ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರಕ್ಕೆ ಸ್ಪಂದಿಸಿರುವ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ “ಹೊಸ ಡೀಲ್’ ಕೊಡುಗೆಯನ್ನುನೀಡುವಂತೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದಾರೆ.
ಈ ಹೊಸ ಡೀಲ್‌ನ ಭಾಗವಾಗಿ ನಾವು ಸಂಸತ್ತಿನ ಎರಡೂ ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಕ್ ನಿಷೇಧಿಸುವ ಕಾನೂನು ಮತ್ತು ನಿಕಾಹ್ ಹಲಾಲಾ ನಿಷೇಧಿಸುವ ಕಾನೂನಿಗೆ ಅನುಮೋದನೆ ನೀಡಲು ಸಾಧ್ಯವಾಗುವುದು ಎಂಬ ವಿಶ್ವಾಸವನ್ನು ಸಚಿವ ರವಿ ಶಂಕರ್ ಪ್ರಸಾದ್ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗೆ ಮೀಸಲು ಪ್ರಾತಿನಿಧ್ಯವನ್ನು ಕಲ್ಪಿಸುವ ಮಸೂದೆಯನ್ನು ಮೂಲತಃ ಪ್ರಸ್ತಾಪಿಸಿದ್ದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ. ಇದನ್ನು ಹಿಂದಿನ ಯುಪಿಎ ಸರಕಾರ ಪುನರ್ ಪರಿಚಯಿಸಿದ ಸಂದರ್ಭದಲ್ಲೂ ಬಿಜೆಪಿ ಅದನ್ನು ಬೆಂಬಲಿಸಿತ್ತು ಮತ್ತು ಅದು ರಾಜ್ಯಸಭೆಯಲ್ಲಿ ಪಾಸಾಗಿತ್ತು ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಆದರೆ ಈ ಮಸೂದೆಯನ್ನು ಲೋಕಸಭೆಯಲ್ಲಿ ಪಾಸ್ ಮಾಡಿಸಿಕೊಳ್ಳಲು ಯುಪಿಎ ಸರಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡಲಿಲ್ಲ ಎಂದು ಸಚಿವ ರವಿ ಶಂಕರ್ ಪ್ರಸಾದ್ ಆರೋಪಿಸಿದರು.
Related Articles
ರಾಹುಲ್ ಗಾಂಧಿ ಅವರು ಈ ಮಸೂದೆಯನ್ನು ಬೆಂಬಲಿಸುವ ಉಮೇದು ತೋರಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಸ್ವಾಗತಿಸುತ್ತದೆ; ಆದರೆ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈ ಮಸೂದೆಯನ್ನು ಯಾಕೆ ಕೈಗೆತ್ತಿಕೊಳ್ಳಲಿಲ್ಲ ಎಂಬುದನ್ನು ಕೂಡ ಇದೇ ವೇಳೆ ತಿಳಿಯಬಯಸುತ್ತದೆ ಎಂದು ಹೇಳಿದರು.