Advertisement

ಸಂಭಾವನೆ ಪಡೆಯದೇ ಕನ್ನಡದಲ್ಲಿ ಎರಡು ಹಾಡು ಹಾಡಿದ್ದರು ಲತಾ ದೀದಿ…

12:15 PM Feb 07, 2022 | Team Udayavani |

ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಅವರಿಗೂ ಕನ್ನಡ ಚಿತ್ರರಂಗಕ್ಕೂ ಒಂದು ಸಂಬಂಧವಿದೆ. ಆ ಸಂಬಂಧಕ್ಕೆ ಕಾರಣ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ. 1967ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ಲತಾ ಮಂಗೇಶ್ಕರ್‌ ಎರಡು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅದೇ ಅವರ ಮೊದಲ ಹಾಗೂ ಕೊನೆಯ ಹಾಡು.

Advertisement

ಆ ನಂತರ ಸಾಕಷ್ಟು ಸಂಗೀತ ನಿರ್ದೇಶಕರು ಲತಾ ಅವರಿಂದ ಹಾಡಿಸಲು ಪ್ರಯತ್ನಿಸಿದರೂ ನಾನಾ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. “ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ “ಬೆಳ್ಳನೆ ಬೆಳಗಾಯಿತು’ ಹಾಗೂ “ಎಲ್ಲಾರೆ ಇರುತಿರೋ’ ಹಾಡಿಗೆ ಲತಾ ಮಂಗೇಶ್ಕರ್‌ ಧ್ವನಿ ಯಾಗಿದ್ದರು. ಈ ಚಿತ್ರಕ್ಕೆ ಲಕ್ಷ್ಮಣ್‌ ಬರಲೇ ಕರ್‌ ಸಂಗೀತ ನಿರ್ದೇಶಕರು. ಹಿಂದಿ ಚಿತ್ರರಂಗದ ಸಂಪರ್ಕ ಚೆನ್ನಾಗಿದ್ದರಿಂದ ಆಗಲೇ ಲತಾ ಅವರನ್ನು ಸಂಪರ್ಕಿಸಿ, ಅವರಿಂದ ಹಾಡಿಸಿದ್ದರು.

ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಸಿನಿಮಾ ಎಂದು ಗೊತ್ತಾದ ಬಳಿಕ ಲತಾ ಅವರು ತಮ್ಮ ಹಾಡಿನ ಸಂಭಾವನೆಯನ್ನೂ ಪಡೆಯಲಿಲ್ಲವಂತೆ. ಆ ಚಿತ್ರದ ಮತ್ತೆರಡು ಹಾಡುಗಳನ್ನು ಆಶಾ ಬೋಂಸ್ಲೆ ಹಾಗೂ ಉಷಾ ಮಂಗೇಶ್ಕರ್‌ ಹಾಡಿದ್ದು, ಅವರು ಕೂಡಾ ಸಂಭಾವನೆ ಪಡೆಯದೇ ಹಾಡಿದ್ದರಂತೆ. ಸದ್ಯ ಲತಾ ಮಂಗೇಶ್ಕರ್‌ ಕೋಟ್ಯಾಂತರ ಅಭಿಮಾನಿಳು ಅವರ ಹಾಡುಗಳನ್ನು ಮೆಲುಕು ಹಾಕುತ್ತಿದ್ದಾರೆ. ಅದರಲ್ಲಿ ಕನ್ನಡದ ಎರಡು ಹಾಡು ಸೇರಿವೆ.

ಲತಾಜೀ ವಿಶ್ವಕ್ಕೇ ಗಾನಕೋಗಿಲೆ
ಲತಾ ಮಂಗೇಶ್ಕರ್‌, ಸಂಗೀತ ಲೋಕದ ದೇವತೆ. ಅವರ ಬಗ್ಗೆ ನಮ್ಮ ಅಭಿಪ್ರಾಯ ಹೇಳುವುದೇ ನನ್ನ ಪಾಲಿನ ಪುಣ್ಯ. ಅವರನ್ನು ಸಂಗೀತ ಲೋಕದ ಶಿಲಾಬಾಲಿಕೆ, ಗಾನಶಾರದೆ. ಅವರ ಜೀವನದಿಂದ ನಾವು ಕಲಿಯುವುದು ಸಾಕಷ್ಟಿದೆ. ಅವರ ಪರಿಶ್ರಮ, ಸಮರ್ಪಣಾಭಾವವನ್ನು ನಮ್ಮ ವಯಸ್ಸಿನ ಹಿರಿಯ ಗಾಯಕರೂ ಸೇರಿದಂತೆ ಇಂದಿನ ಉದಯೋನ್ಮುಖ ಗಾಯಕರೂ ಅನುಕರಿಸಬೇಕು. ಅವರ ಹಾಡೆಂದರೆ ಕಲ್ಲು ಸಕ್ಕರೆ, ಸಕ್ಕರೆ, ಕೆಂಪು ಸಕ್ಕರೆ, ಜೇನು ಎಲ್ಲವೂ ತುಂಬಿರುತ್ತಿತ್ತು. ಎಲ್ಲರೂ ಅವರನ್ನು ಭಾರತದ ಕೋಗಿಲೆ ಎಂದು ಕರೆಯುತ್ತಾರೆ. ಅವರು ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಗಾನಕೋಗಿಲೆ.

“ಪ್ರೀತ್ಸೆ ಚಿತ್ರಕ್ಕೆ ಲತಾ ದೀದಿ ಹಾಡಬೇಕಿತ್ತು’
ಲತಾ ಅವರಿಗೆ ಹಲವು ದಶಕಗಳ ನಂತರ ಕನ್ನಡದಲ್ಲಿ ಹಾಡುವ ಅವಕಾಶವೊಂದು ಸಿಕ್ಕಿತ್ತು. ಆದರೆ, ಅದು ನೆರವೇರಲಿಲ್ಲ ಎಂದು ಕನ್ನಡದ ಹಿರಿಯ ಗಾಯಕಿ ಲತಾ ಹಂಸಲೇಖಾ ತಿಳಿಸಿದ್ದಾರೆ. “2000ರಲ್ಲಿ ತೆರೆಕಂಡಿದ್ದ ಕನ್ನಡದ “ಪ್ರೀತ್ಸೆ’ ಲತಾ ಮಂಗೇಶ್ಕರ್‌ ಅವರು ಹಾಡಬೇಕಿತ್ತು. ಆ ಚಿತ್ರಕ್ಕೆ ಹಂಸಲೇಖಾರದ್ದೇ ಸಂಗೀತ. ಹಾಗಾಗಿ, ಹಂಸಲೇಖಾ ಅವರು ಲತಾರಿಂದ ಹಾಡನ್ನು ಹಾಡಿಸಬೇಕೆಂದು ಬಯಸಿ, ಅವರನ್ನು ಸಂಪರ್ಕಿಸಿದ್ದರು.

Advertisement

ಲತಾ ಅವರೂ ಅದಕ್ಕೆ ಒಪ್ಪಿ, ರೆಕಾರ್ಡಿಂಗ್‌ಗೆ ಮುಂಬೈಗೆ ಬರುವಂತೆ ಸೂಚಿಸಿದರು. ಆದರೆ, ಹಂಸಲೇಖಾ ಅವರು ಬೆಂಗಳೂರಿಗೆ ಬರಬೇಕೆಂದು ಮನವಿ ಮಾಡಿದರು. “ನೀವು ಕರ್ನಾಟಕಕ್ಕೆ ಬರಬೇಕು. ಕನ್ನಡದ ಮಣ್ಣನ್ನು ಮೆಟ್ಟಬೇಕು’ ಎಂದು ಹಂಸಲೇಖಾ ಅವರು ಕೇಳಿಕೊಂಡಿದ್ದರು. ಅದಕ್ಕೆ ಲತಾಜೀ ಅವರು ಸಂತೋಷಪಟ್ಟು ಬೆಂಗಳೂರಿಗೆ ಬರಲು ಒಪ್ಪಿದ್ದರಾದರೂ, ಕಾರಣಾಂತರಗಳಿಂದ ಅವರಿಗೆ ಬರಲು ಆಗಲಿಲ್ಲ. ಹಾಗಾಗಿ, ಅವರ ಬದಲಿಗೆ ಅನುರಾಧಾ ಪೊಡ್ವಾಲ್‌ ಅವರಿಂದ ಪ್ರೀತ್ಸೆ ಚಿತ್ರಕ್ಕೆ ಹಾಡಿಸಬೇಕಾಯಿತು” ಎಂದು ಲತಾ ಹಂಸಲೇಖಾ ಅವರು ಹೇಳಿದ್ದಾರೆ.

ಲಂಡನ್‌ನಲ್ಲಿ ಹಾಡಿದ ಪ್ರಥಮ ಗಾಯಕಿ
ಲತಾ ಅವರು 1974ರಲ್ಲಿ ಲಂಡನ್‌ನ “ರಾಯಲ್‌ ಆಲ್ಬರ್ಟ್‌ ಹಾಲ್‌’ನಲ್ಲಿ ಹಾಡಿದ್ದರು. ಅದು ಅವರಿಗೆ ವಿದೇಶದಲ್ಲಿ ಮೊದಲ ಸಂಗೀತ ಕಾರ್ಯಕ್ರಮವಾಗಿತ್ತು. ಹಾಗೇ ಪ್ರಸಿದ್ಧ ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ ಹಾಡಿದ ಮೊದಲ ಭಾರತೀಯ ಗಾಯಕಿ ಎನ್ನುವ ದಾಖಲೆಯನ್ನು ಆ ಕಾರ್ಯಕ್ರಮ ಬರೆದಿತ್ತು. ಲತಾ ಅವರನ್ನು ಸಭೆಗೆ ಪರಿಚಯಿಸಿಕೊಟ್ಟ ದಿಲೀಪ್‌ ಕುಮಾರ್‌ ಅವರು, “ಹೂವಿನ ಸುಗಂಧಕ್ಕೆ ಬಣ್ಣ ಹೇಗಿಲ್ಲವೋ, ಹರಿಯುವ ನದಿಗೆ ಮತ್ತು ತಂಗಾಳಿಗೆ ಹೇಗೆ ಗಡಿಯಿಲ್ಲವೋ, ಸೂರ್ಯನ ಕಿರಣಕ್ಕೆ ಹೇಗೆ ಧಾರ್ಮಿಕ ವಿಭಜನೆಯಿಲ್ಲವೋ ಅದೇ ರೀತಿ ಲತಾ ಅವರ ಧ್ವನಿಯೂ ಒಂದು ಅದ್ಭುತ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next