Advertisement

ಬೆಂಗಳೂರು ವಿವಿ: ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್; ರವಿಕುಮಾರ್ ಖಂಡನೆ

06:24 PM Jan 31, 2022 | Team Udayavani |

ಬೆಂಗಳೂರು: ಪ್ರತಿಭಟನಾ ನಿರತ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿಚಾರ್ಜ್ ಮಾಡಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹೇಳಿದ್ದಾರೆ.

Advertisement

ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯವು ಸಾವಿರಾರು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಿಸದಿರುವ ಹಾಗೂ ಇತರೆ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸರು ಮನಸೋ ಇಚ್ಛೆ ಬಂದಂತೆ, ಅತ್ಯಂತ ಕ್ರೌರ್ಯವಾಗಿ ನೂರಾರು ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಕುಲಪತಿಗಳ ಜೊತೆ ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆ ಕುರಿತು ಮಾತುಕತೆ ನಡೆಸಬಹುದಿತ್ತು, ಅಲ್ಲದೇ ಪರಿಸ್ಥಿತಿ ತುಂಬಾ ಕೈ ಮೀರಿದ್ದರೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಬಂಧಿಸಬಹುದಿತ್ತು, ಆದರೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ಮಾಡಿ ಹಲವಾರು ವಿದ್ಯಾರ್ಥಿಗಳ ತಲೆ ಒಡೆಯುವ ಹಾಗೂ ಕೈಕಾಲುಗಳಿಗೆ ಗಾಯಗಳಾಗುವ ರೀತಿಯಲ್ಲಿ ಅಮಾನವೀಯವಾಗಿ ಪೊಲೀಸರು ಹಲ್ಲೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಮಾನ್ಯ ಗೃಹ ಸಚಿವರು ಕೂಡಲೇ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಾಗೂ ಶೀಘ್ರವಾಗಿ ಪರೀಕ್ಷಾ ಫಲಿತಾಂಶ ಬಿಡುಗಡೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರು, ಕುಲಪತಿಗಳು ಗಮನಹರಿಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next