ಕಲೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಚಲನಶೀಲತೆಯೇ ಜೀವಾಳ. ಹೊಸ ನೀರು ಹರಿದು ಹಳೆನೀರು ಪಲ್ಲಟಗೊಳ್ಳುವುದೇ ಇಲ್ಲಿನ ದೈನಂದಿನ ಚಟುವಟಿಕೆ. ಯಾರಿಗಾದರೂ ನಿರಂತರ ಒಂದು ಅಥವಾ ಎರಡು ದಶಕಗಳ ವೃತ್ತಿ ಜೀವನ ಪ್ರಾಪ್ತವಾದರೆ ಅದೊಂದು ಗಣನೀಯ ಸಾಧನೆಯೇ. ಅಂಥದ್ದರಲ್ಲಿ ಸಿನೆಮಾ ಹಾಡುಗಾರಿಕೆಯಂತಹ ಅತೀ ಚಂಚಲ ಕ್ಷೇತ್ರದಲ್ಲಿ ಐದಾರು ದಶಕ ನಿರಂತರ ಚಾಲ್ತಿಯಲ್ಲಿರುವುದೆಂದರೆ ಅದು ಯುಗಕ್ಕೊಮ್ಮೆ ಯಾರೋ ಒಂದಿಬ್ಬರಿಗೆ ಸಿದ್ಧಿಸಬಹುದಾದ ಸಾಧನೆ. ಅಂತಹ ಮೇರು ಸಾಧಕಿಯೇ ನಮ್ಮ ಲತಾ ದೀನನಾಥ್ ಮಂಗೇಶ್ಕರ್.
ಕಲೆಗಾರರ ಕುಟುಂಬದಲ್ಲಿ ಹುಟ್ಟಿದ ಹೇಮಾ ಮಂಗೇಶ್ಕರ್ ತನ್ನ 13ನೇ ವಯಸ್ಸಿನಲ್ಲೇ ಸೊಗಸಾಗಿ ಹಾಡಲು ಆರಂಭಿಸಿ ಏಳು ದಶಕಗಳ ಕಾಲ 36 ಭಾಷೆಗಳಲ್ಲಿ 36 ಸಾವಿ ರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ಅಮೋಘ ದಂತಕಥೆ ಎನಿಸಿಕೊಂಡ ಲತಾ ಮಂಗೇಶ್ಕರ್ ಆಗಿ ಬೆಳೆದಿದ್ದು ಅತ್ಯಂತ ಮಧುರಾತಿಮಧುರ ಸಂಗೀತ ಯಾನ. ಸ್ವಾತಂತ್ರ್ಯ ಪೂರ್ವದಲ್ಲೇ ಹಾಡಲು ಪ್ರಾರಂಭಿ ಸಿದ್ದ ಇವರು ಸ್ವಾತಂತ್ರ್ಯದ ಬಳಿಕದ ಆರೇಳು ದಶಕಗಳಲ್ಲಿ ಸಿನೆಮಾ ಗಾಯನ ಕ್ಷೇತ್ರವನ್ನು ನಿರಂತರ ಆವರಿಸಿ ವಯೋ ಸಹಜವಾಗಿ ಶರೀರದ ಶಕ್ತಿ ಉಡುಗಿ ಹೋಗುವವರೆಗೂ ಹಾಡುತ್ತಲೇ ಬದುಕಿದ್ದು ಪರಮ ಅದ್ಭುತ. ಕೆಲವೇ ಕೆಲವು ಸಾಧಕರು ತಾವು ಆರಿಸಿಕೊಂಡ ಕ್ಷೇತ್ರದ ಮುಖವಾಗಿ, ಸಂಕೇತವಾಗಿ, ಹೆಗ್ಗಳಿಕೆಯಾಗಿ ಆ ಕ್ಷೇತ್ರದ ನಡೆದಾಡುವ ಪ್ರತಿರೂಪವೇನೋ ಎಂಬಂತೆ ಬೆಳೆದು ನಿಲ್ಲುತ್ತಾರೆ. ಡಾ| ರಾಜಕುಮಾರ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಸಚಿನ್ ತೆಂಡುಲ್ಕರ್ ಮುಂತಾದ ಕೆಲವೇ ಕೆಲವು ಸಾಧಕರ ಸಾಲಿನಲ್ಲಿ ಸಲ್ಲುವವರು ನಮ್ಮ ಲತಾ ದೀದಿ.
ಯಾವುದೇ ಯಾಂತ್ರಿಕ ಪರಿಷ್ಕರಣೆಯು ಸಾಧ್ಯವಿಲ್ಲದ ಕಾಲದಲ್ಲಿ, ಅಪ್ಪಟ ಆಗ್ಯಾìನಿಕ್ ಆಗಿ ನೂರಾರು ಸಂಗೀತಗಾರರ ಜತೆ ಹತ್ತಾರು ತಾಲೀಮುಗಳ ಬಳಿಕ ಒಂದೇ ಗುಕ್ಕಿಗೆ ಹಾಡುಗಳನ್ನು ಹಾಡಿ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿ ಮುಗಿಸಿದ ಹಾಡುಗಳ ಸಂಖ್ಯೆಯೇ ಒಂದು ರೀತಿಯಲ್ಲಿ ನಂಬಲಸಾಧ್ಯ ಹಾಗೂ ಬೆರಗು ಹುಟ್ಟಿಸುವಂಥದ್ದು. ಅದು ಸಾಧ್ಯವಾಗುವುದು ಅಂತಿಂಥ ಸಾಧಕರಿಗಲ್ಲ, ಕೇವಲ ಸಾಧನೆಗಾಗಿಯೇ ತಮ್ಮನ್ನು ಇಡಿಯಾಗಿ ಅರ್ಪಿಸಿಕೊಂಡು ಬದುಕನ್ನೇ ಮುಡಿಪಾಗಿಟ್ಟ ತಪಸ್ವಿಗಳಿಗೆ ಮಾತ್ರ. ಲತಾ ದೀದಿ ಅಂಥ ಅಪ್ಪಟ ಸಂಗೀತ ತಪಸ್ವಿ ಆಗಿದ್ದರು. ಅಷ್ಟು ಮೇರು ಮಟ್ಟದ ಸಾಧಕಿಯಾದರೂ ಅದೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು.
ನನ್ನ ಹಾಡುಗಳನ್ನು ನಾನು ಮರಳಿ ಕೇಳುವುದಿಲ್ಲ. ನನಗೆ ತಪ್ಪುಗಳು ಕಾಣಿಸಿ ಮುಜುಗರವಾಗಿ ಬಿಡುತ್ತದೆ. ಈ ಒಂದು ಮಾತು ಅವರಿಗೆ ಸಂಗೀತದ ಪೂರ್ಣತೆಯ ಬಗ್ಗೆ, ನಿರಂತರ ಕಲಿಕೆ ಬಗ್ಗೆ ಅದೆಂಥ ಅದಮ್ಯ ಬದ್ಧತೆ ಇತ್ತೆಂಬುದನ್ನು ಸಾರಿ ಹೇಳುತ್ತದೆ. ಕೊನೆಯದಾಗಿ ಇಂದು ಲತಾ ದೀದಿ ದೈಹಿಕವಾಗಿ ನಮ್ಮನ್ನು ಅಗಲಿದರು ಎಂದಾಗ ನೋವಿನೊಂದಿಗೆ ನನ್ನ ನೆನಪಿಗೆ ಬಂದ ಮಾತು. Legends never die They became a part of you
ಮೇರು ವ್ಯಕ್ತಿತ್ವಗಳಿಗೆ ಸಾವಿಲ್ಲ ಅವರು ನಮ್ಮದೇ ಭಾಗವಾಗಿ ಬದುಕಿರುತ್ತಾರೆ. ಎಂದಿನಂತೆ ಮುಂದೆಯೂ ನಮ್ಮ ಖುಷಿ, ನೋವು, ಪ್ರೀತಿ, ಸ್ನೇಹ ಮುಂತಾದ ಎಲ್ಲ ಭಾವನೆಗಳಲ್ಲಿ ಹಾಡಾಗಿ ಲತಾ ಮಂಗೇಶ್ಕರ್ ನಮ್ಮ ಜತೆ ಇದ್ದೇ ಇರುತ್ತಾರೆ . ಸ್ವರಸಾಮ್ರಾಜಿn ಚಿರಾಯು.
-ಕವಿರಾಜ್, ಚಿತ್ರ ಸಾಹಿತಿ, ನಿರ್ದೇಶಕ