Advertisement

ಅಳುತಳುತ ಬಂದೇವಾ ನಗುನಗುತ ಬಾಳೋಣು

09:30 PM Oct 04, 2019 | Lakshmi GovindaRaju |

ಮೈಸೂರು: ಮನುಷ್ಯ ಬದುಕಿನಲ್ಲಿ ಹಾಸ್ಯವನ್ನು ಎಂದೂ ಕಳೆದುಕೊಳ್ಳದೇ, ತನ್ನ ಸುತ್ತಲಿನ ಜನ ನಲಿದಾಡುವಂತೆ ಬದುಕು ನಡೆಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಅ.ರಾ. ಮಿತ್ರಾ ಹೇಳಿದರು. ದಸರಾ ಕವಿಗೋಷ್ಠಿ ಉಪಸಮಿತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಕಲವಿಗೋಷ್ಠಿಯಲ್ಲಿ ಮೂರನೇ ದಿನಾವದ ಶುಕ್ರವಾರ ವಿನೋದ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

Advertisement

ನಮ್ಮ ಬದುಕಿನಲ್ಲಿ ಜನರಿಗೆ ಒಳ್ಳೆಯದು ಮಾಡಬೇಕೆಂದರೆ, ಎಲ್ಲರನ್ನೂ ಹಾಸ್ಯದಿಂದ ನಗಿಸುವುದು. ಮನುಷ್ಯನನ್ನು ರೂಪಾಂತರಗೊಳಿಸುವ ದೊಡ್ಡಶಕ್ತಿ ಹಾಸ್ಯಕ್ಕೆ ಇದೆ. ಬೇಂದ್ರೆ ಹೇಳಿದಂತೆ ಅಳುತಳುತ ಬಂದೇವಾ ನಗುನಗುತ ಬಾಳ್ಳೋಣು, ಬಡನೂರು ವರುಷ ಹರುಷರುದಿ ಕಳೆಯೋಣ ಎಂದು ತಮ್ಮದೇ ದಾಟಿಯಲ್ಲಿ ಹಾಸ್ಯ ಚುಟುಕುಗಳ ಮೂಲಕ ಹಾಸ್ಯರಸ ಸ್ಪುರಿಸಿ ನೆರೆದಿದ್ದವರನ್ನು ನಗೆಗಡಲಿನಲ್ಲಿ ತೇಲಿಸಿದರು.

ನಮ್ಮ ಹಿರಿಯರು ಹಾಸ್ಯದ ಮೂಲಕ ಮಾತನಾಡುವುದನ್ನು ಹೇಳಿಕೊಟ್ಟಿದ್ದಾರೆ. ಈ ಹಾಸ್ಯ ಎಲ್ಲಾ ವ್ಯಕ್ತಿಯ ಜೀವನದಲ್ಲೂ ಇದೆ. ಅದನ್ನು ನಾವು ಕಂಡುಕೊಳ್ಳಬೇಕು. ಜೊತೆಗೆ ಹಾಸ್ಯ ಎನ್ನುವುದು ನಮ್ಮ ಅಂತರಂಗದಲ್ಲಿ ಹುಟ್ಟಬೇಕೆ ಹರತು, ಸಭೆಗಳಲ್ಲಿ ಅಲ್ಲ.

ಕವಿಗಳು ಅಂತರಂಗದಲ್ಲಿ ಜ್ವಾಲೆ ಇರಿಸಿಕೊಂಡಿರುತ್ತಾರೆ. ಹಾಸ್ಯವೂ ಹಾಗೆಯೇ ಸಿಡಿಯುವ ಸಾಮಗ್ರಿ, ಸಿಡಿಯುವಾಗ ಡೈನಾಮಿಕ್‌ ರೀತಿ ಸಿಡಿಯಬೇಕು. ಹಾಸ್ಯ ಜೀವನಕ್ಕೆ ಪ್ರಯೋಜನಕಾರಿಯಾಗಿರಬೇಕು. ಹಾಸ್ಯ ಕೇಳಿ ಸುತ್ತಮುತ್ತಲಿನ ಜನ ನಲಿದಾಗ ಮಾತ್ರ ಬದುಕು ಸಾರ್ಥಕ. ನಾವು ಬದುಕುವ ವಿಚಾರದಲ್ಲಿ ಹಾಸ್ಯವಿರಬೇಕು ಎಂದು ತಿಳಿಸಿದರು.

ಪ್ರತಿಭೆ ಕಣ್ಣಲ್ಲಿ ಮಿಂಚುತಿರಬೇಕು. ಪ್ರತಿಭೆಗೆ ವಯಸ್ಸಿನ ಮಿತಿಯಲ್ಲ ಎಂದ ಅವರು, ಕವಿಗಳು ಗಂಭೀರವಾಗಿ ಯೋಚಿಸಬೇಕು. ಸಮಾಜವನ್ನು ತಿದ್ದುವುದು ಬೇಡ. ನಿಮ್ಮಷ್ಟಕ್ಕೆ ಶುದ್ದವಾಗಿರಿ. ಹಾಸ್ಯದ ಶೀಲ ಕಳೆದುಕೊಳ್ಳಬೇಡಿ ಎಂದು ಹೇಳಿದರು. ವಯಸ್ಸಾದವರನ್ನು ನಾವು ಹೇಗಿದ್ದೀರಿ ಎಂದು ಕೇಳಿದರೆ, ಅವರು ಹೇಗಿದ್ದೀರಿ ಎಂದು ಕೇಳುವ ಬದಲು ಇನ್ನೂ ಯಾಕಿದ್ದೀರಿ ಎಂದು ಏಕೆ ಕೇಳಲ್ಲ ಎಂಬ ಮರು ಪ್ರಶ್ನೆ ಹಾಕುತ್ತಾರೆ.

Advertisement

ಇದೇ ಮನುಷ್ಯನಲ್ಲಿರುವ ಹಾಸ್ಯ ಪ್ರಜ್ಞೆ. ಹಾಸ್ಯಗಾರರು ನಡೆದಾಡುವ ವೈದ್ಯರಿದ್ದಂತೆ. ಪ್ರತಿಭೆಗಳು ಎಷ್ಟಿದ್ದರೇನು, ಅವು ನಮ್ಮ ಕಣ್ಣೆದುರು ಮಿಂಚಬೇಕು. ಪ್ರತಿ ವ್ಯಕ್ತಿಗೂ ತಾಯಿಯ ಗುಣ, ಭೂಮಿಯ ಋಣದ ಜೊತೆಗೆ ಎಲ್ಲವನ್ನೂ ಸಹಿಸಿಕೊಳ್ಳುವ ಸೈರಣೆಯ ಮನೋವ ಇರಬೇಕು. ಬದುಕಿನಲ್ಲಿ ಹಾಸ್ಯಪ್ರಜ್ಞೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಡಾ.ಚಿಂತಾಮಣಿ ಕೊಡ್ಲೆಕೆರೆ, ಆರತಿ ಘಟಿಕರ್‌, ಶಾಂತಾರಾಮ್‌ ಶೆಟ್ಟಿ, ಧರ್ಮಶ್ರೀ ಅಯ್ಯಂಗಾರ್‌ ತಮ್ಮ ಹಾಸ್ಯ ಕವಿತೆಗಳ ಮೂಲಕ ಪ್ರೇಕ್ಷಕರನ್ನು ನಗಡೆಗಡಲಲ್ಲಿ ತೇಲಿಸಿದರು. ಬಿ.ವಿ.ಪ್ರದೀಪ್‌, ಬಿ.ವಿ.ಪ್ರವೀಣ್‌, ಶಶಿಕಲಾ ಸುನೀಲ್‌ ಮತ್ತು ತಂಡ ಹಾಸ್ಯ ಗೀತೆಗಳ ಮೂಲಕ ರಂಜಿಸಿದರು. ಸಾಹಿತಿ ಸುಬ್ರಾಯ ಚೊಕ್ಕಾಡಿ ವಿನೋದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ನಟ ಮಂಡ್ಯ ರಮೇಶ್‌ ಹಾಗೂ ದಸರಾ ಕವಿಗೋಷ್ಠಿ ಉಪಸಮಿತಿ ಪದಾಧಿಕಾರಿಗಳು ಇದ್ದರು.

ಚುಟುಕು ಸಾಹಿತಿ ದುಂಡಿರಾಜು ಪಂಚ್‌: ಚುಟುಕು ಸಾಹಿತಿ ದುಂಡಿರಾಜು ಮಾತನಾಡಿ, ಬೆಂಗಳೂರು ರಾಜ್ಯದ ರಾಜಧಾನಿಯಾದರೆ, ಮೈಸೂರು ನಮ್ಮ ಸಾಂಸ್ಕೃತಿಕ ರಾಜಧಾನಿ. ಮೈಸೂರು ಹೆಸರುವಾಸಿಯಾಗಿರುವುದು ದಸರೆಗೆ, ಜಂಬೂ ಸವಾರಿಗೆ, ಚಿನ್ನದ ಅಂಬಾರಿಗೆ. ಅದೇ ನಮ್ಮ ಬೆಂಗಳೂರು ಪ್ರಸಿದ್ಧವಾಗಿರುವುದು ಪಬ್ಬಿಗೆ, ಬಾರಿಗೆ ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ದಸರಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಈ ಪಂಚ ಕವಿಗೋಷ್ಠಿಯಲ್ಲಿ ನಿಜವಾದ ಪಂಚ್‌ ಇರುವುದು ವಿನೋದ ಕವಿಗೋಷ್ಠಿಯಲ್ಲಿ. ಹಾಸ್ಯ ಕವಿಗೋಷ್ಠಿಯಲ್ಲಿ ನಗಿಸಿದ್ದಕ್ಕೆ ಚಪ್ಪಾಳೆ ತಟ್ಟಿದರೆ, ಗಂಭೀರ ಕವಿಗೋಷ್ಠಿಯಲ್ಲಿ ಮುಗಿಸಿದ್ದಕ್ಕೆ ಚಪ್ಪಾಳೆ ತಟ್ಟುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next