Advertisement

ಎಸ್‌ಬಿಐ ಗೃಹಸಾಲ ಉತ್ಸವಕ್ಕೆ ಚಾಲನೆ

11:59 AM Aug 19, 2018 | Team Udayavani |

ಬೆಂಗಳೂರು: ಸಾರ್ವಜನಿಕ ಕ್ಷೇತ್ರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸೇಂಟ್‌ ಮಾರ್ಕ್ಸ್ ರಸ್ತೆಯ ಸ್ಥಳೀಯ ಕೇಂದ್ರ ಕಚೇರಿ (ಎಲ್‌ಎಚ್‌ಒ) ಆವರಣದಲ್ಲಿ ಎರಡು ದಿನಗಳ (ಆ.18 ಮತ್ತು 19ರಂದು) ಗೃಹಸಾಲ ಉತ್ಸವ ಹಮ್ಮಿಕೊಂಡಿದೆ.

Advertisement

ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಅಭಿಜಿತ್‌ ಮಜುಂದಾರ್‌ ಅವರು ಗೃಹಸಾಲ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಎರಡು ದಿನಗಳ ಈ ಉತ್ಸವದಲ್ಲಿ ಗೃಹ ಸಾಲ ಮಾತ್ರವಲ್ಲದೆ, ವಾಹನ ಹಾಗೂ ಇತರ ಸಾಲಗಳನ್ನು ಸಹ ನೀಡಲಾಗುತ್ತದೆ.

ಅತ್ಯಲ್ಪ ಸಮಯದಲ್ಲಿ ಸ್ಥಳದಲ್ಲೇ ಸಾಲ ಮಂಜೂರು ಮಾಡುವುದು ಉತ್ಸವ ವಿಶೇಷವಾಗಿದೆ. ಹಾಗೇ ಗ್ರಾಹಕರು ಬಡ್ಡಿ ದರದ ಸಹಾಯಧನ ಕೂಡ ಪಡೆಯಲಿದ್ದಾರೆ ಎಂದರು. ಈ ಸಾಲ ಉತ್ಸವ ಎಸ್‌ಬಿಐ ಬೆಂಗಳೂರು ವೃತ್ತದ ಅತಿ ದೊಡ್ಡ ವಹಿವಾಟು ಪ್ರಕ್ರಿಯೆಯಾಗಿದ್ದು, ಒಂದು ರೀತಿಯಲ್ಲಿ ನಗರದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಸ್ಫೂರ್ತಿಯೂ ಆಗಿದೆ.

ನೋಟು ಅಮಾನ್ಯ, ಜಿಎಸ್‌ಟಿ ಮತ್ತು ರೆರಾ ಜಾರಿ ನಂತರ ಗ್ರಾಹಕರಲ್ಲಿ ಆಸ್ತಿ ಖರೀದಿ ಬಗ್ಗೆ ನಂಬಿಕೆ ಹೆಚ್ಚಾಗಿದೆ. ಅಲ್ಲದೆ, ರಿಯಲ್‌ ಎಸ್ಟೇಟ್‌ ಕ್ಷೇತ್ರವೂ ನಿಯಂತ್ರಣಕ್ಕೆ ಬಂದಿರುವುದರಿಂದ ಸ್ವಂತ ಮನೆ, ಅಪಾರ್ಟ್‌ಮೆಂಟ್‌ ಅಥವಾ ಸ್ಥಿರಾಸ್ತಿ ಮೇಲೆ ಹೂಡಿಕೆ ಮಾಡುವವರಿಗೆ ಇದು ಸೂಕ್ತ ಕಾಲವೂ ಆಗಿದೆ. ಕಳೆದ ಬಾರಿ ಆಯೋಜಿಸಿದ್ದ ಗೃಹಸಾಲ ಉತ್ಸವದಲ್ಲಿ 1800ಕ್ಕೂ ಅಧಿಕ ಗ್ರಾಹಕರು ಇದರ ಲಾಭ ಪಡೆದಿದ್ದರು.

ಉತ್ಸವದಲ್ಲಿ ಎಲ್ಲ ರೀತಿ ಮನರಂಜನೆ, ಕಾರ್‌ ಎಕ್ಸ್‌ಪೋ, ಫುಡ್‌ ಕೋರ್ಟ್‌, ಸಂಗೀತ ಸಂಜೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರ ವಾಹನಗಳಿಗೆ ಎಸ್‌ಬಿಐ ಆವರಣದ ಪಕ್ಕದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಬ್ಯಾಂಕಿನ ಜಿಎಂ (ನೆಟ್‌ವರ್ಕ್‌-3) ಮಂಜು ಎಸ್‌. ಬೊಲಕಣಿ, ಜಿಎಂ ಇನ್ಫಿನಿಟಿ ವ್ಯವಸ್ಥಾಪಕ ನಿರ್ದೇಶಕ ಗುಲಾಂ ಮುಸ್ತಫಾ, ಜಿಎಂ ನೆಟ್‌ವರ್ಕ್‌-1 ವಿನ್ಸೆಂಟ್‌ ಹಾಗೂ ಶೋಭಾ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌ ಸಿಎಚ್‌ ಶರ್ಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next