ಬಾಳೆಂಬ ಪಯಣದಲ್ಲಿ ಅನುಭವ ಸಂತೆಗಳೆನ್ನುವ ನಿಲ್ದಾಣ. ನೋವು-ನಲಿವಿನ ಜತೆಗೂಡಿ ಸಂಚರಿಸುವ ಸಂಚಾರಿ. ಇನ್ನು ಏಳುಬೀಳಿನ ತಿರುವಿನ ಹಾದಿ, ಮಾರ್ಗವೇ ತ್ರಾಸ ಎನಿಸೋ ಕಷ್ಟದ ಹಾದಿಯ ಮೂಲಕ ಪಯಣಿಸ್ಸಿದ್ದೇ ಆದರೆ ಗೆಲುವಿನ ಸೋಪಾನವು ಸಿಗುತ್ತದೆ.
ಈ ಪ್ರಯಾಣದಲ್ಲಿ ಪ್ರತೀ ನಿಲ್ದಾಣದಲ್ಲೂ ಹೊಸ ಹೊಸ ವಿಷಯಗಳು ಪಯಣಿಗನಿಗೆ ಜತೆಯಾಗುವವು. ಕಹಿ ನೆನಪೆನ್ನುವ ಹೊರೆಯನ್ನು ಅಲ್ಲಿಯೇ ಕೆಳಗಿಳಿಸಿ ಮುಂದಿನ ಹಾದಿಯತ್ತ ಮುನ್ನುಗಬೇಕು. ಯಾಕೆಂದರೆ ಕಹಿ ನೆನಪು, ಕೆಟ್ಟ ಆಲೋಚನೆ ನಾವಿರುವ ಜಾಗದಲ್ಲೇ ನಮ್ಮ ಮನಸ್ಸನ್ನು ಕಟ್ಟಿ ಬಿಡುತ್ತದೆ. ಅದು ಹೊಸ ತರ ಯೋಚನೆಗಾಗಲಿ, ನವ ವಿಧದ ಯೋಜನೆಗಾಗಲಿ ಅನುವು ಮಾಡಿಕೊಡುವುದಿಲ್ಲ. ಹಾಗಾಗಿ ಅಲ್ಲೇ ಬಿಟ್ಟು ಮುಂದುವರಿದರೆ ಯಾತ್ರಿಕನ ಈ ಯಾತ್ರೆ ಸುಖಕರವಾಗಿರುತ್ತದೆ.
ಈ ಪಯಣ ನಿರಂತರ. ಆದರೆ ಇಲ್ಲಿ ಸಾಧಿಸಿದ ಪಯಣಿಗನೂ, ಸಾಧಿಸದ ಪಯಣಿಗನೂ, ಕೋಟೆ ಕಟ್ಟಿ ಮೆರೆದ ರಾಜನೂ, ಅಲ್ಲಿ ದುಡಿದ ಸೈನಿಕನೂ, ಸಾಮಾನ್ಯರಲ್ಲಿ ಅಸಾಮಾನ್ಯನೂ, ಅಸಾಮಾನ್ಯ ಅಲ್ಲದ ಸಾಮಾನ್ಯನೂ ಎಲ್ಲರೂ ತಲಪುವುದು ಭೇದ ಭಾವವಿಲ್ಲದ “ಕೊನೆಯ ನಿಲ್ದಾಣ’ಕ್ಕೆ. ಹುಟ್ಟು ಎನ್ನುವುದು ಪಯಣಿಗನ ಆರಂಭದ ನಿಲ್ದಾಣ. ಅಲ್ಲಿಂದ ಶುರುವಾದ ಸಂಚಾರ ಹಲವಾರು ಮೈಲಿಗಲ್ಲುಗಳನ್ನು ದಾಟಿ, ಸಂಬಂಧ ಅನುಬಂಧಗಳ ಲೆಕ್ಕಾಚಾರಗಳ ಆಟ ಮುಗಿಸಿ, ಸಾವೆನ್ನುವ ಕೊನೆಯ ನಿಲ್ದಾಣದತ್ತ ತನ್ನ ಪಯಣ ಶುರುವಾಗಿ ಬಿಡುತ್ತದೆ.
ಹುಟ್ಟು ಸಾವಿನ ನಡುವೆ ಬಾಲ್ಯದ ಸವಿ ನೆನಪಿದೆ, ಮಧ್ಯ ವಯಸ್ಸಿನ ನೋವು ನಲಿವಿನ ವ್ಯಥೆ-ಕಥೆಯಿದೆ, ಮುದಿ ವಯಸ್ಸಿನ ವೃದ್ಧಾಪ್ಯದ ಅನುಭವ. ಇದೆಲ್ಲವೂ ನಮ್ಮ ಸಂಚಾರದಲ್ಲಿನ ಸುಂದರವಾದ ಏಳು ಬೀಳು, ಸುಖ ದುಃಖ ಇವುಗಳ ಸಮ್ಮಿಶ್ರಣ- ಸಮ್ಮಿಲನ. ನಮ್ಮಯ ಸಂಚಾರದಿ ಕೊಂಡಿಯಂತಿರುವುದು ಈ ಸಂಬಂಧ- ಅನುಬಂಧಗಳೇ.
ಸಾವಿನ ಕೊನೆಯ ನಿಲ್ದಾಣ ಎಲ್ಲರ ಬಾಳಲ್ಲೂ ಗತಿಸಿಯೇ ಗತಿಸುತ್ತದೆ. ಇಲ್ಲಿಂದ ಮುಂದೆ ಸಂಚಾರವು ಮುಂದುವರಿಯದು. ಕೊನೆಯ ನಿಲ್ದಾಣಕ್ಕೆ ತಲುಪುವ ಮೊದಲು ಏನಾದರೂ ಸಾಧಿಸಿ ತೀರುವ ಛಲ ನಮ್ಮಲ್ಲಿರಲಿ.
-ಗಿರೀಶ್ ಪಿ.ಎಂ.
ವಿವಿ ಮಂಗಳೂರು