Advertisement

ನಗುವೇ ಸ್ನೇಹದ ಹಾಡು…

12:24 PM Oct 04, 2017 | |

ಆಕೆ ಕಾಲೇಜ್‌ ಕ್ವೀನ್‌ ಅನ್ನಿಸಿಕೊಂಡಿದ್ದವಳು. ಎಷ್ಟೋ ಹುಡುಗರ ಪಾಲಿನ ಕ್ರಶ್‌ ಆಗಿದ್ದವಳು. ಅಂಥವಳು ಮೇಜರ್‌ ಆ್ಯಕ್ಸಿಡೆಂಟ್‌ಗೆ ತುತ್ತಾದಳು. ಪರಿಣಾಮ, ಮುಖ ಛಿದ್ರವಾಯಿತು. ಮೂಗಿನ ಮೂಳೆ ತುಂಡಾಯಿತು. ದವಡೆಗಳು ಮುರಿದಿದ್ದವು. ಹಲ್ಲುಗಳೆಲ್ಲ ಉದುರಿ ಹೋಗಿದ್ದವು. ಇಂಥ ಹಿನ್ನೆಲೆಯ ಹೆಣ್ಣುಮಗಳೇ ಸುನೀತಾ. ಅವಳನ್ನು ಮೆಚ್ಚಿ ಮದುವೆಯಾದ ಹೆಂಗರುಳಿನ ಹುಡುಗನೇ ಜಯಪ್ರಕಾಶ್‌. ಇವರಿಬ್ಬರ ಪ್ರೇಮಕಥೆಯನ್ನು  ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೇವಲ 3 ದಿನದಲ್ಲಿ 3 ಲಕ್ಷ ಜನ ಓದಿದ್ದಾರೆ! ಬೆರಗು, ಸಂಭ್ರಮ ಮತ್ತು ಹೆಮ್ಮೆಯನ್ನು ಒಟ್ಟಿಗೇ ಉಂಟುಮಾಡುವ ಈ ಕಥನವನ್ನು ಸುನೀತಾ ಹಾಗೂ ಜಯಪ್ರಕಾಶ್‌ರ ಮಾತುಗಳಲ್ಲೇ ಕಟ್ಟಿಕೊಡಲಾಗಿದೆ…


“ನಾವಿದ್ದುದು ತಮಿಳ್ನಾಡಿನ ಕೊಯಮತ್ತೂರಿನಲ್ಲಿ. ಅಪ್ಪ, ಅಮ್ಮ, ತಂಗಿ ಮತ್ತು ನಾನು- ಇದು ನಮ್ಮ ಕುಟುಂಬ. ಕಾಲೇಜಿಗೆ ಹೋಗುತ್ತಿದ್ದಾಗ, ಸಿನಿಮಾ ಹೀರೋಯಿನ್‌ಗಳ ಥರಾನೇ ನಾನಿದ್ದೆ. ಅಂದ್ಮೇಲೆ ಕೇಳಬೇಕೆ? ಹುಡುಗರು ನನ್ನನ್ನೇ ಆರಾಧಾನಾಭಾವದಿಂದ ನೋಡುತ್ತಿದ್ದರು. “ಅಬ್ಬಬ್ಟಾ ಏನ್‌ ಬ್ಯೂಟಿ ಗುರೂ ಇವಳುª’ ಎಂದು, ನನಗೆ ಕೇಳಿಸುವಂತೆಯೇ ಕಮೆಂಟ್‌ ಮಾಡುತ್ತಿದ್ದರು. ಏನಾದರೂ ನೆಪ ಮಾಡಿಕೊಂಡು ನನ್ನೊಂದಿಗೆ ಮಾತಾಡಲು ಹವಣಿಸುತ್ತಿದ್ದರು. ಅದನ್ನು ಕಂಡಾಗಲೆಲ್ಲ, ನನ್ನ ಬಗ್ಗೆ, ನನ್ನ ಸೌಂದರ್ಯದ ಬಗ್ಗೆ ಹೆಮ್ಮೆಯಾಗುತ್ತಿತ್ತು. ಖುಷಿಯಾಗುತ್ತಿತ್ತು.

Advertisement

ಹತ್ತು ಮಂದಿಯ ಕಣುಕ್ಕುವಂಥ ಸೌಂದರ್ಯ ನನಗಿದ್ದುದು ನಿಜ. ಆದರೆ, ಮನೆಯೊಳಗೆ ಬಡತನ ತಾಂಡವವಾಡುತ್ತಿತ್ತು. ಅಪ್ಪ ಕುಡಿತದ ದಾಸರಾಗಿದ್ದರು. ಮೂರು ಹೊತ್ತಿನ ಊಟ ಸಂಪಾದಿಸಲೂ ನಾವು ಪರದಾಡುತ್ತಿದ್ದೆವು. ವಾಸ್ತವ ಹೀಗಿದ್ದಾಗ, ಪ್ರೀತಿ-ಪ್ರೇಮ ಎಂದು ತಲೆಕೆಡಿಸಿಕೊಳ್ಳುವುದಾದರೂ ಹೇಗೆ? ಈ ಕಾರಣದಿಂದಲೇ ಅಫೇರ್‌ನಂಥ ಬಾಂಧವ್ಯಗಳ ಬಗ್ಗೆ ನಾನು ಯೋಚಿಸಲೇ ಇಲ್ಲ. ಬೇಗ ಡಿಗ್ರಿ ಮುಗಿಸಿ ಯಾವುದಾದ್ರೂ ನೌಕರಿಗೆ ಸೇರಬೇಕು. ಮನೆಗೆ ಆಧಾರವಾಗಬೇಕು ಎಂದು ಯೋಚಿಸಿದೆ. ಬೆಂಗಳೂರಿಗೆ ಹೋದರೆ ಯಾವುದಾದ್ರೂ ಕೆಲಸಕ್ಕೆ ಸೇರಬಹುದು ಎಂದು ಹಲವರು ಸಲಹೆ ನೀಡಿದರು. ಹಾಗಾಗಿ, 2007ರಲ್ಲಿ ಬೆಂಗಳೂರಿಗೆ ಬಂದು ಫಿಸಿಯೋಥೆರಪಿ ಕೋರ್ಸ್‌ಗೆ ಸೇರಿಕೊಂಡೆ. ಸ್ವಲ್ಪ ದಿನಗಳ ನಂತರ ಒಂದು ಪಾರ್ಟ್‌ ಟೈಂ ನೌಕರಿಯೂ ಸಿಕ್ಕಿತು. ಕಲಿಕೆ ಮತ್ತು ಗಳಿಕೆ ಎರಡೂ ಜೊತೆಯಾದ ಸಂದರ್ಭ ಅದಾಗಿತ್ತು.

ಅವತ್ತು 2011ರ ಆಗಸ್ಟ್‌ 27. ಶನಿವಾರ. ಕುಟುಂಬದವರನ್ನೆಲ್ಲ ನೋಡಬೇಕು ಅನ್ನಿಸಿತು. ಇದೇ ವೇಳೆಗೆ, ಕೊಯಮತ್ತೂರಿಗೆ ಸಮೀಪವಿರುವ ತಿರುಪ್ಪುರ್‌ನಲ್ಲಿ ಶಾಪಿಂಗ್‌ ಮಾಡಲೆಂದು ನನ್ನ ಕ್ಲೋಸ್‌ಫ್ರೆಂಡ್ಸ್‌ ಕೂಡ ಹೊರಟಿದ್ದರು. ನಮೊ¾ಂದಿಗೇ ಬಂದುಬಿಡು, ಕಾರ್‌ ಇದೆ. ನಿನ್ನನ್ನು ಡ್ರಾಪ್‌ ಮಾಡಿ ಹೋಗ್ತೀವೆ ಅಂದರು. ನಾನೂ ಖುಷಿಯಿಂದಲೇ ಒಪ್ಪಿಕೊಂಡೆ. ಮಾರುತಿ 800 ಕಾರಿನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಹಿಂದಿನ ಸೀಟಿನಲ್ಲಿ ಕೂತು ವಾಕ್‌ಮನ್‌ನಲ್ಲಿ ಹಾಡು ಕೇಳುತ್ತಾ ಹಾಗೆಯೇ ನಿದ್ರೆಗೆ ಜಾರಿದ್ದೆ.

ಆಗ ನಡುರಾತ್ರಿ. ಕಾರು ವೇಗವಾಗಿ ಸಾಗುತ್ತಿತ್ತು. “ಎಲ್ಲಿದ್ದೀವಿ?’ ಎಂಬ ನನ್ನ ಪ್ರಶ್ನೆಗೆ “ಇನ್ನು ಹತ್ತಿಪ್ಪತ್ತು ನಿಮಿಷದಲ್ಲಿ ಕೃಷ್ಣಗಿರಿ ತಲುಪೆ¤àವೆ’ ಎಂದ ಡ್ರೆ„ವಿಂಗ್‌ ಸೀಟಿನಲ್ಲಿದ್ದ ಗೆಳೆಯ. ಆಗಲೇ ಆಕಸ್ಮಿಕವೊಂದು ನಡೆದುಹೋಯಿತು. ಇದ್ದಕ್ಕಿದ್ದಂತೆ ಅಡ್ಡಾದಿಡ್ಡಿ ಚಲಿಸಿದ ನಮ್ಮ ಕಾರು, ಪಲ್ಟಿ ಹೊಡೆದಂತೆ ಭಾಸವಾಯಿತು. ಹಿಂದೆಯೇ ಬಾಂಬ್‌ ಸ್ಫೋಟದಂಥ ಶಬ್ದ. ಆನಂತರದಲ್ಲಿ ಏನಾಯಿತೆಂದು ನನಗೆ ಗೊತ್ತಾಗಲಿಲ್ಲ.

ಎಚ್ಚರವಾದಾಗ, ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿರುವುದು ನನ್ನ ಅರಿವಿಗೆ ಬಂತು. ಕಣ್ತೆರೆಯಲು ಕಷ್ಟವಾಗುತ್ತಿತ್ತು. ಕೈ ಎತ್ತಲು, ಕಾಲುಗಳನ್ನು ಅಲುಗಾಡಿಸಲು ಆಗುತ್ತಲೇ ಇರಲಿಲ್ಲ. ಏನಾಗಿದೆ, ಏನಾಗಿದೆ ನನಗೆ ಎಂದು ವೈದ್ಯರಿಗೆ ಕೇಳಿದೆ. “ಅವತ್ತು ಕೃಷ್ಣಗಿರಿಯ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಮೂರು ಪಲ್ಟಿ ಹೊಡೀತು. ನಿಮ್ಗೆ ಅತೀ ಅನ್ನುವಷ್ಟು ಗಾಯವಾಗಿದೆ. ಪ್ರಾಣ ಉಳಿದಿದ್ದೇ ದೊಡ್ಡದು. ನೀವು ಲಕ್ಕಿ. ಟ್ರೀಟ್‌ಮೆಂಟ್‌ ನಡೀತಿದೆ. ಇನ್ನೂ 20 ದಿನ ಐಸಿಯುವಿನಲ್ಲೇ ಇರಬೇಕು’ ಅಂದರು ಡಾಕ್ಟರ್‌.

Advertisement

ಆನಂತರದಲ್ಲಿ ಒಂದೊಂದೇ ಸಂಗತಿಗಳು ಡಾಕ್ಟರ್‌ಗಳಿಂದ, ನರ್ಸ್‌ಗಳಿಂದ ಗೊತ್ತಾಗುತ್ತಾ ಹೋದವು. ಅಪಘಾತದ ತೀವ್ರತೆಗೆ ಮುಖ ಪೂರ್ತಿಯಾಗಿ ಜಜ್ಜಿಹೋಗಿತ್ತು. ಮೂಗಿನ ಮೂಳೆ ತುಂಡಾಗಿತ್ತು. ದವಡೆಗಳು ಮುರಿದಿದ್ದವು. ಹಲ್ಲುಗಳೆಲ್ಲ ಉದುರಿ ಹೋಗಿದ್ದವು. ಮುಖವೆಂಬುದು ಚಪಾತಿ ಹಿಟ್ಟಿನಂತೆ ಆಗಿಹೋಗಿತ್ತು. ಮುಖದ ಮೇಲಿನ ಚರ್ಮವನ್ನು ಕ್ಲೀನ್‌ ಮಾಡಿ ಅಲ್ಲಲ್ಲಿಗೆ ಅಂಟಿಸುವುದಕ್ಕೇ ಪೂರ್ತಿ 20 ದಿನ ಬೇಕಾಗಿತ್ತು. ಹೀಗೆ ಕ್ಲೀನ್‌ ಮಾಡುತ್ತಿದ್ದಾಗಲೇ ಕೆನ್ನೆಯ ಭಾಗದ ಮಾಂಸಕ್ಕೆ ಕಣ್ಣಿನ ಗುಡ್ಡೆಯೂ ಅಂಟಿಕೊಂಡಿರುವುದು ಗಮನಕ್ಕೆ ಬಂತು. ಅದನ್ನು ಹುಷಾರಾಗಿ ತೆಗೆದು ಜೋಡಿಸಿದ್ವಿ…’ ಅಂದಿದ್ದರು ಡಾಕ್ಟರ್‌. ನನ್ನ ಕೈಗಳನ್ನು ಮಂಚಕ್ಕೆ ಬಿಗಿದು ಕಟ್ಟಿದ್ದರು. ಎರಡು ಟ್ಯೂಬ್‌ಗಳನ್ನು ಹಾಕಿದ್ದಾರೆ. ಒಂದು ಉಸಿರಾಡಲಿಕ್ಕೆ, ಇನ್ನೊಂದು ಆಹಾರ ನೀಡುವುದಕ್ಕೆ ಎಂಬುದೂ ಅಷ್ಟರಲ್ಲಿ ನನಗೆ ಗೊತ್ತಾಗಿತ್ತು. ನಾನಿದ್ದ ವಾರ್ಡ್‌ನಲ್ಲಿ ಕನ್ನಡಿಯೇ ಇಲ್ಲದಂತೆ ನೋಡಿಕೊಂಡಿದ್ದರು. ಹಾಗಾಗಿ, ನಾನು ಹೇಗಿರಬಹುದು ಎಂಬ ಕಲ್ಪನೆಯೇ ನನಗಿರಲಿಲ್ಲ. ತಂಗಿಯನ್ನು ಕೇಳಿದ್ರೆ- “ನೀನು ಚೆನ್ನಾಗಿದೀಯ. ಏನೂ ಯೋಚನೆ ಮಾಡಬೇಡ’ ಎಂದಷ್ಟೇ ಹೇಳಿ ತಲೆ ಬಗ್ಗಿಸುತ್ತಿದ್ದಳು. 

ತಿಂಗಳ ನಂತರ, ಔಷಧಿ ಕುಡಿಯಲೆಂದು ಎದ್ದು ಕುಳಿತಿದ್ದೆ. ಆಗಲೇ ಬಾಗಿಲು ತಳ್ಳಿಕೊಂಡು ಡಾಕ್ಟರು ಬಂದಾಗ, ಗಾಜಿನ ಬಾಗಿಲಲ್ಲಿ ಕುಂಬಳಕಾಯಿಯಂತೆ ಊದಿಕೊಂಡಿದ್ದ, ವಿಕಾರ ರೂಪಿನ ಪ್ರತಿಬಿಂಬ ಕಾಣಿಸಿತು. ಅದು ನಾನೇ ಎಂದು ಗೊತ್ತಾದಾಗ ಎದೆಯೊಡೆದಂತಾಯಿತು. ನೂರಾರು ಹುಡುಗರಿಂದ ಸುರಸುಂದರಿ, ಕಾಲೇಜ್‌ ಕ್ವೀನ್‌ ಅನ್ನಿಸಿಕೊಂಡಿದ್ದವಳು ನಾನು. ಅಂಥವಳು ಇದೀಗ ಪರಮ ಕುರೂಪಿಯಾಗಿ ಬದಲಾಗಿದ್ದೆ. ಈ ರೂಪಿನಲ್ಲಿ ಬದುಕುವುದು ಹೇಗೆ? ಜೀವನ ಮಾಡುವುದು ಹೇಗೆ? ಜಗತ್ತಿಗೆ ಮುಖ ತೋರಿಸುವುದು ಹೇಗೆ ಅನ್ನಿಸಿ ಸಿಟ್ಟು, ಭಯ, ಅಸಹನೆ, ಸಂಕಟ ಎಲ್ಲವೂ ಆಯಿತು. ಆಸ್ಪತ್ರೆಯೇ ಅದುರಿಹೋಗುವಂತೆ- “ನೋ, ಐ ಡೋಂಟ್‌ ಲೈಕ್‌ ಇಟ್‌’ ಎಂದು ಚೀರಿದೆ. ಬಿಕ್ಕಿಬಿಕ್ಕಿ ಅಳತೊಡಗಿದೆ. ಮರುಕ್ಷಣವೇ ಐದಾರು ಮಂದಿ ನರ್ಸ್‌ಗಳು ಓಡಿಬಂದು ನನ್ನನ್ನು ಹಿಡಿದುಕೊಂಡು ಯಾವುದೋ ಔಷಧಿ ಕುಡಿಸಿದರು. ಮಂಪರು ಬಂದಂತಾಯಿತು. ಮತ್ತೆ ಎಚ್ಚರವಾದಾಗ, ಎದುರಿಗಿದ್ದ ಡಾಕ್ಟರ್‌ ಗಂಭೀರವಾಗಿ ಹೇಳಿದರು, “ನೀವು ಅಳಬಾರದು. ಅಕಸ್ಮಾತ್‌ ಅತ್ತರೆ, ಕಣ್ಣೀರು ಚರ್ಮಕ್ಕಿಳಿದು ಇನ್‌ಫೆಕ್ಷನ್‌ ಆಗಿಬಿಡುತ್ತೆ…’ ವೈದ್ಯರ ಮಾತನ್ನು ಮೀರುವುದು ಸರಿಯಲ್ಲ ಅನ್ನಿಸಿದಾಗ ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಏನೂ ಗೊತ್ತಿಲ್ಲದವಳಂತೆ ಇರುವುದನ್ನು ಅಭ್ಯಾಸ ಮಾಡಿಕೊಂಡೆ…’

ಈ ಪ್ರೇಮಕತೆಯ ಉಳಿದ ಭಾಗವನ್ನು ಜಯಪ್ರಕಾಶ್‌ ವಿವರಿಸುವುದು ಹೀಗೆ:
“ಇದು 2004ರ ಮಾತು. ನಾನಾಗ ಪಿಯುಸಿ ವಿದ್ಯಾರ್ಥಿ. ಸುನೀತಾ ನನ್ನ ಕ್ಲಾಸ್‌ಮೇಟ್‌. ಆಕೆ, ಇಡೀ ಕಾಲೇಜೇ ಆರಾಧಿಸುತ್ತಿದ್ದಂಥ ಸುಂದರಿ. ಅವಳ ಮೇಲೆ ನನಗೆ ಕ್ರಶ್‌ ಇತ್ತು. ಅವಳೆದುರು ನಿಂತು- ಐ ಲವ್‌ ಯೂ ಅನ್ನಬೇಕು ಅನ್ನಿಸ್ತಿತ್ತು. ಆದರೆ, ಅವಳ ಎದುರು ನಿಲ್ಲೋದಕ್ಕೆ ನನಗಷ್ಟೇ ಅಲ್ಲ; ಕಾಲೇಜಿನ ಯಾವ ಹುಡುಗನಿಗೂ ಧೈರ್ಯವಿರಲಿಲ್ಲ. ಕಾರಣ- ಸುನೀತಾ ತುಂಬಾ ಸ್ಟ್ರಾಂಗ್‌ ಗರ್ಲ್ ಆಗಿದ್ದಳು. ಐ ಲವ್‌ ಯೂ ಅನ್ನಲು ಹೋದರೆ – ಕಪಾಳಕ್ಕೆ ಎರಡು ಬಾರಿಸಿ, ತೆಪೆY ಓದಿಕೋ ಹೋಗು’ ಅಂದುಬಿಟ್ರೆ ಗತಿಯೇನು ಎಂಬ ಭಯ ಎಲ್ಲ ಹುಡುಗರಿಗೂ ಇತ್ತು. ಇದೆಲ್ಲಾ ಭಯದ ಮಧ್ಯೆಯೇ ವರ್ಷದ ಕೊನೆಯಲ್ಲಿ ಅವಳಿಗೆ ಆಟೋಗ್ರಾಫ್ ಬುಕ್‌ ಕೊಟ್ಟಿದ್ದೆ. ಅದರಲ್ಲಿ- ಒಂದ್ಸಲ ಭೇಟಿಯಾಗೋಣ. ಇಡೀ ದಿನ ಹರಟೆ ಹೊಡೆಯೋಣ’ ಎಂದು ಬರೆದಿದ್ದಳು ಸುನೀತಾ. ಈ ಸಂದೇಶವನ್ನು ಫ್ರೆಂಡ್ಸ್‌ಗೆಲ್ಲಾ ತೋರಿಸಿ ಖುಷಿಪಡುತ್ತಿದ್ದಾಗಲೇ ಅವಳು ಬೆಂಗಳೂರಿಗೆ ಹೋಗಿಬಿಟ್ರು. ಮೂರು ವರ್ಷದ ನಂತರ, ಅಂದರೆ 2007ರಲ್ಲಿ, ನನ್ನ ಹುಟ್ಟುಹಬ್ಬದ ದಿನ ಒಂದು ಫೋನ್‌ ಬಂತು. ನಾನು ಹಲೋ ಅನ್ನುತ್ತಿದ್ದಂತೆಯೇ – ನಾನ್‌ ಕಣೋ, ಸುನೀತಾ, ಹ್ಯಾಪಿ ಬರ್ತ್‌ಡೇ ಟು ಯೂ. ಹೇಗಿದೀಯ? ಹೇಗನ್ನಿಸ್ತಿದೆ ಲೈಫ‌ು?’ ಎಂದೆಲ್ಲಾ ಚಟಪಟನೆ ಮಾತಾಡಿದಳು. ಎದೆಯೊಳಗೇ ಉಳಿದಿದ್ದ “ಐ ಲವ್‌ ಯೂ’ ಎಂಬುದನ್ನು ಈಗಲಾದ್ರೂ ಹೇಳಿಬಿಡಬೇಕು ಅಂದುಕೊಳ್ಳುವಷ್ಟರಲ್ಲಿ- “ಸರಿ, ಮತ್ತೆ ಸಿಗೋಣ. ಬೈ ಫಾರ್‌ ಟುಡೇ. ಎಂಜಾಯ್‌ ಯುವರ್‌ ಡೇ’ ಎಂದು ಫೋನ್‌ ಇಟ್ಟುಬಿಟ್ಟಳು.

ಹೀಗೇ ದಿನಗಳು ಉರುಳುತ್ತಿದ್ದವು. 2011ರಲ್ಲಿ ನನ್ನ ಫ್ರೆಂಡೊಬ್ಬ ಫೋನ್‌ ಮಾಡಿ- ಸುನೀತಾಗೆ ಮೇಜರ್‌ ಆ್ಯಕ್ಸಿಡೆಂಟ್‌ ಆಗಿದೆಯಂತೆ. ಕೊಯಮತ್ತೂರಿನ ಆಸ್ಪತ್ರೇಲಿ, ಐಸಿಯುನಲ್ಲಿ ಇದ್ದಾಳಂತೆ’ ಅಂದ. ಆ ಸುದ್ದಿ ಕೇಳಿಯೇ ನಾನು ತತ್ತರಿಸಿಹೋದೆ. ನನ್ನ ಸುನೀತಾಳಿಗೆ ಏನೂ ತೊಂದರೆಯಾಗದಿರಲಿ ದೇವರೇ ಎಂದು ಪ್ರಾರ್ಥಿಸುತ್ತಲೇ ಆಸ್ಪತ್ರೆಗೆ ಹೋದರೆ- ವಿಕಾರವಾಗಿದ್ದ ಒಬ್ಬರನ್ನು ತೋರಿಸಿ, ಇವರೇ ಸುನೀತಾ ಅಂದರು. ಆ ಆಕೃತಿಗೆ ಕಣ್ಣುಗಳಿರಲಿಲ್ಲ. ತಲೆಕೂದಲು, ಕೆನ್ನೆ, ಮೂಗು, ಹಲ್ಲು, ದವಡೆ- ಇದೇನೂ ಇರಲಿಲ್ಲ. ಆ್ಯಕ್ಸಿಡೆಂಟ್‌ನ ತೀವ್ರತೆಗೆ ಮುಖವಿಡೀ ಛಿದ್ರವಾಗಿದೆ. ಎಲ್ಲ ಅಂಗಗಳೂ ಜಜ್ಜಿಹೋಗಿ ಒಂದರೊಳಗೊಂದು ಸೇರಿಹೋಗಿವೆ. ಅವನ್ನೆಲ್ಲಾ ಹುಡುಕಿ ತೆಗೆದು ಮತ್ತೆ ಜೋಡಿಸಬೇಕು. ಕಡಿಮೆ ಅಂದ್ರೂ 25 ಆಪರೇಷನ್ಸ್‌ ಆಗಬೇಕು ಅಂದರು.

ನನ್ನ ಪಾಲಿಗೆ ಕ್ರಶ್‌ ಆಗಿದ್ದವಳು, ಕನಸಾಗಿದ್ದವಳು, ಕಾಲೇಜ್‌ ಕ್ವೀನ್‌ ಅನ್ನಿಸಿಕೊಂಡಿದ್ದವಳು ಸುನೀತಾ. ಅಂಥವಳಿಗೆ ಇದೆಂಥಾ ದುರ್ಗತಿ ಬಂತಲ್ಲ ಅನ್ನಿಸಿ ದುಃಖವಾಯಿತು. ಯಾರು ಏನೆಂದುಕೊಳ್ತಾರೋ ಎಂಬುದನ್ನೂ ಯೋಚಿಸದೆ ಆಸ್ಪತ್ರೆಯಲ್ಲಿಯೇ ಜೋರಾಗಿ ಅತ್ತುಬಿಟ್ಟೆ. ಅಲ್ಲಿಂದ ಎದ್ದುಬರುವ ಮೊದಲೇ ನನಗೆ ನಾನೇ ಹೇಳಿಕೊಂಡೆ ಸುನೀತಾ ನನ್ನವಳು. ಅವಳು ಹೇಗಿದ್ರೂ ಪರವಾಗಿಲ್ಲ, ಅವಳೊಂದಿಗೆ ಬದುಕಬೇಕು. ಅವಳನ್ನು ಮದುವೆ ಆಗಬೇಕು…’

ನನ್ನ ನಿರ್ಧಾರ ಕೇಳಿ ಗೆಳೆಯರು, ಬಂಧುಗಳೆಲ್ಲಾ ಬೆಚ್ಚಿಬಿದ್ರು. ಆ ಹುಡುಗಿಗೆ ಮುಖವೇ ಇಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಅವಳು ಮತ್ತೆ ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಲೇ ಇರಬೇಕು. ಅಂಥವಳನ್ನು ಮದುವೆಯಾದ್ರೆ ಏನುಪಯೋಗ? ಮದುವೆ ಅಂದ್ರೆ ಹುಡುಗಾಟವಲ್ಲ. ದುಡುಕಿನ ನಿರ್ಧಾರ ತಗೋಬೇಡ… ಎಂದೆಲ್ಲಾ ಬುದ್ಧಿ ಹೇಳಿದ್ರು. ಇದು ನಮ್ಮ ಅಮ್ಮನ ಮಾತೂ ಆಗಿತ್ತು. ಆದ್ರೆ ಅಪ್ಪ ನನ್ನನ್ನು ಬೆಂಬಲಿಸಿದ್ರು. 2014ರಲ್ಲಿ ನಮ್ಮ ಮದುವೆ ಆಗೇಹೋಯ್ತು.

ಆನಂತರವಾದ್ರೂ ಜನ ಸುಮ್ಮನಾಗಲಿಲ್ಲ. ಸುನೀತಾಳನ್ನೂ, ನನ್ನನ್ನೂ ಅಯ್ಯೋ ಪಾಪ ಎಂಬಂತೆ ನೋಡಿದ್ರು. ಕೆಲವರು ಏನೋ ಗುಟ್ಟು ಹೇಳುವವರಂತೆ- “ಮಕ್ಳು ಮಾಡಿಕೋಬೇಡಿ. ಒಂದ್ವೇಳೆ ನಿನ್ನ ಹೆಂಡ್ತಿ ಥರದ್ದೇ ಕುರೂಪಿನ ಮುಖ ಮಕ್ಕಳಿಗೂ ಬಂದ್ರೆ ಗತಿ ಏನು?’ ಎಂದು ಸಲಹೆ ಕೊಟ್ಟರು! ಅಂಥ ಮಾತುಗಳನ್ನು ಕೇಳಿದಾಗೆಲ್ಲ ಜನರ ಮನಸ್ಥಿತಿ ಹಾಗೂ ಅವರ ಯೋಚನೆಯ ಮಟ್ಟದ ಬಗ್ಗೆ ಅಯ್ಯೋ ಅನ್ನಿಸ್ತಿತ್ತು.

ಮೊದಲೇ ಹೇಳಿದಂತೆ, ಕಾಲೇಜು ದಿನಗಳಲ್ಲಿ ನನ್ನ ಕನಸು ಮತ್ತು ಕ್ರಶ್‌ ಆಗಿದ್ದವಳು ಸುನೀತಾ. ಅವಳನ್ನು ತುಂಬಾ ಇಷ್ಟಪಟ್ಟು ಮದುವೆಯಾಗಿದೀನಿ. ಹೊರ ರೂಪದ ಸೌಂದರ್ಯವೇ ಮುಖ್ಯ ಅಂತ ನನಗೆ ಯಾವತ್ತೂ ಅನ್ನಿಸಿಲ್ಲ. ಇವತ್ತು ನಮ್ಮ ಬದುಕಿಗೆ ಎರಡು ಮುದ್ದಾದ ಕಂದಮ್ಮಗಳು ಬಂದಿವೆ. ಸುನೀತಾಳನ್ನು ಮದುವೆಯಾದ ಮೇಲೆ ನನ್ನ ಬದುಕಿಗೆ ಹೊಸ ಹುಮ್ಮಸ್ಸು ಬಂದಿದೆ. ಸುನೀತಾಳಿಗೆ ಒಂದೆರಡಲ್ಲ, 27 ಮೇಜರ್‌ ಆಪರೇಷನ್‌ಗಳಾಗಿವೆ. 27 ಬಾರಿ ಯಮರಾಜನನ್ನು ಸೋಲಿಸಿದವಳು ನನ್ನ ಹೆಂಡ್ತಿ ಎಂದು ಹೇಳಿಕೊಳ್ಳಲು ನನಗೆ ಖುಷಿ, ಹೆಮ್ಮೆ. ಬೆಂಗಳೂರಿನ ಸರ್ಜಾಪುರದ ಬಳಿ ಇರುವ ಹೆಲೆನ್‌ ಓ ಗ್ರೇಡ್‌ ಶಾಲೆಯಲ್ಲಿ ಮಕ್ಕಳಿಗೆ ನಾಟಕ ಕಲಿಸೋದು, ವ್ಯಕ್ತಿತ್ವ ವಿಕಸನದ ಪಾಠ ಮಾಡೋದು ನನ್ನ ಕೆಲಸ..’ ಅನ್ನುತ್ತಾರೆ ಜಯಪ್ರಕಾಶ್‌.

ಜನುಮದ ಜೋಡಿ ಎಂಬ ಮಾತಿಗೆ ಅನ್ವರ್ಥವಾಗಿ ಬದುಕುತ್ತಿರುವ ಈ ದಂಪತಿಗೆ ಶುಭಾಶಯ ಹೇಳಬೇಕು ಅನ್ನಿಸಿದರೆ – Sunithalive@gmail.com

ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next