ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಹಾಗೂ ಟಿಖ್ರಿ ಗಡಿಯಿಂದ ಟ್ರ್ಯಾಕ್ಟರ್ ಮೂಲಕ ಸಾವಿರಾರು ಟ್ರ್ಯಾಕ್ಟರ್ ಗಳ ಮೂಲಕ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಲಂಚ ಪ್ರಕರಣ: ಕಂದಾಯ ಸಚಿವ ಅಶೋಕ್ ಪಿಎ ವಿರುದ್ಧ ದೂರು ದಾಖಲು
ಬ್ಯಾರಿಕೇಡ್ ಕಿತ್ತೆಸೆದು ಒಳನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪ್ರತಿಭಟನಾ ನಿರತ ರೈತರ ಮೇಲೆ ಲಘು ಲಾಠಿ ಪ್ರಹಾರ ನಡೆಸಲು ಪೊಲೀಸರು ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಗಣರಾಜ್ಯೋತ್ಸವ(ಜನವರಿ 26, 2021) ದಿನಾಚರಣೆಯಂದು ಕೇಂದ್ರದ ಮೂರು ಕೃಷಿ ಕಾಯ್ದೆ ವಿರುದ್ಧ ಬೃಹತ್ ಪ್ರಮಾಣದಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ 41 ರೈತ ಸಂಘಟನೆಗಳು ತಿಳಿಸಿದ್ದವು.
ಅಕ್ಷರಧಾಮ, ಗಾಜಿಪುರ ಗಡಿಯಲ್ಲಿ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗಿಸುವ ಮೂಲಕ ಪ್ರತಿಭಟನಾ ನಿರತ ರೈತರನ್ನು ತಡೆಯಲು ಹರಸಾಹಸ ಪಡುತ್ತಿರುವುದಾಗಿ ವರದಿ ವಿವರಿಸಿದೆ. ಗಣರಾಜ್ಯೋತ್ಸವ ಪರೇಡ್ ಅಂತ್ಯಗೊಂಡ ನಂತರ ಟ್ರ್ಯಾಕ್ಟರ್ ರಾಲಿ ನಡೆಸಲು ಅನುಮತಿ ನೀಡುವುದಾಗಿ ಭದ್ರತಾ ಸಿಬಂದಿಗಳು ರೈತರ ಮನವೊಲಿಸಲು ಪ್ರಯತ್ನಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕೆಲವು ರೈತರ ಗುಂಪು ಪೊಲೀಸರ ಎಚ್ಚರಿಕೆಯನ್ನು ಲೆಕ್ಕಿಸದೇ ಬ್ಯಾರಿಕೇಡ್ ಕಿತ್ತೆಸೆದು ಔಟರ್ ರಿಂಗ್ ರೋಡ್ ಮೂಲಕ ಮುನ್ನುಗ್ಗಲು ಯತ್ನಿಸಿರುವುದಾಗಿ ಅಧಿಕಾರಿಗಳು ಆರೋಪಿಸಿದ್ದಾರೆ. ಟ್ರ್ಯಾಕ್ಟರ್ ರಾಲಿ ಸಂದರ್ಭದಲ್ಲಿ ಟಿಖ್ರಿ ಗಡಿ ಪ್ರದೇಶದಲ್ಲಿ ರೈತರು ಆಡಳಿತಾರೂಢ ಬಿಜೆಪಿಯ ಪೋಸ್ಟರ್ ಅನ್ನು ಹರಿದು ಹಾಕಿರುವುದಾಗಿ ವರದಿ ತಿಳಿಸಿದೆ.
ದೆಹಲಿಯ ಸಂಜಯ್ ಗಾಂಧಿ ಟ್ರಾನ್ಸ್ ಪೋರ್ಟ್ ನಗರದತ್ತ ಟ್ರ್ಯಾಕ್ಟರ್ ರಾಲಿ ಮೂಲಕ ರೈತರು ಒಳಪ್ರವೇಶಿಸಿದಾಗ ಪೊಲೀಸರು ತಡೆದಾಗ ಘರ್ಷಣೆ ನಡೆದಿದ್ದು, ಈ ವೇಳೆ ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದಿರುವುದಾಗಿ ವರದಿ ವಿವರಿಸಿದೆ.