Advertisement

ಲವ್ವಿಗೆ ಶುಕ್ರದೆಸೆ, ರಾಜಕೀಯಕ್ಕೆ ವಕ್ರದೆಸೆ

11:09 AM Jan 10, 2017 | Team Udayavani |

ಹೊಸಬರಿಗೆ ಶುಕ್ರದೆಸೆ ಶುರುವಾಗಿದೆ. ಹೊಸಬರ ಹೊಸ ಕಾನ್ಸೆಪ್ಟ್ನ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನಿಲ್ಲುತ್ತಿವೆ, ಗೆಲ್ಲುತ್ತಿವೆ. ಹಾಗಾಗಿ, ಶುಕ್ರದೆಸೆ ಸ್ಟಾರ್ಟ್‌ ಎನ್ನಬಹುದು. ಈಗ ಈ ಶುಕ್ರದೆಸೆಯೇ ಸಿನಿಮಾವೊಂದರ ಟೈಟಲ್‌ ಆಗಿದೆ. ಅದು “ಶುಕ್ರದೆಸೆ ಸ್ಟಾರ್ಟ್‌’. ಹೌದು, “ಶುಕ್ರದೆಸೆ ಸ್ಟಾರ್ಟ್‌’ ಎನ್ನುವ ಸಿನಿಮಾವೊಂದು ಆರಂಭವಾಗುತ್ತಿದೆ. ಜೋಸೆಫ್ ನೀನಾಸಂ ಎನ್ನುವವರು ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

Advertisement

ಇವರಿಗೆ ನಿರ್ದೇಶನ ಹೊಸದು. ಆದರೆ, ರಂಗಭೂಮಿ ಹೊಸದಲ್ಲ. ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಜೋಸೆಫ್ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ, ಮಲಯಾಳಂ, ಹಿಂದಿ, ಇಂಡೋ ಯುರೋಪಿಯನ್‌ ಮುಂತಾದ ಹಲವು ಸಿನಿಮಾ ಕ್ಷೇತ್ರಗಳಲ್ಲಿ ಜೋಸೆಫ್ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಇಂದು ಕನ್ನಡ ಚಿತ್ರರಂಗದಲ್ಲಿ ಬಿಝಿ ನಟರಾಗಿರುವ ಅನೇಕರಿಗೆ ನಟನೆಯ ತಗರಬೇತಿ ನೀಡಿದ್ದಾರೆ.

ಇಂತಿಪ್ಪ ಜೋಸೆಫ್ ಈಗ “ಶುಕ್ರದೆಸೆ ಸ್ಟಾರ್ಟ್‌’ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಹೋಬಳಿಯೊಂದರಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ಕಥೆ ಹೆಣೆದಿದ್ದು, ರಾಜಕೀಯ ಹಿನ್ನೆಲೆಯಲ್ಲಿ ಸಾಗುವ ಲವ್‌ಸ್ಟೋರಿಯೊಂದನ್ನು ಹೇಳಲು ಹೊರಟಿದ್ದಾರೆ. ಸಣ್ಣ ಊರಿನಲ್ಲಿ ನಡೆಯುವ ರಾಜಕೀಯ ಸಂಘರ್ಷದಲ್ಲಿ ಅಮಾಯಕರ ಜೀವನ ಹೇಗೆ ಹಾಳಾಗುತ್ತದೆ. ಆ ರಾಜಕೀಯ ಕಿಚ್ಚಿಗೆ ಹೇಗೆ ಅವರು ತಮ್ಮ ಜೀವನ ಕಳೆದುಕೊಳ್ಳುತ್ತಾರೆಂಬ ಅಂಶದ ಜೊತೆಗೆ ಅಮಾಯಕರ ರಿವೆಂಜ್‌ಸ್ಟೋರಿಯನ್ನು ಇಲ್ಲಿ ಹೇಳಲಾಗಿದೆಯಂತೆ.

“ಚಿತ್ರದಲ್ಲಿ ಕಥೆಯೇ ಹೀರೋ. ಹೊಸ ಬಗೆಯ ನಿರೂಪಣೆಯೊಂದಿಗೆ ಈ ಸಿನಿಮಾವನ್ನು ಕಟ್ಟಿಕೊಡಲಿದ್ದೇನೆ. ಅದಕ್ಕಾಗಿ ಸಾಕಷ್ಟು ಪೂರ್ವತಯಾರಿ ಕೂಡಾ ನಡೆಯುತ್ತಿದೆ’ ಎನ್ನುತ್ತಾರೆ ಜೋಸೆಫ್. ಅನಿಲ್‌ ನಾಯಕರಾಗಿ ನಟಿಸುತ್ತಿದ್ದಾರೆ. ಇವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ.

ಮುಂಬೈನ ಅನುಪಮ್‌ ಖೇರ್‌ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದಿರುವ ಅನಿಲ್‌ ಈಗಾಗಲೇ ತಮಿಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಅಮೃತಾ ಈ ಚಿತ್ರದ ನಾಯಕಿ. ಕನ್ನಡ ಮೂಲದ ಮುಂಬೈ ಬೆಡಗಿ ಅಮೃತಾಗೂ ಇಲ್ಲಿ ಒಳ್ಳೆಯ ಪಾತ್ರವಿದೆಯಂತೆ. ಚಿತ್ರವನ್ನು ವಿಮಲ್‌ ಜೈನ್‌ ಹಾಗೂ ಅರ್ಜುನ್‌ ಗೌಡ ನಿರ್ಮಿಸುತ್ತಿದ್ದು, ಬಿಜಿ ಬಾಳ್‌ ಅವರ ಸಂಗೀತ ಚಿತ್ರಕ್ಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next