ಶಿರಸಿ ಮೂಲದ ನ್ಯೂಜಿಲೆಂಡ್‌ನ ಹುಡುಗಿ ಲತಾ ಹೆಗಡೆ ಕನ್ನಡಕ್ಕೆ ಬಂದಿರುವ ವಿಚಾರ ನಿಮಗೆ ಗೊತ್ತಿರಬಹುದು. ಮಹೇಶ್ ಬಾಬು ನಿರ್ದೇಶನದ “ಆ ದಿನಗಳು’ ಚೇತನ್ ನಾಯಕರಾಗಿರುವ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿರುವ ಲತಾ ಹೆಗಡೆ ಈಗ ಕನ್ನಡದಲ್ಲಿ ಬಿಝಿಯಾಗುತ್ತಿದ್ದಾರೆ. ಮೊದಲ ಚಿತ್ರ ಮುಗಿಯುವ ಮುನ್ನವೇ ದಿಗಂತ್ ಜೊತೆ “ಉತ್ಸವ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗಕ್ಕೆ ಬಂದ ಕೆಲವೇ ತಿಂಗಳಲ್ಲಿ ಒಳ್ಳೆಯ ಅವಕಾಶಗಳು ಸಿಕ್ಕ ಬಗ್ಗೆ ಲತಾ ಹೆಗಡೆಖುಷಿಯಾಗಿದ್ದಾರೆ.
“ನಿಜಕ್ಕೂ ಖುಷಿಯಾಗುತ್ತಿದೆ. ಕನ್ನಡದಲ್ಲಿ ಚಿತ್ರರಂಗದಿಂದ ನನಗೆ ಒಳ್ಳೆಯ ಅವಕಾಶಗಳು ಬರುತ್ತಿವೆ. ಒಳ್ಳೆಯ ಸಿನಿಮಾಗಳ, ಪಾತ್ರಗಳ ಮೂಲಕ ಇಲ್ಲಿ ನೆಲೆ ನಿಲ್ಲುವ ಆಸೆ ಇದೆ’ ಎಂಬುದು ಲತಾ ಹೆಗಡೆ ಮಾತು. ಅಂದಹಾಗೆ, ನಿಖೀಲ್ ಕುಮಾರಸ್ವಾಮಿಯ ಎರಡನೇ ಸಿನಿಮಾಕ್ಕೆ ಲತಾ ನಾಯಕಿಯಾಗುತ್ತಾರೆಂಬ ಸುದ್ದಿ ಓಡಾಡುತ್ತಿತ್ತು. ಈ ಸುದ್ದಿಯನ್ನು ಲತಾ ಅಲ್ಲಗಳೆಯುತ್ತಾರೆ. “ನಾನು ಆ ಚಿತ್ರದ ಆಡಿಷನ್‌ಗೆ ಹೋಗಿದ್ದು ನಿಜ.
ಆದರೆ ಡೇಟ್ಸ್ ಸಮಸ್ಯೆಯಿಂದ ನನಗೆ ಆ ಸಿನಿಮಾದಲ್ಲಿ ನಟಿಸಲು ಆಗುತ್ತಿಲ್ಲ. ಆ ಚಿತ್ರ ಮೇಯಿಂದ ಶುರುವಾಗುತ್ತದೆ. ಆದರೆ, ನಾನು ನಟಿಸುತ್ತಿರುವ “ಉತ್ಸವ್’ ಚಿತ್ರದ ಚಿತ್ರೀಕರಣ ಇನ್ನೂ ನಡೆಯುತ್ತಿರುವುದರಿಂದ ನನಗೆ ಬೇರೆ ಯಾವ ಸಿನಿಮಾವನ್ನು ಒಪ್ಪಿಕೊಳ್ಳಲಾಗುತ್ತಿಲ್ಲ’ ಎನ್ನುವುದು ಲತಾ ಹೆಗಡೆಮಾತು. ಲತಾ ಹೆಗಡೆ ಮೂಲತಃ ಶಿರಸಿಯವರು. ಆದರೆ ಅವರ ಕುಟುಂಬ ಲತಾ ಹೆಗಡೆ ಆರನೇ ಕ್ಲಾಸಿನಲ್ಲಿರುವಾಗ ನ್ಯೂಜಿಲೆಂಡ್‌ಗೆ ಶಿಫ್ಟ್ ಆಗಿದೆ.
ಅಲ್ಲಿಗೆ ಲತಾ ಓದಿದ್ದು, ಬೆಳೆದಿದ್ದು ಎಲ್ಲವೂ ನ್ಯೂಜಿಲೆಂಡ್‌ನಲ್ಲಿ ಎಂದು ಪ್ರತ್ಯೇಕವಾಗಿ ಅಗತ್ಯವಿಲ್ಲ. ಲತಾ ಕುಟುಂಬ ವಿದೇಶದಲ್ಲಿದ್ದರೂ ಕನ್ನಡ ಪ್ರೀತಿ ಬಿಟ್ಟಿರಲಿಲ್ಲವಂತೆ. ಹಾಗಾಗಿಯೇ ಮನೆಯಲ್ಲಿ ಕನ್ನಡ ಮಾತನಾಡುತ್ತಾ, ಮಗಳಿಗೂ ಕನ್ನಡದ ಬಗ್ಗೆ ಹೇಳಿಕೊಟ್ಟಿದ್ದಾರೆ. ಹಾಗಾಗಿಯೇ ನ್ಯೂಜಿಲೆಂಡ್‌ನಿಂದ ಬಂದ ಲತಾ ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ. ಜೊತೆಗೆ ಮಗಳು ಭಾರತಕ್ಕೆ ಹೋಗಬೇಕು, ಅಲ್ಲಿ ಏನಾದರೂ ಸಾಧನೆ ಮಾಡಬೇಕು.
ಅದರಲ್ಲೂ ಕನ್ನಡ ನೆಲದಲ್ಲಿ ಆಕೆಯ ಸಾಧನೆಗೊಂದು ವೇದಿಕೆ ಸಿಗಬೇಕೆಂಬ ಆಸೆ ಇತ್ತಂತೆ. ಅದು ಈಗ ಈಡೇರಿದೆ. ಮೊದಲು ತೆಲುಗು, ತಮಿಳಿನಲ್ಲಿ ಅವಕಾಶ ಸಿಕ್ಕರೂ ಈಗ ಕನ್ನಡದಲ್ಲಿ ಮಗಳು ಬಿಝಿಯಾಗುತ್ತಿರುವ ಬಗ್ಗೆ ಖುಷಿ ಇದೆಯಂತೆ. “ಅವರಿಗೆ ನಾನು ಭಾರತಕ್ಕೆ ಬರಬೇಕೆಂಬ ಆಸೆ ಇತ್ತು. ಅದರಲ್ಲೂ ಕನ್ನಡ ನೆಲದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ಇತ್ತು. ನನಗೆ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಅವರು ತುಂಬಾ ಖುಷಿಪಟ್ಟರು.
ಒಳ್ಳೊಳ್ಳೆ ಪಾತ್ರಗಳ ಮೂಲಕ ನಾನು ಚಿತ್ರರಂಗದಲ್ಲಿ ನೆಲೆನಿಲ್ಲಬೇಕೆಂಬ ಆಸೆ ಅವರಿಗಿದೆ’ ಎನ್ನುತ್ತಾರೆ ಲತಾ. ಅಂದಹಾಗೆ, ನಿರ್ದೇಶಕ ಮಹೇಶ್ ಬಾಬು ಲಾಂಚ್ ಮಾಡಿದ ನಾಯಕಿಯರು ಬಿಝಿಯಾಗುತ್ತಾರೆ, ಚಿತ್ರರಂಗದಲ್ಲಿ ನೆಲೆನಿಲ್ಲುತ್ತಾರೆ ಎಂಬ ಮಾತಿದೆ. ಅದಕ್ಕೆ ಸರಿಯಾಗಿ ಒಂದಷ್ಟು ನಾಯಕಿಯರು ಕೂಡಾ ಬಿಝಿಯಾಗಿದ್ದಾರೆ. ಈ ವಿಷಯ ಲತಾ ಕಿವಿಗೂ ಬಿದ್ದಿದೆ. ಲತಾ ಕೂಡಾ ಆಶಾ ಭಾವನೆಯೊಂದಿಗೆ ಎದುರು ನೋಡುತ್ತಿದ್ದಾರೆ.