Advertisement

ನಾಲೆಗಳಿಗೆ ನೀರು ಬಿಡುವ ಕಾರ್ಯಕ್ಕೆ ಚಾಲನೆ

02:16 PM Jul 07, 2018 | |

ಮೈಸೂರು: ಕೆ.ಆರ್‌.ನಗರ ತಾಲೂಕು ವ್ಯಾಪ್ತಿಯ ಚಾಮರಾಜ ಎಡದಂಡೆ, ಬಲದಂತೆ ಹಾಗೂ ರಾಮಸಮುದ್ರ ಅಣೆಕಟ್ಟು ನಾಲೆಯ ಅಚ್ಚುಕಟ್ಟು ಪ್ರದೇಶದ ಮುಂಗಾರು ಬೆಳೆಗಳಿಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಬಳ್ಳೂರು ಸಮೀಪದ ಚಾಮರಾಜ ಅಣೆಕಟ್ಟೆ(ಬಳ್ಳೂರು ಕಟ್ಟೆ)ಗೆ ಬಾಗಿನ ಅರ್ಪಿಸಿ ನಾಲೆಗಳಿಗೆ ನೀರು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

Advertisement

ನೀರಿನ ಹರಿವಿನ ಪ್ರಮಾಣ: ಚಾಮರಾಜ ಎಡದಂಡೆ ನಾಲೆಯಲ್ಲಿ 39 ಕಿ.ಮೀ.ವರೆಗೆ, ಚಾಮರಾಜ ಬಲದಂಡೆ ನಾಲೆಯಲ್ಲಿ 63 ಕಿ.ಮೀ.ವರೆಗೆ ಸುಮಾರು 22,906 ಎಕರೆ, ರಾಮಸಮುದ್ರ ಅಣೆಕಟ್ಟು ನಾಲೆಯ 57 ಕಿ.ಮೀ.ವರೆಗೆ ಸುಮಾರು 6,822 ಎಕರೆ ಹಾಗೂ ಮಿರ್ಲೆ ಶ್ರೇಣಿ ನಾಲೆಗಳಲ್ಲಿ ಸುಮಾರು 4,800 ಎಕರೆ ಅಚ್ಚುಕಟ್ಟು ಪ್ರದೇಶಗಳ ಮುಂಗಾರು ಬೆಳೆಗೆ ಈ ನಾಲೆಗಳಿಂದ ನೀರು ಬಿಡಲಾಗುತ್ತಿದೆ.

ಅಣೆಕಟ್ಟು ನಾಲೆಗಳು ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣದ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ನೀರಿನ ಲಭ್ಯತೆಗೆ ಅನುಗುಣವಾಗಿ ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳೆ ಬೆಳೆಯುವಂತೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಮನವಿ ಮಾಡಿದ್ದಾರೆ. 

ನಾಲೆಗಳಿಗೆ ನೀರು ಹರಿಸಿ: ನಾಲೆಯ ಕೊನೆಯ ಹಂತದ ಪ್ರದೇಶಗಳಿಗೆ ನೀರನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಈ ನಾಲೆಗಳ ಅಡಿಯಲ್ಲಿ ಬರುವ ನೀರನ್ನು ಉಪ ನಾಲೆಗಳಲ್ಲಿ ಕಟ್ಟು ಪದ್ಧತಿಯಲ್ಲಿ ಹರಿಸಲಾಗುವುದು. ಮುಂದೆ ಪ್ರಕೃತಿ ವೈಪರಿತ್ಯದಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾದಲ್ಲಿ ಅಣೆಕಟ್ಟೆಯಲ್ಲಿ ಲಭ್ಯವಿದ್ದ ನೀರನ್ನು ನಾಲೆಗಳಿಗೆ ಹರಿಸಲಾಗುವುದು. 

ಕಾನೂನು ಕ್ರಮ: ಬೆಳೆ ನಷ್ಟವಾದ ಪಕ್ಷದಲ್ಲಿ ಇಲಾಖೆ ಯಾವುದೇ ರೀತಿಯ ಪರಿಹಾರ ನೀಡುವುದಿಲ್ಲ. ಅಲ್ಲದೆ ಬೆಳೆನಷ್ಟಕ್ಕೆ ಕಾವೇರಿ ನೀರಾವರಿ ನಿಗಮ ಜವಾಬ್ದಾರಿಯಲ್ಲ. ನಾಲೆಗಳಲ್ಲಿ ನೀರು ಬಿಟ್ಟಾಗ ಅಡ್ಡಕಟ್ಟುವುದು, ನಾಲಾ ಏರಿ ಒಡೆಯುವುದು, ಕಟ್ಟಡಗಳಿಗೆ ಹಾನಿ ಮಾಡುವುದು, ನಾಲೆಗಳಿಗೆ ಪಂಪ್‌ಸೆಟ್‌, ಏರ್‌ಪೈಪ್‌ ಅಳವಡಿಸುವುದು ಹಾಗೂ ಟ್ಯೂಬಿನ ಗೇಟ್‌ಗಳನ್ನು ಮುರಿಯುವ ಕೆಲಸಕ್ಕೆ ಕೈಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. 

Advertisement

ಹಾರಂಗಿ ಯೋಜನೆಯ ಅಧೀಕ್ಷಕ ಎಂಜಿನಿಯರ್‌ ಜಿ.ಪ್ರಸಾದ್‌, ಹಾರಂಗಿ ನಾಲಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ, ಹಾರಂಗಿ ವಿತರಣಾ ಉಪ ವಿಭಾಗ ಕೆ.ಆರ್‌.ನಗರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಚಂದ್ರಶೇಖರ್‌ ಮೊದಲಾದವರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next