Advertisement
ಧಾರವಾಡ: ಕೊರೊನಾದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ದಾಟಿ ಹೋಗಿರುವ ಬ್ಯಾಂಕ್‌ನ ಸಾಲದ ಮರುಪಾವತಿ ದಿನಾಂಕಗಳು, ಸಾಲ ಮರುಪಾವತಿ ಕುರಿತು ಎಸ್ ಎಂಎಸ್ ಸಂದೇಶ ಕೂಡ ರವಾನೆ ಮಾಡದ ಬ್ಯಾಂಕ್‌ಗಳ ನಿರ್ಲಕ್ಷ್ಯ ಧೋರಣೆ, ಸರ್ಕಾರ ಅವಕಾಶ ನೀಡಿದ್ದರೂ ಬೆಳೆ ಸಾಲಗಾರರನ್ನು ಮುಟ್ಟದ ಆರ್‌ಬಿಐನ ಸಂದೇಶ. ಒಟ್ಟಿನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ಮಾತ್ರ ವರ ಕೊಡಲು ಮೀನಮೇಷ!
Related Articles
Advertisement
ಮಾಹಿತಿ ನೀಡದ ಬ್ಯಾಂಕ್‌ಗಳು: ರೈತರಿಗೆ ಸಾಲ ವಸೂಲಾತಿಗೆ ನೋಟಿಸ್ ಕಳಿಸುವುದನ್ನು ಮಾತ್ರ ಬ್ಯಾಂಕ್‌ಗಳು ಅಚ್ಚುಕಟ್ಟಾಗಿ ಮಾಡುತ್ತವೆ. ಆದರೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಅವರ ಸಾಲ ಮರುಪಾವತಿಸಲು ಇರುವ ಸದವಕಾಶಗಳು ಮತ್ತು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಿದರೆ ಸಿಗುವ ಅನುಕೂಲಗಳ ಕುರಿತು ಜಾಗೃತಿಯನ್ನೇ ನೀಡುತ್ತಿಲ್ಲ. ಸಾಲ ಪಡೆದವರ ಮೊಬೈಲ್ ಸಂಖ್ಯೆಗೆ ಸಾಲ ಮರುಪಾವತಿ ಕೊನೆಯ ದಿನಾಂಕದ ಕುರಿತು ಒಂದು ಎಸ್‌ಎಂಎಸ್ ಕೂಡ ಮಾಡುತ್ತಿಲ್ಲ. ರೈತರಿಗೆ ಈ ಕುರಿತು ಸಾಕಷ್ಟು ಪ್ರಚಾರ ಮಾಡಬೇಕಾದ ಬ್ಯಾಂಕ್‌ಗಳು, ಸರ್ಕಾರ ಮತ್ತು ರೈತ ಸಂಘಟನೆಗಳು ಕೂಡ ಸುಮ್ಮನೆ ಕೂತಿದ್ದು, ಎಷ್ಟೋ ಜನರಿಗೆ ಕೊರೊನಾ ಗದ್ದಲದ ನಡುವೆ ತಮ್ಮ ಅಲ್ಪಾವಧಿ ಸಾಲದ ದಿನಾಂಕಗಳು ದಾಟಿ ಹೋಗಿದ್ದೇ ಗೊತ್ತಾಗಿಲ್ಲ.
ಇನ್ನು ಗೊತ್ತಾಗಿದ್ದರೂ ಬ್ಯಾಂಕ್ ವ್ಯವಹಾರಕ್ಕೆ ಸಾರಿಗೆ ಸಂಪರ್ಕದ ಕೊರತೆ, ಹಳ್ಳಿಗಳ ಸೀಲ್‌ಡೌನ್, ಪೊಲೀಸರ ಸಂಚಾರ ನಿರ್ಬಂಧದ ಮಧ್ಯೆ ಬಂದು ಸಾಲ ನವೀಕರಣ ಅಥವಾ ಮರುಪಾವತಿ ಮಾಡುವುದು ಸೇರಿದಂತೆ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ನಿರ್ವಹಿಸುವುದು ರೈತರಿಗೆ ಕಷ್ಟವಾಗಿತ್ತು. ಇದೀಗ ಕೊರೊನಾ ಅವಧಿಯಲ್ಲಿ ಸರ್ಕಾರ ನೀಡಿರುವ ಅವಧಿ ಜೂ.30ಕ್ಕೆ ಕೊನೆಗೊಳ್ಳಲಿದ್ದು, ಅಷ್ಟರೊಳಗೆ ರೈತರು ಸಾಲ ಮರುಪಾವತಿ ಅಥವಾ ನವೀಕರಣ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಮತ್ತೂಮ್ಮೆ ರೈತರು ಸಂಕಷ್ಟಕ್ಕೆ ಸಿಲುಕುವುದು ಪಕ್ಕಾ. ಗ್ರಾಮೀಣ ಬ್ಯಾಂಕ್‌ಗಳಲ್ಲಿ ರೈತರು ಪಡೆದುಕೊಂಡ ಅಲ್ಪಾವಧಿ ಸಾಲಕ್ಕೆ ಶೇ.7 ಮಾತ್ರ ಬಡ್ಡಿ ಕಟ್ಟಬೇಕು. ಇದನ್ನು ಸರಿಯಾದ ಸಮಯಕ್ಕೆ ತುಂಬಿದಲ್ಲಿ ಅಂದರೆ ಒಂದು ವರ್ಷದ ಒಳಗಾಗಿ ಮರುಪಾವತಿಸಿದರೆ ಶೇ.4 ಹಣ ಮರಳಿ ರೈತರ ಅದೇ ಖಾತೆಗೆ ಬೋನಸ್ ರೂಪದಲ್ಲಿ ಜಮಾವಣೆಯಾಗುತ್ತದೆ. ಒಂದು ವೇಳೆ ವರ್ಷದ ಅವಧಿ ಮುಗಿದರೆ ಶೇ.12 ಬಡ್ಡಿ ಕಟ್ಟಬೇಕಾಗುತ್ತದೆ. ಅದರಲ್ಲೂ ಕೆಲವು ಬ್ಯಾಂಕ್ ಗಳು ಶೇ.16ರವರೆಗೂ ರೈತರಿಂದ ಬಡ್ಡಿ ವಸೂಲಿ ಮಾಡುತ್ತವೆ.
ಲಕ್ಷ ಲಕ್ಷ ಬಡ್ಡಿ ತುಂಬಿದ ರೈತರು: ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ 2018ರಲ್ಲಿ ರೈತರ 2 ಲಕ್ಷ ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಅಲ್ಪಾವಧಿ ಸಾಲಗಳನ್ನು ಇದರಿಂದ ಹೊರಗಿಟ್ಟು, ಆಗಲೇ ಸಾಲ ಮರುಪಾವತಿ ಮಾಡಿದವರಿಗೆ 25 ಸಾವಿರ ರೂ. ಬೋನಸ್ ಹಣವನ್ನು ಜಮಾ ಮಾಡುವುದಾಗಿ ಹೇಳಿತ್ತು. ಆದರೆ ನಂತರ ಹಾಕಿದ ಷರತ್ತುಗಳ ಅನ್ವಯ ಶೇ.80 ರೈತರಿಗೆ ಇದು ಅನುಕೂಲವೇ ಆಗಲಿಲ್ಲ. ಖಾತೆವಾರು ಮನ್ನಾ ಮಾಡುವುದನ್ನು ಬಿಟ್ಟು, ಕಟ್‌ಬಾಕಿ ಮಾತ್ರ ಮನ್ನಾ ಮಾಡುವುದಾಗಿ ಸರ್ಕಾರ ಹೇಳಿದ್ದರಿಂದ ವಸೂಲಾಗದ ಸಾಲ ಮಾತ್ರ (ಎನ್‌ಎಪಿ) ಮನ್ನಾ ಆಯಿತು. ಇದರಿಂದ ಬೆಳೆಸಾಲ ಪಡೆದುಕೊಂಡ ಶೇ.5 ರೈತರಿಗೆ ಮಾತ್ರ ಈ ಯೋಜನೆ ವರದಾನವಾಯಿತು. ಇನ್ನುಳಿದವರಿಗೆ ಉಪಯೋಗವಾಗಲೇ ಇಲ್ಲ. ಅಷ್ಟೇಯಲ್ಲ, ನಂತರ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ, ಖಂಡಿತ ಅವರು ಮೊದಲು ತಾವೇ ಮಾಡಿದ ಘೋಷಣೆಯಂತೆ ಖಾತೆವಾರು ಸಾಲಮನ್ನಾ ಮಾಡುತ್ತಾರೆ ಎಂದೆಲ್ಲ ನಂಬಿ ರೈತರು ಅಲ್ಪಾವಧಿ ಸಾಲಗಳನ್ನು ಮರುಪಾವತಿ ಮಾಡಲೇ ಇಲ್ಲ. ತತ್ಪರಿಣಾಮ 2018-2021ರವರೆಗೂ ರೈತರು ಒಂದು ಲಕ್ಷ ರೂ. ಸಾಲಕ್ಕೆ 75 ಸಾವಿರ ರೂ. ವರೆಗೂ ಬಡ್ಡಿ ಕಟ್ಟುತ್ತಿದ್ದಾರೆ.