ಲಂಡನ್: ಇಂಗ್ಲೆಂಡಿನ ಮೂರು ಐಸಿಸಿ ವಿಶ್ವಕಪ್ ವಿಜೇತ ತಂಡದ ಸದಸ್ಯೆಯಾಗಿದ್ದ ಆಫ್ ಸ್ಪಿನ್ನರ್ ಲಾರಾ ಮಾರ್ಷ್ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.
ಕಳೆದ ಡಿಸೆಂಬರ್‌ನಲ್ಲಿ ಲಾರಾ ಮಾರ್ಷ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದರು. ಆದರೆ ವನಿತೆಯರ “ದಿ ಹಂಡ್ರೆಡ್’ ಕ್ರಿಕೆಟ್ ಸರಣಿಯಲ್ಲಿ ಆಡುವ ಯೋಜನೆ ಹಾಕಿಕೊಂಡಿದ್ದರು. ಕೋವಿಡ್ ನಿಂದಾಗಿ ಈ ಪಂದ್ಯಾವಳಿ 2021ಕ್ಕೆ ಮುಂದೂಡಲ್ಪಟ್ಟ ಬಳಿಕ ಲಾರಾ ಮಾರ್ಷ್ ಕ್ರಿಕೆಟಿಗೆ ಪರಿಪೂರ್ಣ ವಿದಾಯ ಹೇಳುವ ತೀರ್ಮಾನ ತೆಗೆದುಕೊಂಡರು.
“ಈ ವರ್ಷದ ದಿ ಹಂಡ್ರೆಡ್ ಕ್ರಿಕೆಟ್ ಪಂದ್ಯಾವಳಿ ಮುಂದೂಡಲ್ಪಟ್ಟ ಬಳಿಕ ವಿದಾಯಕ್ಕೆ ಇದೇ ಸೂಕ್ತ ಸಮಯ ಎಂದು ನಿರ್ಧರಿಸಿದೆ’ ಎಂಬುದಾಗಿ ಲಾರಾ ಮಾರ್ಷ್ ಟ್ವೀಟ್ ಮಾಡಿದ್ದಾರೆ.
33 ವರ್ಷದ ಲಾರಾ ಮಾರ್ಷ್ 2009 ಮತ್ತು 2017ರ ವನಿತಾ ಏಕದಿನ ವಿಶ್ವಕಪ್, 2009ರ ವನಿತಾ ಟಿ20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ಆಟಗಾರ್ತಿಯಾಗಿದ್ದರು. 9 ಟೆಸ್ಟ್, 103 ಏಕದಿನ ಹಾಗೂ 67 ಟಿ20 ಪಂದ್ಯಗಳಿಂದ ಒಟ್ಟು 217 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿದೆ. ಕೆಂಟ್, ಸಸೆಕ್ಸ್ ಕೌಂಟಿ, ಬಿಗ್ ಬಾಶ್ ಲೀಗ್‌ನಲ್ಲಿ ಸಿಡ್ನಿ ಸಿಕ್ಸರ್ ತಂಡದ ಪರ ಆಡಿದ್ದರು.
2006ರಲ್ಲಿ ಪೇಸ್ ಬೌಲರ್ ಆಗಿ ಟೆಸ್ಟ್ ಪದಾರ್ಪಣೆ ಮಾಡಿದ ಲಾರಾ, ಬಳಿಕ ಸ್ಪಿನ್ ಬೌಲರ್ ಆಗಿ ಪರಿವರ್ತನೆಗೊಂಡದ್ದೊಂದು ವಿಸ್ಮಯ.