ಕಲಬುರಗಿ: ”ಕರ್ನಾಟಕದ ಜನತೆ ಕೋಪಗೊಂಡಿದ್ದಾರೆ, ಎಚ್ಚೆತ್ತುಕೊಂಡಿದ್ದಾರೆ. ಕಾಂಗ್ರೆಸ್ ಎಂದಿಗೂ ತನ್ನ ದಾರಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ.ನೀವು ಕಾಂಗ್ರೆಸ್‌ಗೆ ಎಷ್ಟೇ ಅವಕಾಶಗಳನ್ನು ನೀಡಿದರೂ ಅದು ಎಂದಿಗೂ ಬದಲಾಗುವುದಿಲ್ಲ, ಅದು ಎಂದಿಗೂ ನ್ಯಾಯವನ್ನು ಖಚಿತಪಡಿಸುವುದಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.
ಕಲಬುರಗಿ ನಗರದ ಎನ್ ವಿ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ”ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಲ್ಲಿನ ಸರಕಾರ ಸಮಾಜ ವಿರೋಧಿಗಳಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ.ಕಾಂಗ್ರೆಸ್ ಕರ್ನಾಟಕವನ್ನು ತನ್ನ ಕುಟುಂಬದ ಎಟಿಎಂ ಮಾಡಿಕೊಂಡಿದೆ.ಕರ್ನಾಟಕದ ಜನರ ಸಂಪಾದನೆಯನ್ನು ಪಕ್ಷ ಮತ್ತು ಕುಟುಂಬದ ಖರ್ಚಿಗೆ ಇಲ್ಲಿಂದಲೇ ಪೂರೈಸಲಾಗುತ್ತಿದೆ” ಎಂದು ಆರೋಪಿಸಿದರು.
”ಕಲ್ಲಿದ್ದಲಿನಿಂದ ಮಸಿಯನ್ನಾದರೂ ತೆಗೆಯಬಹುದು ಆದರೆ ಕಾಂಗ್ರೆಸ್ ನಿಂದ ಭ್ರಷ್ಟಾಚಾರ ತೊಲಗಲು ಸಾಧ್ಯವಿಲ್ಲ.ಈ ಕುಟುಂಬ ಸದಸ್ಯರಿಗೆ ಭ್ರಷ್ಟಾಚಾರವೇ ಆಮ್ಲಜನಕ.ಭ್ರಷ್ಟಾಚಾರವಿಲ್ಲದೆ ಈ ಜನ ರಾಜಕೀಯದಲ್ಲಿ ಉಸಿರಾಡಲೂ ಸಾಧ್ಯವಿಲ್ಲ” ಎಂದು ಕಿಡಿ ಕಾರಿದರು.
”ಎಷ್ಟೇ ಬಟ್ಟೆ ಬದಲಾಯಿಸಿದರೂ ನಡೆಗಳು ಬದಲಾಗದಂತಹ ಪಕ್ಷ ಕಾಂಗ್ರೆಸ್. ಅದಕ್ಕೇ ಕರ್ನಾಟಕದಲ್ಲಿ ಜನ ಎಚ್ಚೆತ್ತುಕೊಂಡಿದ್ದಾರೆ, ಆಕ್ರೋಶಿತರಾಗಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಸಾರ್ವಜನಿಕರು ಭ್ರಮನಿರಸನಗೊಂಡಿರುವುದು ಕಾಂಗ್ರೆಸ್ಸಿನ ಸತ್ಯವನ್ನು ಜನರು ತಿಳಿದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದರು.
”ಕಳೆದ 2 ದಿನಗಳಲ್ಲಿ, ನಾನು ದಕ್ಷಿಣ ಭಾರತದ 4 ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ.ಅದು ತಮಿಳುನಾಡಿನ ಕನ್ಯಾಕುಮಾರಿಯಾಗಿರಲಿ ಅಥವಾ ಕೇರಳದ ಪತ್ತನಂತಿಟ್ಟಾಗಿರಲಿ, ಬಿಜೆಪಿಯ ಬಗ್ಗೆ ಜನರಲ್ಲಿ ಅಪಾರ ಪ್ರೀತಿ ಮತ್ತು ಉತ್ಸಾಹವು ಹೊರಹೊಮ್ಮುವುದನ್ನು ನಾನು ನೋಡಿದ್ದೇನೆ” ಎಂದರು.