Advertisement
ವರ್ಷಾಂತ್ಯ ಮತ್ತು ನೂತನ ವರ್ಷಾಚರಣೆ ಅಂಗವಾಗಿ ಪ್ರವಾಸಿ ತಾಣಗಳಲ್ಲಿ ದಟ್ಟಣೆ ಸಹಜವಾಗಿ ಉಂಟಾಗಲಿದೆ. ಇದರಿಂದ ಉಂಟಾಗ ಬಹುದಾದ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್ ಕರ್ಫ್ಯೂ ವಿಧಿಸಿದೆ. ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸಾಮರ್ಥ್ಯದ ಶೇ.50ರಷ್ಟು ಮಾತ್ರ ಅವಕಾಶ ಕಲ್ಪಿಸಿ ಸಮಾರಂಭ, ಕಾರ್ಯಕ್ರಮ, ಪಾರ್ಟಿಗಳಿಗೆ ನಿರ್ಬಂಧ ಹೇರಿದೆ. ಆದರೆ ಹೊಟೇಲ್, ರೆಸಾರ್ಟ್‌ಗಳಲ್ಲಿ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಶೇ.50ರ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಸರಕಾರದ ಕಾಳಜಿ ಅರ್ಥ ಮಾಡಿ ಕೊಂಡು ನಿಯಮ ಪಾಲನೆ ಇಂದಿನ ಅಗತ್ಯವೂ ಹೌದು.
Related Articles
Advertisement
ದೇಶದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ಕೇಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಸೋಮವಾರ ಮತ್ತು ಮಂಗಳವಾರ ದಿನವೊಂದಕ್ಕೆ 100 ಕೇಸ್‌ಗಳು ಹೆಚ್ಚಳವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಒಮಿಕ್ರಾನ್ ಕೇಸ್‌ಗಳೇ ಹೆಚ್ಚಾಗುವ ಆತಂಕವೂ ಇದೆ. ಹೀಗಾಗಿ ನೈಟ್ ಕರ್ಫ್ಯೂವಿನಂಥ ಕಠಿನ ಕ್ರಮಗಳ ಜತೆಗೆ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವ ಕುರಿತಂತೆಯೂ ಅರಿವು ಮೂಡಿಸಬೇಕು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ನೈಟ್ ಕರ್ಫ್ಯೂವಿಗೆ ಜನರ ವಿರೋಧವನ್ನು ನಿರ್ಲಕ್ಷಿಸಬಾರದು. ಇಲ್ಲಿ ಜನತೆ ಕೇಳುತ್ತಿರುವ ಪ್ರಶ್ನೆ, ಹಗಲು ಹೊತ್ತಲ್ಲಿ ಹೆಚ್ಚು ಜನ ಸೇರಲು ಅವಕಾಶ ಮಾಡಿಕೊಟ್ಟು ಕೇವಲ ರಾತ್ರಿ ವೇಳೆ ನಿರ್ಬಂಧ ಹಾಕಿದರೆ ಸಾಕೇ ಎನ್ನುವುದು. ಹೊಟೇಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ವ್ಯವಹಾರವಾಗುವುದು ಸಂಜೆಯ ಅನಂತರವೇ.ಈ ನಿಟ್ಟಿನಲ್ಲಿ ಸರಕಾರ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಸಮಸ್ಯೆಯನ್ನು ಆಲಿಸುವುದೂ ಅಗತ್ಯವಾಗಿದೆ. ರಾಜ್ಯ ಸರಕಾರ ಜ.3 ರಿಂದ 15 ರಿಂದ 18 ವರ್ಷದವರಿಗೆ ಲಸಿಕೆ ನೀಡಲು ಹಾಗೂ 60 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಸ್ವಾಗತಾರ್ಹ. ಇದಕ್ಕೂ ಸಾರ್ವಜನಿಕರು ಸಹಕಾರ ನೀಡಿ ಯಶಸ್ವಿಗೊಳಿಸಬೇಕು. ಆಗ ಮಾತ್ರ ಕೊರೊನಾ ಅಥವಾ ರೂಪಾಂತರಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.