ಗಜೇಂದ್ರಗಡ: ಪ್ರತಿ ಕುಟುಂಬಕ್ಕೆ ಕಡ್ಡಾಯವಾಗಿ ಉದ್ಯೋಗ ನೀಡುವ ಉದ್ದೇಶದಿಂದ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಈ ಬಗ್ಗೆ ಜನರಿಗೆ ಸರಿಯಾಗಿ ಅರಿವು ಮೂಡಿಸಲು ರಥಯಾತ್ರೆ ಕೈಗೊಳ್ಳಲಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಉದ್ಯೋಗ ಖಾತ್ರಿ ರಥ, ಜಾಬ್‌ಕಾರ್ಡ್ ಅಭಿಯಾನ ಚಾಲನೆ ಹಾಗೂ ದುಡಿಯೋಣ ಭಾ ಅಭಿಯಾನದ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕೂಲಿಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಸೂಚಿಸಲಾಗಿದೆ. ಇದಕ್ಕಾಗಿ ವಾಹನಗಳ ಮೂಲಕ ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ತ್ರೀ, ಪುರುಷ ಎನ್ನುವ ಭೇದವಿಲ್ಲದೆ ಕೂಲಿ ಕೊಡಲಾಗುತ್ತಿದೆ. ಜಾಬ್ ಕಾರ್ಡ್ ಇರುವ ಕೂಲಿಕಾರರು, ಗ್ರಾಪಂಗೆ ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಳ್ಳಬಹುದು ಎಂದರು.
ತಾಪಂ ಇಒ ಸಂತೋಷ ಪಾಟೀಲ ಮಾತನಾಡಿ, ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನದ ಮೂಲಕ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗುತ್ತಿದೆ. ಇನ್ನೂ ಜಾಬ್ ಕಾರ್ಡ್ ಪಡೆಯದೇ ಯೋಜನೆ ಸೌಲಭ್ಯ ಪಡೆಯದೆ ಇರುವ ಕುಟುಂಬಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಕಾರ್ಡ್ ವಿತರಿಸಲಾಗುತ್ತಿದೆ. ಸ್ವ-ಸಹಾಯ ಗುಂಪುಗಳ ಮಹಿಳೆಯರಲ್ಲಿ ಯೋಜನೆ ಕುರಿತು ಅರಿವು ಮೂಡಿಸಿ, ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ, ಶಿವಬಸವ ಬೆಲ್ಲದ, ಮುತ್ತಣ್ಣ ಕಡಗದ, ಅಶೋಕ ವನ್ನಾಲ, ಶಿವಾನಂದ ಮಠದ, ಮಂಜುನಾಥ ಮೇಟಿ, ಐಇಸಿ ಸಂಯೋಜಕ ಮಂಜುನಾಥ ಹಳ್ಳದ ಸೇರಿದಂತೆ ಇನ್ನಿತರರು ಇದ್ದರು.