ಬೆಂಗಳೂರು: ಕೋವಿಡ್ 19 ಸೋಂಕಿನ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರಾಲಿಗಳಿಗೆ ಅವಕಾಶ ನೀಡಿರುವ ವಿಚಾರ ಸಾಮಾಜಿಕವಾಗಿ ಟೀಕೆಗಳಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಇದನ್ನೆಲ್ಲ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿದ್ದಾರೆ.
ಕೋವಿಡ್ ಇದ್ದರೂ ಕೆಲವು ಘಟನೆಗಳು ನಡೆದಿವೆ. ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಲು ನಿಯಮ ತರುತ್ತೇವೆ. ಈ ಕುರಿತು ಪುನ: ಮಾರ್ಗಸೂಚಿ ಜಾರಿ ಮಾಡುತ್ತೇವೆ ಎಂದು ಸಿಎಂ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಲಾರಂಭದ ಬಗ್ಗೆಯೂ ಮಾಹಿತಿ ನೀಡಿದರು. ಸದ್ಯ 6,7,8 ನೇ ತರಗತಿಗಳು ಆರಂಭ ಮಾಡುತ್ತಿದ್ದೇವೆ. ಇದರ ಫಲಿತಾಂಶ ನೋಡಿಕೊಂಡು 1 ರಿಂದ 5 ನೇ ತರಗತಿಗಳ ಆರಂಭ ಬಗ್ಗೆ ಚರ್ಚೆ ಮಾಡುತ್ತೇವೆ. ಸದ್ಯದವರೆಗೂ 1-5 ನೇ ತರಗತಿಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.
ಇದನ್ನೂ ಓದಿ:ಕೋವಿಡ್ 19 : ಕಳೆದೊಂದು ದಿನದಲ್ಲಿ 42 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲು | 330 ಮಂದಿ ಬಲಿ
ಪ್ರವಾಹ ಹಾನಿ ಅಧ್ಯಯನ ತಂಡದ ಭೇಟಿಯ ಬಗ್ಗೆ ಮಾತನಾಡಿದ ಸಿಎಂ, ಕೇಂದ್ರ ಅಧ್ಯಯನ ತಂಡ, ಅಧಿಕಾರಿಗಳ ಜತೆ ಇವತ್ತು ಪ್ರಾಥಮಿಕ ಸಭೆ ಮಾಡುತ್ತೇನೆ. ಅಧ್ಯಯನ ತಂಡ ಪ್ರವಾಸ ಹೋಗಿ ಬಂದ ನಂತರವೂ ಸಭೆ ಮಾಡುತ್ತೇವೆ. ಕೇಂದ್ರದ ತಂಡದ ಜತೆ ನಮ್ಮ ಅಧಿಕಾರಿಗಳೂ ಪ್ರವಾಸ ಹೋಗುತ್ತಾರೆ. ನಮ್ಮಲ್ಲಿರುವ ವರದಿ, ಮಾಹಿತಿಗಳನ್ನು ಅವರಿಗೆ ಕೊಟ್ಟು ಹಾನಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಅತಿ ಹೆಚ್ಚು ಹಾನಿಯಾದ ಕಡೆ ಪ್ರವಾಸ ಮಾಡಲಿದ್ದು, ಎನ್ ಡಿಆರ್ ಎಫ್ ನಿಧಿಯಡಿ ನಮಗೆ ಸಿಗಬೇಕಾದ ಅನುದಾನ ಸಿಗುತ್ತದೆ ಎಂದರು.