Advertisement

ICCR ನಿಂದ ವೆಬ್‌ಸೈಟ್‌ ಅನಾವರಣ; ದೇಶದ ಗತವೈಭವ ಸಾರುವ “ನಾಲೇಜ್‌ ಸಿಸ್ಟಮ್‌”

12:44 AM Oct 06, 2023 | Team Udayavani |

ಮಣಿಪಾಲ: ಭಾರತದ ಗತವೈಭವನ್ನು ವರ್ತಮಾನದ ಸವಾಲುಗಳೊಂದಿಗೆ ಹೊಂದಿಸಿ ಕೊಂಡು ಭವಿಷ್ಯದ ಕಡೆಗೆ ಹೆಜ್ಜೆ ಹಾಕಬೇಕಿದೆ. ಇದರೊಂದಿಗೆ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಮರು ಏಕೀಕರಣಗೊಳಿಸುವ ಕಾರ್ಯವೂ ಆಗಬೇಕು ಎಂದು ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಶನ್‌ (ಐಸಿಸಿಆರ್‌) ಅಧ್ಯಕ್ಷ ಡಾ| ವಿನಯ ಸಹಸ್ರಬುದ್ಧೆ ಹೇಳಿದರು.

Advertisement

ಐಸಿಸಿಆರ್‌ ವತಿಯಿಂದ ಮಾಹೆ ವಿ.ವಿ. ಹಾಗೂ ಪುಣೆಯ ಸಾವಿತ್ರಿಬಾೖ ಫ‌ುಲೆ ವಿ.ವಿ. ಸಹಭಾಗಿತ್ವದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ “ಯುನಿವರ್ಸಲೈಸೇಶನ್‌ ಆಫ್‌ ಟ್ರೆಡಿಶನಲ್‌ ಇಂಡಿಯನ್‌ ನಾಲೇಜ್‌ ಸಿಸ್ಟಮ್‌’ (ಯುಟಿಐಕೆಎಸ್‌) ವೆಬ್‌ಸೈಟ್‌ ಅನಾವರಣಗೊಳಿಸಿ ಅವರು ಮಾತನಾಡಿದರು.

ಮೆಕಾಲೆ ಶಿಕ್ಷಣ ಹಾಗೂ ಪಾಶ್ಚಿಮಾತ್ಯ ವೈಚಾರಿಕೆ ಚಿಂತನೆಯನ್ನು ವ್ಯಾಪಕವಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಭಾರತೀಯ ಜ್ಞಾನ ವೈವಿಧ್ಯವನ್ನು ಮರೆಯುತ್ತಿದ್ದೇವೆ. ಜ್ಞಾನ, ವಿಜ್ಞಾನ, ಶಿಕ್ಷಣ ಸಹಿತ ಎಲ್ಲ ವಿಷಯದಲ್ಲಿ ಭಾರತ ಹೊಂದಿದ್ದ ಗತವೈಭವದ ಜತೆಗೆ ವರ್ತಮಾನದ ಸಾಧನೆಯನ್ನು ಭವಿಷ್ಯಕ್ಕೆ ತಿಳಿಸುವ ಕಾರ್ಯ ಐಸಿಸಿಆರ್‌ ಮಾಡುತ್ತಿದೆ ಎಂದರು.
ಅನಿವಾಸಿ ಭಾರತೀಯರು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳಿಗೆ ಭಾರತೀಯ ಜ್ಞಾನದ ಅಗಾಧತೆಯನ್ನು ತಿಳಿಸುವುದು ಮತ್ತು ಹಲವು ವಿಷಯಗಳ ಬಗ್ಗೆ ನೀಡಿರುವ ತಪ್ಪು ಕಲ್ಪನೆಗಳನ್ನು ಸರಿಪಡಿಸುವ ಸವಾಲು ನಮ್ಮ ಮುಂದಿದೆ ಎಂದು ಹೇಳಿದರು.

ಐಸಿಸಿಆರ್‌ ಡೆಪ್ಯೂಟಿ ಡೈರೆಕ್ಟರ್‌ ಜನರಲ್‌ ಅಭಯ್‌ ಕುಮಾರ್‌ ಯುಟಿಐ ಕೆಎಸ್‌ ಪೋರ್ಟಲ್‌ ಬಗ್ಗೆ ಮಾಹಿತಿ ನೀಡಿದರು. ಎಂಇಎಂಜಿ ಕಾರ್ಪೊರೆಟ್‌ ಅಫೈರ್ ಸ್ಪೆಷಲ್‌ ಪ್ರಾಜೆಕ್ಟ್ ಹಿರಿಯ ಉಪಾಧ್ಯಕ್ಷ ಸೋಮನಾಥ್‌ ದಾಸ್‌, ಮಾಹೆ ವಿ.ವಿ. ಕುಲಸಚಿವ ಡಾ| ಗಿರಿಧರ್‌ ಕಿಣಿ ಉಪಸ್ಥಿತರಿದ್ದರು. ಮಾಹೆ ವಿ.ವಿ. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಐಸಿಸಿಆರ್‌ ಡೈರೆಕ್ಟರ್‌ ಜನರಲ್‌ ಕುಮಾರ್‌ ತುಹಿನ್‌ ವಂದಿಸಿದರು. ಸಂಬಿತ್‌ ದಾಸ್‌ ನಿರೂಪಿಸಿದರು.

ಜನಪದ ಕಲೆಯ ವಿಸ್ತಾರ
ವಿಶ್ರಾಂತ ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ವಿಷಯ ಮಂಡಿಸಿ, ಭಾರತೀಯ ಜಾನಪದ ಅಥವಾ ಸ್ಥಳೀಯ ಜ್ಞಾನ ವ್ಯವಸ್ಥೆಯು ಅತ್ಯಂತ ವ್ಯವಸ್ಥಿತ ಹಾಗೂ ಪರಿಣಾಮಕಾರಿಯಾಗಿದೆ. ತುಳುನಾಡಿನ ಜಾನಪದ, ಸಿರಿ, ಭೂತಾರಾಧನೆ ಸಹಿತ ವಿವಿಧ ಆಚರಣೆಗಳು ಸಾಕಷ್ಟು ಜ್ಞಾನಾಧಾರಿತವಾಗಿವೆ. ಯುವ ಜನತೆ ಈ ವಿಷಯಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕು ಎಂದರು.

Advertisement

ಕರ್ನಾಟಕ ಸಂಸ್ಕೃತ ವಿ.ವಿ.ಯ ವ್ಯಾಕರಣ ವಿಭಾಗದ ಮುಖ್ಯಸ್ಥೆ ಪ್ರೊ| ಶಿವಾನಿ ವಿ. ಮಾತನಾಡಿ, ಜ್ಞಾನ, ವಿಜ್ಞಾನ ಮತ್ತು ದರ್ಶನವನ್ನು ಒಳಗೊಂಡಂತೆ ಭಾರತವನ್ನು ನೋಡಬೇಕು. ಜ್ಞಾನ ಮತ್ತು ಪ್ರಾಯೋಗಿಕತೆಯ ನಡುವೆ ಸಾಕಷ್ಟು ಅಂತರವಿದೆ. ಪ್ರಾಚೀನ ಜ್ಞಾನ ಮತ್ತು ತಂತ್ರಜ್ಞಾನದ ಸಹಕಾರದೊಂದಿಗೆ ಈ ಅಂತರ ಸರಿಪಡಿಸುವ ಕಾರ್ಯ ಆಗಬೇಕು.

ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಯೂ ಆಗಬೇಕು. ಪ್ರವಾಸೋದ್ಯಮ ಬೆಳೆಸುವ ಜತೆಗೆ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ತಿಳಿಸುವಂತಾಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next