ಮೈಸೂರು: ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಮಾಡಿರುವುದನ್ನು ಇಲ್ಲ ಎಂದಾಗ ಸುಮ್ಮನಿರಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಸಂಸದ ಸುಮಲತಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ವಿಶ್ವಾಸವಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಕ್ರೆಡಿಟ್ ತೆಗೆದುಕೊಳ್ಳಲು ನಾನು ಮಾಡುವುದಿಲ್ಲ. ನಿಜ ಹೇಳಲು ಭಯ ಯಾಕೆ? ಕ್ರೆಡಿಟ್ ವಾರ್ ಯಾರು ಆರಂಭಿಸುತ್ತಾರೋ ಅವರು ಅವರ ಜವಾಬ್ದಾರಿ ಬಗ್ಗೆ ನೋಡಿಕೊಳ್ಳಬೇಕು. ಸಂಸದರ ಕ್ರೆಡಿಟ್ ಪಡೆಯುವುದಕ್ಕೆ ಏಕೆ ಬರುತ್ತಿದ್ದಾರೆ ಗೊತ್ತಿಲ್ಲ ಎಂದರು.
ಶಿಂಷಾ ಸೇತುವೆ ವಿಚಾರದಲ್ಲಿ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಆಯಾ ಕ್ಷೇತ್ರದ ಸಂಸದ ಆಯಾ ಕ್ಷೇತ್ರದ ಬಗ್ಗೆ ಕೇಳಿದರೆ ಪ್ರತಿಕ್ರಿಯೆ ಸಿಗುತ್ತದೆ. ಯಾರು ಬೇಕಾದರೂ ಪತ್ರ ಬರೆದಿರಬಹುದು. ಮಾಜಿ ಪ್ರಧಾನಿ ಅಥವಾ ಬೇರೆಯವರು ಬರೆದಿರಬಹುದು. ಅವರು ಏನು ಬರೆದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಮಾಡಿದ ಕೆಲಸ ಮಾಡಿಲ್ಲವೆಂದು ಹೇಳಿದರೆ ನಾನು ಸುಮ್ಮನಿರಲ್ಲ ಎಂದು ಸುಮಲತಾ ಹೇಳಿದರು.
ಇದನ್ನೂ ಓದಿ:ಪ್ರಶ್ನೋತ್ತರ ಕಲಾಪಕ್ಕೆ ಸಚಿವರೇ ಗೈರು; ಆಡಳಿತ ಪಕ್ಷದ ಸದಸ್ಯರಿಂದಲೇ ಆಕ್ಷೇಪ
ಟಾರ್ಗೆಟ್ ಮಾಡುವುದು ಮೊದಲ ದಿನದಿಂದಲೂ ನಡೆದಿದೆ. ನನ್ನ ಜಿಲ್ಲೆಗೆ ಸಂಬಂಧಪಟ್ಟ ವಿಚಾರ ಮಾತ್ರ ನಾನು ಮಾತನಾಡುತ್ತೇನೆ. ನಾನು ಏನೇ ಮಾಡಿದರು ವಿರೋಧ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾನು ಕೆಲಸ ಮಾಡುತ್ತೇನೆ, ಜನ ನನ್ನ ಪರ ಮಾತನಾಡುತ್ತಾರೆ ಎಂಬ ಭಯವಿದೆ ಎಂದು ಕುಟುಕಿದರು.