ಶೃಂಗೇರಿ: ಶ್ರೀ ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದ ಪಡೆದು ಶ್ರೀ ಶಂಕರರ ಬಗ್ಗೆ ಇರುವ ಗ್ರಂಥಗಳನ್ನು ಆಧರಿಸಿ “ಆಚಾರ್ಯ ಶ್ರೀಶಂಕರ’ ಚಲನಚಿತ್ರ ಕಥೆ ಬರೆಯಲಾಗಿದೆ ಎಂದು ಚಿತ್ರದ ನಿರ್ಮಾಪಕ ವೈ.ಎನ್.ಶರ್ಮ ಹೇಳಿದರು.
ಶ್ರೀ ಶಾರದಾ ಪೀಠದ ನರಸಿಂಹವನದ ತುಂಗಾ ನದಿ ದಂಡೆ ಮೇಲೆ ನೂತನ ಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀ ಶಂಕರಾಚಾರ್ಯರು ಹಾಗೂ ಅವರು ಬೋಧಿಸಿದ ತತ್ವಗಳು ಸಾಮಾನ್ಯ ಜನರಿಗೂ ತಲುಪುವ ಉದ್ದೇಶದಿಂದ ಆಚಾರ್ಯ ಶ್ರೀಶಂಕರ’ ಚಲನಚಿತ್ರಕ್ಕೆ ಚಾಲನೆ ನೀಡಲಾಗಿದೆ.
ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲು ಸಿದ್ಧವಾಗಲಿದೆ. ಚಿತ್ರಕಥೆ ತಯಾರಿಸಿ ಜಗದ್ಗುರುಗಳಿಗೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗಿದೆ. ಚಿತ್ರ ವಿಶ್ವ ಸಂಸ್ಥೆಯ ಮನ್ನಣೆ ಪಡೆಯಬೇಕು ಎಂಬುದು ನಮ್ಮ ಆಶಯ. ಶ್ರೀ ಶಂಕರಾಚಾರ್ಯರು ಸಂಚರಿಸಿದ ದೇಶದ ವಿವಿಧ ಭಾಗ ಹಾಗೂ ನೇಪಾಳದಲ್ಲೂ ಚಿತ್ರೀಕರಿಸಲಾಗುತ್ತದೆ ಎಂದರು.
ಚಿತ್ರದ ನಿರ್ದೇಶಕ ರಾಜಾ ರವಿಶಂಕರ್ ಮಾತನಾಡಿ, ಯಮನೂರ್ ಕ್ರಿಯೇಷನ್ಸ್ ಚಿತ್ರ ನಿರ್ಮಿಸುತ್ತಿದ್ದು, ಶ್ರೀ ಶಂಕರಾಚಾರ್ಯರ ಜೀವನದ ಸಮಗ್ರ ಚಿತ್ರಣ ನೀಡ ಬೇಕಿದೆ. ಕಲಾವಿದ ಶಿರಸಿಯ ರವೀಂದ್ರಭಟ್ ಶ್ರೀ ಶಂಕರಾ ಚಾರ್ಯರ ಪಾತ್ರ ಮಾಡಲಿದ್ದು, ಬೆಂಗಳೂರಿನ ಸಿದ್ಧಾರೂಢ ಆಶ್ರಮದ ಡಾ.ಆರೂಢ ಭಾರತೀ ಸ್ವಾಮೀಜಿ ಸಂಸ್ಕೃತ ಭಾಷೆಯ ಸಂಭಾಷಣೆ ಬರೆದಿದ್ದಾರೆ.
ಮನೋಹರ್ ಸಂಗೀತ ನೀಡಿದ್ದು, 278 ಪಾತ್ರಧಾರಿಗಳು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನಟರಾದ ರಾಮಕೃಷ್ಣ, ರಮೇಶ್ ಭಟ್, ವಿನಯಪ್ರಸಾದ್ ಮತ್ತಿತರರು ಅಭಿನಯಿಸಲಿದ್ದಾರೆ ಎಂದರು. ಸಿದ್ಧಾರೂಢ ಆಶ್ರಮದ ಡಾ.ಆರೂಢ ಭಾರತೀ ಸ್ವಾಮೀಜಿ ಮಾತನಾಡಿದರು. ಶ್ರೀಮಠದ ಆಡಳಿತಾಧಿಕಾರಿ ಗೌರಿಶಂಕರ್ ಚಿತ್ರಕ್ಕೆ ಚಾಲನೆ ನೀಡಿದರು.