ಗುವಾಹಟಿ: ನಾಗಾಲ್ಯಾಂಡ್‌ನಲ್ಲಿ ಕೋವಿಡ್ 19 ಸೋಂಕು ಲಾಕ್‌ಡೌನ್‌ನಿಂದಾಗಿ 3 ತಿಂಗಳ ಕಾಲ ಸ್ಥಗಿತಗೊಂಡಿದ್ದ ವಸೂಲಿ ದಂಧೆ ಮತ್ತೆ ಸಕ್ರಿಯಗೊಂಡಿದೆ.
ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ಗಾಲ್ಯಾಂಡ್ (ಎನ್‌ಎಸ್‌ಸಿಎನ್) ಮತ್ತು ಅದರ ಅಂಗ ಸಂಸ್ಥೆಗಳ ಸದಸ್ಯರು ಈಗ ಶಸ್ತ್ರಸಜ್ಜಿತರಾಗಿ ಬೀದಿಗಿಳಿದಿದ್ದು, ಜನರ ಮೇಲೆ ‘ಹೆಚ್ಚುವರಿ ತೆರಿಗೆ’ಯ ಹೊರೆ ಹೇರುತ್ತಿದ್ದಾರೆ.
ಈ ಪರ್ಯಾಯ ಸರಕಾರಕ್ಕೆ ಕೂಡಲೇ ಅಂತ್ಯಹಾಡಿ ಎಂದು ನಾಗಾಲ್ಯಾಂಡ್ ಸಿಎಂ ನೈಫ್ಯೂ ರಿಯೋಗೆ ರಾಜ್ಯಪಾಲ ಆರ್.ಎನ್. ರವಿ ಖಾರವಾದ ಪತ್ರವನ್ನೂ ಬರೆದಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಎಸ್‌ಎನ್‌ಸಿಎನ್‌ನ ಕ್ಯಾಂಪ್ ಗಳಲ್ಲಿ ನೆಲೆಸಿದ್ದವರಿಗೆ ಪಡಿತರ ಹಾಗೂ ಇತರೆ ಅವಶ್ಯಕ ವಸ್ತುಗಳ ತೀವ್ರ ಅಭಾವ ತಲೆದೋರಿತ್ತು. ಜತೆಗೆ, ಪಾಸ್ ಇದ್ದರಷ್ಟೇ ಸಂಚರಿಸಲು ಅವಕಾಶವಿದ್ದ ಕಾರಣ ಎಲ್ಲೂ ಹೋಗಲಾಗದೇ ಶಿಬಿರಗಳಿಗೇ ಸೀಮಿತವಾಗಬೇಕಿತ್ತು. ಆದರೆ, ಈ ತಿಂಗಳು ನಿರ್ಬಂಧ ತೆರವಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿರುವ ಕಾರಣ, ಮತ್ತೆ ಬಂಡುಕೋರರು ವಸೂಲಿಗೆ ಇಳಿದಿದ್ದಾರೆ.
ಉಪ್ಪಿನಿಂದ ಹಿಡಿದು ನಿರ್ಮಾಣ ಸಲ ಕರಣೆಗಳವರೆಗೆ ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ವಸ್ತುವಿನ ಮೇಲೂ ಈ ಬಂಡುಕೋರರು ಅಕ್ರಮ ತೆರಿಗೆ ವಿಧಿಸುತ್ತಿದ್ದು, ಜನರನ್ನು ಹೆದರಿಸಿ ಬೆದರಿಸಿ ಹಣ ವಸೂಲು ಮಾಡುತ್ತಿದ್ದಾರೆ. ಈ ತಂಡಗಳು ದಿನಕ್ಕೆ 1 ಲಕ್ಷ ರೂ.ವರೆಗೆ ಸಂಪಾದಿಸುತ್ತಿದ್ದು, ಪ್ರತಿಯೊಂದು ಪ್ರಯಾಣಿಕ ವಾಹನಗಳಿಂದಲೂ ದಿನಕ್ಕೆ 3 ರಿಂದ 7 ಸಾವಿರ ರೂ. ದೋಚುತ್ತಿದ್ದಾರೆ. ಈ ಕುರಿತು ಪೀಪಲ್ಸ್ ಆ್ಯಕ್ಷನ್ ಕಮಿಟಿ (ಪಿಎಸಿ) ಸೇರಿದಂತೆ ನಾಗರಿಕ ಸಮಾಜದ ಸಂಸ್ಥೆಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಿಎಂಗೆ ಪತ್ರ ಬರೆದಿರುವ ರಾಜ್ಯಪಾಲರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ.