Advertisement
ಬದುಕು ಬಾಲ್ಯ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಪದವು ದಿವಾಣ ಎಂಬಲ್ಲಿ ದಿ| ಭೀಮ ಭಟ್ಟ -ಪರಮೇಶ್ವರಿ ಆಮ್ಮ ದಂಪತಿಯ ಪುತ್ರನಾಗಿ 1929ರ ಅಕ್ಟೋಬರ 2ರಂದು ಗಣಪತಿ ದಿವಾಣರು ಜನಿಸಿದರು. ಸಾವಿತ್ರಿ, ಲಕ್ಷ್ಮೀ, ಸರಸ್ವತಿ, ಶಾರದಾ ಅವರು ಸಹೋದರಿಯರು.
Related Articles
Advertisement
ಪ್ರಥಮವಾಗಿ ಬೇಳದಲ್ಲಿ ಹೊಟೇಲ್ ಮಾಣಿಯಾಗಿ ಕೆಲಸ ನಿರ್ವಹಿಸುತ್ತಿ¤ದ್ದ ದಿ| ದಿವಾಣರ ಕವನ ಲೇಖನಗಳನ್ನು ಆಗಲೇ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಅವರಿಗೆ ಲೋಕ ಸಮಾಜವೇ ವಿದ್ಯಾಭ್ಯಾಸ ನೀಡಿದ ವಿಶ್ವವಿದ್ಯಾಲಯ. ಕನ್ನಡದ ಸೇವೆಯೇ ಅವರ ಇಂಗಿತವಾಯಿತು. ಬಾಲ್ಯಾರಭ್ಯ ಕನ್ನಡವನ್ನು, ಸಾಹಿತ್ಯವನ್ನು, ಕಾವ್ಯರಚನೆಯನ್ನು ತಪಸ್ಸಿನಂತೆ ನಡೆಸುತ್ತಾ ಬಂದು ಕಾಸರಗೋಡಿನ ಸಾಹಿತ್ಯಲೋಕದ ಕವಿಶ್ರೇಷ್ಠರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು.ಸಾಮಾಜಿಕ, ರಾಜಕೀಯ ಒಳಹೊರಗುಗಳನ್ನು ಅರಿತಿದ್ದ ದಿ| ದಿವಾಣರು ಮಂಗಳೂರುನಿಂದ ಪ್ರಕಟವಾಗು ತ್ತಿದ್ದ “ಸಂಗಾತಿ’ ವಾರಪತ್ರಿಕೆಯಲ್ಲಿ “ದರ್ಪಣಾ ಚಾರ್ಯ’ ಎಂಬ ಹೆಸರಲ್ಲಿ ಬರೆಯುತ್ತಿದ್ದ “ಕ್ಷಕಿರಣ’ ಎನ್ನುವ ಅಂಕಣ ಅತ್ಯಂತ ಜನಪ್ರಿಯವಾಗಿದ್ದು ಉನ್ನತ ಮಟ್ಟದಲ್ಲಿ ಚರ್ಚಾ ವಿಷಯವಾಗುತ್ತಿತ್ತು. ದಿ| ಗಣಪತಿ ದಿವಾಣರು ಕರ್ಮವೀರ, ರಾಷ್ಟ್ರಮತ, ರಾಷ್ಟ್ರಬಂಧು, ಮುಂಗಾರು, ಯುಗಪುರುಷ, ಸಂಪ್ರಭ, ಹವ್ಯಕ ವಾರ್ತೆ, ದರ್ಪಣ, ಹೊಸಸಂಜೆ, ಮಂಗಳೂರು ಮಿತ್ರ, ಕಾಸರಗೋಡಿನ ನಾಡಪ್ರೇಮಿ, ಗಡಿನಾಡು, ಕಾರವಲ್ ಮುಂತಾದ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿದ್ದಾರೆ. ಅವರು ಆಕಾಶವಾಣಿ ಕಲಾವಿದರಾಗಿಯೂ ಅನೇಕ ತುಳು -ಕನ್ನಡ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ದಿ| ಗಣಪತಿ ದಿವಾಣರ ಹಲವು ಕೃತಿಗಳು: ಅನ್ನಕ್ಕಾಗಿ (ನೀಳYತೆ), ಕಲ್ಲು ಸಕ್ಕರೆ ಭಾಗ -1 (ಪದ್ಯ ರೂಪದ ಒಗಟುಗಳು), ದಿವಾಣ ದರ್ಪಣ (ಹನಿ ಕವನಗಳು, ಚುಟುಕುಗಳು ಮತ್ತು ಕವನಗಳು), ಅಣ್ಣ ಕಳ್ಳಿಗೆ (ಕಳ್ಳಿಗೆ ಮಹಾಬಲ ಭಾಡಾರಿಯರ ವ್ಯಕ್ತಿ ಚಿತ್ರಣ), ಕನ್ನಾಟಿ (ಹವ್ಯಕ ಭಾಷಾ ಕವನಗಳು), ಅಕ್ಷರ ಕಜ್ಜಾಯ(ಮಕ್ಕಳಿಗಾಗಿ 19 ಅಕ್ಷರಗಳಿಗೆ 19 ಕವನಗಳು), ಅಮƒತ (26 ದೇವರ ಭಜನೆಗಳು), ಹೋಳಿಗೆ ಜೋಳಿಗೆ (29 ನಗೆ ಬರಹಗಳು), ಚಿಪ್ಪಿನೊಳಗಿನ ಜೀವ (340 ಒಗಟುಗಳು) ಮಗಳಿಗೆ ಪತ್ರ ( ಅಂಕಣ ಬರಹಗಳು) ಅಲ್ಲದೆ ಬೆನ್ಪುನ ನರಮಾನಿ, ಮೀಸೆ ಇತ್ತಿ ಆಣುಗುಳು (ತುಳು ಪದ್ಯಾವಳಿ), ಕೊಂಭು ವಾದ್ಯೊ (ತುಳು ಕವನಗಳು) ಮೊದಲಾದವುಗಳು ಅವರು ರಚಿಸಿದ ತುಳು ಕೃತಿಗಳಾಗಿವೆ. ತೊಡಿಕ್ಕಾನ ಮಲ್ಲಿಕಾರ್ಜುನ ವೈಭವ, ಶ್ರೀ ಕೃಷ್ಣ ವೈಭವ ಮೊದಲಾದ ಧ್ವನಿಸುರುಳಿಗಳನ್ನೂ ಹೊರತಂದಿದ್ದಾರೆ. ತಮ್ಮದೇ ಆದ ದಿವಾಣ ಪ್ರಕಾಶನ, ಎಡನಾಡು ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಕೃತಿಗಳನ್ನು ಪ್ರಕಾಶನಗೊಳಿಸಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ದಿ| ಗಣಪತಿ ದಿವಾಣರ ಸುಮಾರು 10 ಸಾವಿರಕ್ಕೂ ಹೆಚ್ಚು ಲೇಖನಗಳು, ಅನಿಸಿಕೆ ಗಳು, ಕವನಗಳು ಪ್ರಕಟವಾಗಿವೆ. ಅವರ ಈ ಕೆಳಗಿನ ಕೃತಿಗಳು ಹಸ್ತಪ್ರತಿಗಳಲ್ಲೇ ಇದ್ದು ಅಪ್ರಕಟಿತವಾಗಿಯೇ ಉಳಿದಿವೆ. ತೋಡಿಕಾನ ದೇವರೆ (ಭಜನೆಗಳು), ಮಾಳೊಡ್ª ಮಂಟಪೊಗು ( ತುಳು ಕತೆಗಳು) ಕಲ್ಲು ಸಕ್ಕರೆ ಭಾಗ -2 (ಪದ್ಯ ರೂಪದ ಒಗಟುಗಳು), ಶಾರದ ಸಾರ (ಅಂಕಣ ಬರಹಗಳು), ಸತ್ಯದ ಸಾûಾತ್ಕಾರ (ಅರ್ಥ ಸಹಿತ ಯಕ್ಷಗಾನ ಪ್ರಸಂಗ), ಉಪ್ಪಿನಕಾಯಿ (ವಿಡಂಬನಾ ಬರಹಗಳು), ಮಣಿಸರ (ಮಕ್ಕಳಿಗಾಗಿ ಕವನಗಳು), ಪುಟ್ಟನ ಪುರಾಣ(ಮಕ್ಕಳಿಗಾಗಿ ಕತೆಗಳು), ಬಿಚ್ಚಿ-ಮೆಚ್ಚಿ (ಹನಿ ಕವನಗಳು), ಹೈವ-ಭವ (ಹವ್ಯಕ ಭಾಷಾ ಪ್ರಬಂಧಗಳು). ಪ್ರಶಸ್ತಿ ಸಮ್ಮಾನಗಳು: ದಿವಾಣರ ಸಾಹಿತ್ಯ ಸೇವೆಯನ್ನು ಕೇರಳ – ಕರ್ನಾಟಕ ಸರಕಾರಗಳು ಗುರುತಿಸದಿದ್ದರೂ ನಾಡಿನ ವಿವಿಧ ಭಾಗಗಳಲ್ಲಿ ಅವರನ್ನು ಸಮ್ಮಾನಿಸಿ ಗೌರವಿಸ ಲಾಗಿದೆ. ಮುಖ್ಯವಾಗಿ ಕಾಂತಾವರ ಕನ್ನಡ ಸಂಘದಿಂದ, ಕಾಸರಗೋಡು ಕರ್ನಾಟಕ ಸಮಿತಿ, ಬಂಟ್ವಾಳದ ಸುಮುಖ ಪ್ರಕಾಶನ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಮತ್ತು ವಕೀಲರ ಸಂಘದ ವತಿಯಿಂದ ಡಾ| ಶಿವರಾಮ ಕಾರಂತರ ಮೂಲಕ, ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ವಿಶೇಷ ಘಟಕದ ವತಿಯಿಂದ ಸಮ್ಮಾನಿಸಿ ಗೌರವಿಸಲಾಗಿದೆ. 1998ರಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಅವರಿಗೆ ಲಭಿಸಿತ್ತು. ಬಂಟ್ವಾಳದ ಪ್ರತಿಷ್ಠಿತ ಮುಗುಳಿ ಮನೆತನದ ಗಣಪತಿ ಭಟ್ ಮತ್ತು ಚಕ್ರಕೋಡಿ ಶಾಸ್ತ್ರಿ ಮನೆತನದ ಸಣ್ಣಮ್ಮ ಯಾನೆ ತಿರುಮಲೇಶ್ವರಿ ದಂಪತಿಯ ಸುಪುತ್ರಿ ಶಾರದಾರನ್ನು ವಿವಾಹವಾದ ದಿ| ಗಣಪತಿ ದಿವಾಣರಿಗೆ ಭೀಮ ಭಟ್, ಗೋಪಾಲಕೃಷ್ಣ ದಿವಾಣ, ಶಿವಶಂಕರ ದಿವಾಣ (ಯಕ್ಷಗಾನ ಕಲಾವಿದ), ರವಿರಾಜ, ಸತ್ಯನಾರಾಯಣ, ಶ್ರೀರಾಮ ದಿವಾಣ (ಸಾಹಿತಿ -ಲೇಖಕ) ಪುತ್ರರು. ಏಕ ಮಾತ್ರ ಪುತ್ರಿ ಸರ್ವೇಶ್ವರಿ. ಸಾವಿರಗಳ ಬರಹಗಾರ ಅವರು ದಿವಾಣ ಧೀಮಂತ ಕುಟುಂಬದಲ್ಲಿ ಜನ್ಮವೆತ್ತಿದರೂ ಬಾಲಾರಭ್ಯ ಶ್ರೀಮಂತಿಕೆೆ ಗಳಿಸದೆ ಕೇವಲ ಧೀಮಂತಿಕೆಯನ್ನು ತನ್ನ ಸಾಹಸಮಯ ಜೀವನ ಶ್ರದ್ಧೆಯಿಂದ ಉಳಿಸಿ ಬೆಳೆಸಿದವರು. ಅವರು 1999ರ ಜ. 19ರಂದು ಬದುಕಿಗೆ ವಿದಾಯ ಹಾಡಿದರೂ ಈಗಲೂ ತಮ್ಮ ಬರಹಗಳ ಮೂಲಕ ಬದುಕಿದ್ದಾರೆ. ಲೇಖನ: ಕೇಳು ಮಾಸ್ತರ್ ಅಗಲ್ಪಾಡಿ