಲ್ಲರೂ ತಪ್ಪದೆ ಪಡೆಯಬೇಕು. ಈ ಬಗ್ಗೆ ಜಾಗೃತರಾಗಿ ಬೇರೆಯವರಿಗೂ ಲಸಿಕೆ ಹಾಕಿಸಿಕೊಳ್ಳಲು ತಿಳಿಹೇಳಿ ಎಂದರು. ನಗರಸಭೆ ಸದಸ್ಯ ಈ.ಶಶಿರಾಜ, ರಾಜೇಶ್ವರಿ ಗೋಪಿಶೆಟ್ಟಿ, ಸಾವಿತ್ರಿ ಪುರುಷೋತ್ತಮ, ಸಂಗೀತಾ ಸೇರಿ ಇತರರಿದ್ದರು.