Advertisement

ಇ-ತ್ಯಾಜ್ಯ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ

09:30 PM Sep 17, 2019 | Lakshmi GovindaRaju |

ಮೈಸೂರು: ಎಲೆಕ್ಟ್ರಾನಿಕ್‌ ಉಪಕರಣಗಳು ಇಂದು ಬಹಳಷ್ಟು ಪ್ರಮಾಣದಲ್ಲಿ ನಮ್ಮನ್ನು ಆವರಿಸುತ್ತಿವೆ, ಬಳಕೆಗೆ ಬಾರದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಿಲೇವಾರಿ ಮಾಡಲು ಮೈಸೂರು ಮಹಾನಗರ ಪಾಲಿಕೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಇ-ತ್ಯಾಜ್ಯ ವಿಲೇವಾರಿ ಯೋಜನೆ ಜಾರಿಗೆ ತಂದಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಭಾರತ ವಿಕಾಸ ದಿವಸದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಆವರಣದಲ್ಲಿ ಮಂಗಳವಾರ ನಡೆದ ಇ-ತ್ಯಾಜ್ಯ ವಿಲೇವಾರಿ ನಮ್ಮೆಲ್ಲರ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲರೂ ಕೈಜೋಡಿಸಿ: ಇದೊಂದು ವಿನೂತನ ಕಾರ್ಯಕ್ರಮ ಇದಕ್ಕೆ ಸಾರ್ವಜನಿಕರು ಸಹಕರಿಸಿದರೆ ಉತ್ತಮ ಫ‌ಲಿತಾಂಶ ಕಾಣಬಹುದು. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸಂಗ್ರಹಿಸಿದ ಎಲೆಕ್ಟ್ರಾನಿಕ್‌ ಉಪಕರಣಗಳಿಂದ ಬರುವಂತಹ ಹಣದಿಂದ ನಗರವನ್ನು ಹಸಿರು ಮಾಡಲು, ಸಸಿಗಳನ್ನು ನೆಡಲು ಬಳಸಲಾಗುವುದರಿಂದ ಇಂತಹ ಕಾರ್ಯಕ್ಕೆ ಪಾಲಿಕೆ ಜೊತೆಯಲ್ಲಿ ಎಲ್ಲರೂ ಕೈ ಜೋಡಿಸಿ ಎಂದು ಅವರು ಮನವಿ ಮಾಡಿದರು.

ಹಸಿರು ನಗರ ಗುರಿ: ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ಮೈಸೂರು ನಗರವು ಎರಡು ಬಾರಿ ಸ್ವಚ್ಛ ನಗರ ಕಿರೀಟ ಪಡೆದಿದ್ದು, ಈ ಬಾರಿ ಮತ್ತೂಂದು ಹೊಸ ಹೆಜ್ಜೆಯೊಂದಿಗೆ ಪ್ಲಾಸ್ಟಿಕ್‌ ಹಾಗೂ ಇ-ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಹಸಿರು ಮೈಸೂರು ಮಾಡಲು ಹೊರಟಿದೆ. ಇದರ ಮೂಲಕ ಪ್ರಧಾನಮಂತ್ರಿ ನರೇಂದ್ರಮೋದಿಯವರ ಭಾರತ್‌ ವಿಕಾಸ್‌ ದಿವಸಕ್ಕೆ ನಮ್ಮ ಕೊಡುಗೆ ಈ ರೀತಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್‌.ನಾಗೇಂದ್ರ, ಉಪ ಮೇಯ ಅಹಮ್ಮದ್‌, ಮುಡಾ ಆಯುಕ್ತ ಪಿ.ಎಸ್‌. ಕಾಂತರಾಜ್‌ , ಮಹಾನಗರ ಪಾಲಿಕೆಯ ಆಯುಕ್ತ ಗುರುದತ್‌ ಹೆಗಡೆ, ಡಿಡಿಪಿಐ ಪಾಂಡುರಂಗ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಪ್ರತಿ ತಿಂಗಳು 17ರಂದು ತ್ಯಾಜ್ಯ ಸಂಗ್ರಹ: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಇರುವ ಉಪಯೋಗಕ್ಕೆ ಬಾರದ ಟಿವಿ, ಕಂಪ್ಯೂಟರ್‌, ಚಾರ್ಜರ್‌ ಹೀಗೆ ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳು ಮತ್ತು ಅದರ ಬಿಡಿ ಭಾಗಗಳನ್ನು ಪಾಲಿಕೆ ವತಿಯಿಂದ ಪ್ರತಿ ತಿಂಗಳು 17 ರಂದು ಮನೆ-ಮನೆಗೆ ವಾಹನ ಕಳುಹಿಸಿ ಇ-ತ್ಯಾಜ್ಯ ಸಂಗ್ರಹಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ ನಗರದ ಎಲ್ಲಾ ನಾಗರಿಕರು ಸಹಕರಿಸಿ ಎಂದು ಶಾಸಕ ರಾಮದಾಸ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next