ಪಾಟ್ನಾ : ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಸಿಟಿಇಟಿ ಮತ್ತು ಬಿಟಿಇಟಿ ಅಭ್ಯರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು,ತ್ರಿವರ್ಣ ಧ್ವಜ ಕೈಯಲ್ಲಿದ್ದರೂ ಪೊಲೀಸರು ಅಮಾನವೀಯವಾಗಿ ಥಳಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಲಾಗಿದೆ. ಈ ಬಗ್ಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ, ಪೊಲೀಸ್ ಅಧಿಕಾರಿ ತಪ್ಪಿತಸ್ಥರೆಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಹೇಳಿದ್ದಾರೆ.
ಬಿಹಾರದ ರಾಜಧಾನಿಯ ಹೃದಯಭಾಗದಲ್ಲಿ ಸಾವಿರಾರು ಜನರು, ಹಲವಾರು ಬೇಡಿಕೆಗಳನ್ನು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸಿದಾಗ ಪೊಲೀಸರು ಲಾಠಿ ಚಾರ್ಜ್ ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ.
ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಅವರ ಪ್ರಕಾರ, ಡಕ್ ಬಂಗಲೆ ಕ್ರಾಸಿಂಗ್‌ನಲ್ಲಿ ಎರಡು ಪ್ರತ್ಯೇಕ ಗುಂಪುಗಳು ಭುಗಿಲೆದ್ದವು, ಒಂದು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಮತ್ತು ಇನ್ನೊಂದು ಜನ ಅಧಿಕಾರ ಪಕ್ಷದ ಕಾರ್ಯಕರ್ತರನ್ನು ಒಳಗೊಂಡಿದ್ದು, ರಾಜಭವನದ ಕಡೆಗೆ ಹೋಗಲು ಪ್ರಯತ್ನಿಸಿದರು.
ಐದು ಸದಸ್ಯರ ನಿಯೋಗವು ಮ್ಯಾಜಿಸ್ಟ್ರೇಟ್ ಜತೆಗೆ ರಾಜಭವನಕ್ಕೆ ಭೇಟಿ ನೀಡಿ ಜ್ಞಾಪಕ ಪತ್ರವನ್ನು ಸಲ್ಲಿಸಬಹುದು ಎಂಬ ಪ್ರಸ್ತಾಪದ ಹೊರತಾಗಿಯೂ ಅವರು ನಿರಾಕರಿಸಿದ್ದರಿಂದ ಸೌಮ್ಯವಾದ ಬಲಪ್ರಯೋಗವನ್ನು ಆಶ್ರಯಿಸಲಾಗಿದೆ ಎಂದು ಡಿಎಂ ಹೇಳಿದರು.
ಏತನ್ಮಧ್ಯೆ,ಯುವ ಪ್ರತಿಭಟನಾಕಾರ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನೆಲದ ಮೇಲೆ ಉರುಳುತ್ತಾ, ತಲೆಯ ಭಾಗದತ್ತ ಬೀಳುತ್ತಿದ್ದ ಲಾಠಿಯ ಹೊಡೆತಗಳ ನ್ನು ಸಹಿಸಲಾಗದೆ ನೋವಿನಿಂದ ನರಳುತ್ತಿರುವ ವೀಡಿಯೊ ಕ್ಲಿಪ್ ವೈರಲ್ ಆಗಿದೆ.