Advertisement
ಅವೆನ್ಯೂ ರಸ್ತೆಯಲ್ಲಿ, “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಕಟ್ಟಡವಿರುವ ಜಾಗದಲ್ಲಿ 1847ರಲ್ಲಿ ರಾಜ್ಯದ ಮೊತ್ತ ಮೊದಲ ಮಾನಸಿಕ ಚಿಕಿತ್ಸಾ ಕೇಂದ್ರ ಶುರುವಾಗಿತ್ತು. ಬ್ರಿಟಿಷ್ ಸೈನಿಕರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಶುರುವಾದ ಈ ಕೇಂದ್ರಕ್ಕೆ ಊಹಿಸಿದ್ದಕ್ಕಿಂತ ಹೆಚ್ಚಿನ ಮಂದಿ ದಾಖಲಾದರು, ನಾಗರಿಕರೂ ಬರತೊಡಗಿದರು. ಆಗ ಇನ್ನೂ ದೊಡ್ಡ ಸ್ಥಳ ಬೇಕೆಂದಾಗ ಮೈಸೂರು ಮಹಾರಾಜರು, ಲಕ್ಕಸಂದ್ರದ ಬಳಿ ಜಾಗ ಮಂಜೂರು ಮಾಡಿದರು. 1937ರಲ್ಲಿ ನಿಮ್ಹಾನ್ಸ್(ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೊ ಸೈನ್ಸಸ್) ಈಗಿರುವ ಸ್ಥಳದಲ್ಲಿ ಕಾರ್ಯಾರಂಭಿಸಿತು. ಅಂದಿನಿಂದಲೂ ನಿಮ್ಹಾನ್ಸ್, ಬೆಂಗಳೂರಿನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಬಹಳ ಹಿಂದೆ ಬೆಂಗಳೂರಿನ ಜನರು ಪಿಕ್‌ನಿಕ್ ಮಾಡಲೆಂದೇ ತಿಂಡಿ ಪ್ಯಾಕ್ ಮಾಡಿಕೊಂಡು ಕುಟುಂಬಸಮೇತರಾಗಿ ಬರುತ್ತಿದ್ದರಂತೆ.
Related Articles
Advertisement
ರೋಸಸ್ ಕೆಫೆ ಮತ್ತು ಬೇಕರಿ: ಗುಲಾಬಿ ಪ್ರೀತಿಯ ಸಂಕೇತ. ಅದೇ ಹೆಸರಿನಲ್ಲಿ ನಿಮ್ಹಾನ್ಸ್ ಆವರಣದೊಳಗೆ ಶುರುವಾಗಿರುವ ರೋಸಸ್ ಕೆಫೆ ಅನೇಕ ಕಾರಣಗಳಿಗೆ ವಿಶೇಷ ಎನ್ನಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆಯುತ್ತಿರುವ ಮನೋರೋಗಿಗಳೇ ಇಲ್ಲಿ ಆಹಾರಖಾದ್ಯಗಳನ್ನು ತಯಾರಿಸಿ ಬಂದವರಿಗೆ ಬಡಿಸುತ್ತಾರೆ. ಇದು ಲಾಭರಹಿತವಾಗಿದ್ದು ಬಂದವರು ತಮಗಿಷ್ಟ ಬಂದಷ್ಟು ಧನಸಹಾಯವನ್ನು ಮಾಡಬಹುದಾಗಿದೆ. ಅಷ್ಟೂ ಮೊತ್ತ ಕೆಫೆಗೆ ವಿನಿಯೋಗವಾಗುತ್ತದೆ. “ರೋಗಿಗಳು ಒಂದಲ್ಲ ಒಂದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ಮನೋಬಲ ವೃದ್ಧಿಸುತ್ತದೆ ಮತ್ತು ಸಮಾಜದಲ್ಲಿ ಬೆರೆಯಲು ಆತ್ಮವಿಶ್ವಾಸ ಮೂಡುತ್ತದೆ. ಇದೇ ರೋಸಸ್ ಕೆಫೆಯ ಹಿಂದಿನ ಉದ್ದೇಶ.’ ಎನ್ನುತ್ತಾರೆ ನಿರ್ದೇಶಕಿ ಸುರಯ್ನಾ ಭಾನು.
ಇಲ್ಲಿ ಕಡಲೆ ಕಾಳು ಉಸಲಿ, ನಿಂಬೆ ಹಣ್ಣಿನ ಪಾನಕ, ಕೇಕ್ ಮುಂತಾದ ಖಾದ್ಯಗಳು ಮೆನುವಿನಲ್ಲಿದೆ. ಇಲ್ಲಿನ ಮೆನು ಸೀಮಿತವಾದರೂ ರೋಗಿಗಳಿಗೆ ದೊರೆಯುತ್ತಿರುವ ಸಹಾಯ ಮಾತ್ರ ಅಸೀಮವಾದುದು. ನಿಮ್ಹಾನ್ಸ್‌ನಲ್ಲಿ ರೋಗಿಗಳೇ ನಡೆಸುವ ಬೇಕರಿ ಘಟಕವೂ ಇದೆ. ಬ್ರೆಡ್, ಪ್ಲಮ್ ಕೇಕ್, ಬಿಸ್ಕತ್ತುಗಳು ಅಲ್ಲಿ ತಯಾರಾಗುತ್ತವೆ. ಅಲ್ಲದೆ ಸಣ್ಣಪ್ರಮಾಣದ ಕರಕುಶಲ ವಸ್ತು ತಯಾರಿಕಾ ಘಟಕವೂ ಇದೆ. ಪೇಪರ್ ಕ್ರಾಫ್ಟ್, ವಿವಿಧ ಗಾತ್ರದ ಮೇಣದ ಬತ್ತಿಗಳು ಇಲ್ಲಿ ತಯಾರಾಗುತ್ತವೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ನಾವೆಲ್ಲರೂ ಸ್ಥೈರ್ಯ ಕಳೆದುಕೊಳ್ಳುತ್ತೇವೆ, ಕುಗ್ಗಿ ಹೋಗುತ್ತೇವೆ. ಪ್ರೀತಿಪಾತ್ರರು ಕೈಹಿಡಿದು ಮೇಲೆತ್ತಿದಾಗ ಮತ್ತೆ ಪುಟಿದ ಕಾರಂಜಿಯಂತಾಗುತ್ತೇವೆ. ಹಾಗೆಯೇ, ನೊಂದಿರುವವರನ್ನು ಕೈಹಿಡಿದು ಮೇಲೆತ್ತಿ ಜೀವನಪ್ರೀತಿ ತುಂಬುವ ಕೆಲಸದಲ್ಲಿ ನಿಮ್ಹಾನ್ಸ್ ನಿರತವಾಗಿದೆ.
ನಿಮ್ಹಾನ್ಸ್‌ನಲ್ಲಿ ಪುಟ್ಟಣ್ಣ ಕಣಗಾಲ್: ಜನಸಾಮಾನ್ಯರಲ್ಲಿ ಹುಚ್ಚಾಸ್ಪತ್ರೆ ಕುರಿತು ಕೆಟ್ಟ ಅಭಿಪ್ರಾಯ ಬರುವುದರಲ್ಲಿ ಸಿನಿಮಾಗಳ ಪಾಲು ಅಧಿಕವಾದುದು. ಹುಚ್ಚಾಸ್ಪತ್ರೆಯನ್ನು ಭೀತಿ ಮೂಡುವಂತೆ ಇಲ್ಲವೇ ಹಾಸ್ಯಾಸ್ಪದವಾಗಿ ತೋರಿಸುವುದರಿಂದಲೇ ಜನರು ತಮಗೆ ಮಾನಸಿಕ ಸಮಸ್ಯೆ ಇದ್ದರೂ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಲು ಹಿಂದೇಟು ಹಾಕುವುದು. ಆ ನಿಟ್ಟಿನಲ್ಲಿ ನಿಮ್ಹಾನ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಇಂದಿಗೂ ಪುಟ್ಟಣ್ಣ ಕಣಗಾಲ್‌ರನ್ನು ನೆನೆಸಿಕೊಳ್ಳುತ್ತಾರೆ. ಮಾನಸಿಕ ಸಮಸ್ಯೆ ಮತ್ತು ಮಾನಸಿಕ ಚಿಕಿತ್ಸಾ ಕೇಂದ್ರಗಳನ್ನು ಮನರಂಜನೆಯ ವಸ್ತುವಾಗಿಸದೆ ವಾಸ್ತವವನ್ನು ತೋರಿಸಿದ್ದರಿಂದಲೇ ಇಂದು “ಶರಪಂಜರ’ ಸಾರ್ವಕಾಲಿಕ ಶ್ರೇಷ್ಠ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಅಂದಹಾಗೆ, “ಶರಪಂಜರ’ ಸಿನಿಮಾದ ಚಿತ್ರಕಥೆ ಬರೆಯುವ ಸಂದರ್ಭದಲ್ಲಿ ಅವರು ನಿಮ್ಹಾನ್ಸ್‌ಗೆ ಬಂದು ವೈದ್ಯರ ಬಳಿ ಮಾತುಕತೆ ನಡೆಸಿ, ರೋಗಿಗಳೊಂದಿಗೆ ಸಂವಹನ ನಡೆಸಿದ್ದನ್ನು ಹಿರಿಯ ವೈದ್ಯರು ನೆನಪಿಸಿಕೊಳ್ಳುತ್ತಾರೆ.
ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಲು ಯಾರೊಬ್ಬರೂ ಹಿಂಜರಿಯಬಾರದು. ಅದರಿಂದಲೇ ಮಾನಸಿಕ ಕಾಯಿಲೆ ಉಲ್ಬಣವಾಗುವುದು. ಸಮಾಜದಲ್ಲಿ ಮಾನಸಿಕ ಸ್ವಾಸ್ಥ್ಯಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ.-ಡಾ. ಮೀನಾ ಕೆ.ಎಸ್., ಹೆಚ್ಚುವರಿ ಪ್ರಾಧ್ಯಾಪಕಿ, ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗ, ನಿಮ್ಹಾನ್ಸ್ * ಹರ್ಷವರ್ಧನ್ ಸುಳ್ಯ