Advertisement

ಇಂದು ಲಂಕಾ ವಿರುದ್ಧ  ಏಕೈಕ ಟಿ-20: ಭಾರತದ ಗುರಿ ಸಂಪೂರ್ಣ ವಿಜಯ

08:54 AM Sep 06, 2017 | |

ಕೊಲಂಬೊ: ಟೆಸ್ಟ್‌ ಸರಣಿ ಹಾಗೂ ಏಕದಿನ ಸರಣಿಗಳೆರಡನ್ನೂ ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡು ದ್ವೀಪರಾಷ್ಟ್ರದಲ್ಲಿ ತನ್ನ ಪಾರಮ್ಯ ತೋರ್ಪಡಿಸಿದ ಭಾರತ, ಕೊನೆಯದಾಗಿ ಏಕೈಕ ಟಿ-20 ಪಂದ್ಯವನ್ನೂ ಗೆದ್ದು ಶ್ರೀಲಂಕಾ ಪ್ರವಾಸಕ್ಕೆ “ಸಂಪೂರ್ಣ ವಿಜಯ’ದೊಂದಿಗೆ ಮಂಗಳ ಹಾಡುವ ಯೋಜನೆಯಲ್ಲಿದೆ. ಈ ಮುಖಾಮುಖಿ ಬುಧವಾರ ಕೊಲಂಬೋದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ.

Advertisement

ಲಂಕಾದ ದೌರ್ಬಲ್ಯವನ್ನು ಚೆನ್ನಾಗಿಯೇ ಎನ್‌ಕ್ಯಾಶ್‌ ಮಾಡಿಕೊಂಡ ಕೊಹ್ಲಿ ಪಡೆ ಈವರೆಗಿನ ಎಂಟೂ ಪಂದ್ಯಗಳನ್ನು ಅಧಿಕಾರ ಯುತವಾಗಿಯೇ ಗೆದ್ದಿದೆ. ಕ್ರಿಕೆಟಿನ ಪ್ರತಿ ಯೊಂದು ವಿಭಾಗದಲ್ಲೂ ತನ್ನ ಮೇಲುಗೈ ಯನ್ನು ಸಾಬೀತುಪಡಿಸುತ್ತ ಬಂದಿದೆ. 2019ರ ವಿಶ್ವಕಪ್‌ ಹಿನ್ನೆಲೆಯಲ್ಲಿ ತಂಡದ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸುವ ಯೋಜನೆಯಲ್ಲೂ ಬಹುತೇಕ ಯಶಸ್ಸನ್ನೇ ಕಂಡಿತ್ತು. ಹೀಗಾಗಿ ಬುಧವಾರವೂ ಭಾರತವೇ ನೆಚ್ಚಿನ ತಂಡವಾಗಿ ಗೋಚರಿಸಿದೆ. 

ಆದರೆ ಚುಟುಕು ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬುದು ಮಾತ್ರ ಸುಳ್ಳಲ್ಲ. ಹೀಗಾಗಿ ಲಂಕೆಗೂ ಗೆಲುವಿನ ಅವಕಾಶ ಇರುವುದನ್ನು ಅಲ್ಲಗಳೆಯಲಾಗದು. ಸತತ ಸೋಲಿನಿಂದ ದಿಕ್ಕೆಟ್ಟಿರುವ ಲಂಕೆಗೆ ಗೆಲುವಿನ ಟಾನಿಕ್‌ ತುರ್ತಾಗಿ ಬೇಕಿದೆ. ಕೊನೆಯ ಪಕ್ಷ ಟಿ-20 ಪಂದ್ಯವನ್ನಾದರೂ ಗೆದ್ದರೆ ಹಿಂದಿನ ಸೋಲುಗಳು ಸ್ವಲ್ಪ ಮಟ್ಟಿಗಾದರೂ ಮರೆತು ಹೋಗಬಹುದು!

ಇತ್ತ ಭಾರತ ಈ ಪಂದ್ಯವನ್ನು ಮುಗಿಸಿ ತವರಿನ ಸರಣಿಗೆ ಅಣಿಯಾಗಬೇಕಿದೆ. ಪ್ರವಾಸಿ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌ ವಿರುದ್ಧ 
ತಲಾ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಪಾಲ್ಗೊಳ್ಳಲಿದೆ. ತವರಿನ ಪ್ರಸಕ್ತ ಋತುವಿನಲ್ಲಿ ಭಾರತ ಒಟ್ಟು 9 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಇಲ್ಲಿಯೂ ಗೆಲುವಿನ ಕಾಂಬಿನೇಶನ್‌ ಒಂದನ್ನು ರೂಪಿಸಬೇಕಾದ ಅಗತ್ಯ ಟೀಮ್‌ ಇಂಡಿಯಾ ಮುಂದಿದೆ. ಇದಕ್ಕೆ ಬುಧವಾರದ ಮುಖಾಮುಖೀಯಿಂದಲೇ ಕಾರ್ಯತಂತ್ರ ಆರಂಭಗೊಳ್ಳಲಿದೆ.

ಕೊಹ್ಲಿ-ರೋಹಿತ್‌ ಓಪನಿಂಗ್‌
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ  ಬದಲಾವಣೆ ಸಂಭವಿಸಿಲ್ಲ. ಏಕ ದಿನ ತಂಡದ ಸದಸ್ಯರೇ ಕಣಕ್ಕಿಳಿಯಲಿದ್ದಾರೆ. ಆದರೆ ಭಾರತಕ್ಕೆ ವಾಪಸಾಗಿರುವ ಆರಂಭಕಾರ ಶಿಖರ್‌ ಧವನ್‌ ಈ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ರೋಹಿತ್‌ ಶರ್ಮ ಜತೆ ನಾಯಕ ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಬಹುದು. ವೆಸ್ಟ್‌ ಇಂಡೀಸ್‌ ವಿರುದ್ಧ ಜಮೈಕಾದಲ್ಲಿ ನಡೆದ ತನ್ನ ಕೊನೆಯ ಟಿ-20 ಪಂದ್ಯದಲ್ಲಿ ಭಾರತಕ್ಕೆ ಕೊಹ್ಲಿಯೇ ಆರಂಭಿಕನಾಗಿದ್ದರು. 

Advertisement

ವಿಂಡೀಸ್‌ ವಿರುದ್ಧ ರಿಷಬ್‌ ಪಂತ್‌ ವನ್‌ಡೌನ್‌ನಲ್ಲಿ ಬಂದಿದ್ದರು. ಆದರೆ ಪಂತ್‌ ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಧೋನಿ ಮಧ್ಯಮ ಕ್ರಮಾಂಕದಲ್ಲಿ ಬರಲಿದ್ದಾರೆ. 5ನೇ ಏಕದಿನದ ವೇಳೆ ವಿಶ್ರಾಂತಿ ಯಲ್ಲಿದ್ದ ಹಾರ್ದಿಕ್‌ ಪಾಂಡ್ಯ ಮರಳಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಅಜಿಂಕ್ಯ ರಹಾನೆಗೆ ಚಾನ್ಸ್‌ ಸಿಕ್ಕೀತೇ ಎಂಬುದೊಂದು ಕುತೂಹಲ. ಕೊಹ್ಲಿ ಆರಂಭಿಕನಾಗಿ ಇಳಿದರೆ 5 ಸ್ಪೆಷಲಿಸ್ಟ್‌ ಬೌಲರ್‌ಗಳಿಗೆ ಬಾಗಿಲು ತೆರೆಯಲಿದೆ. ಬುಮ್ರಾ, ಭುವನೇಶ್ವರ್‌, ಕುಲದೀಪ್‌, ಚಾಹಲ್‌, ಪಟೇಲ್‌, ಠಾಕೂರ್‌ ರೇಸ್‌ನಲ್ಲಿದ್ದಾರೆ.

ಲಂಕಾ ತಂಡದಲ್ಲಿ ಬದಲಾವಣೆ
ಇತ್ತ ಶ್ರೀಲಂಕಾ ತಂಡದಲ್ಲಿ ಕೆಲವು ಬದ ಲಾವಣೆ ಸಂಭವಿಸಿದೆ. ಲೆಗ್‌ ಸ್ಪಿನ್ನರ್‌ ಜೆಫ್ರಿ ವಾಂಡರ್ಸೆ, ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ದಸುನ್‌ ಶಣಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪೇಸರ್‌ ಸುರಂಗ ಲಕ್ಮಲ್‌ ಮರಳಿದ್ದಾರೆ. ಅವರು ದ್ವಿತೀಯ ಟೆಸ್ಟ್‌ ವೇಳೆ ಗಾಯಾಳಾಗಿ ಹೊರಬಿದ್ದಿದ್ದರು. ಅನುಭವಿ ಲಸಿತ ಮಾಲಿಂಗ ಉಳಿದುಕೊಂಡಿದ್ದಾರೆ. ಉಪುಲ್‌ ತರಂಗ ಮೊದಲ ಬಾರಿಗೆ ಟಿ-20 ಪಂದ್ಯದಲ್ಲಿ ಲಂಕೆಯನ್ನು ಮುನ್ನಡೆಸುತ್ತಿದ್ದಾರೆ.

ಪಂದ್ಯಕ್ಕೆ ಮಳೆ ಭೀತಿ
ಏಕೈಕ ಟಿ-20 ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಬುಧವಾರ ಕೊಲಂಬೋ ದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಈ ಮಳೆ ಪಂದ್ಯ ಆರಂಭವಾಗುವ ಹೊತ್ತಿನಲ್ಲೇ, ಅಂದರೆ ಸಂಜೆ 7 ಗಂಟೆಗೆ ಬಿರುಸುಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.
ಇಲ್ಲೇ ನಡೆದ ಕೊನೆಯ ಏಕದಿನ ಪಂದ್ಯ ಮಳೆಯಿಂದ ಅರ್ಧ ಗಂಟೆ ವಿಳಂಬವಾಗಿ ಮೊದಲ್ಗೊಂಡಿತ್ತು. ಅನಂತರ ಪಂದ್ಯಕ್ಕೆ ಯಾವುದೇ ಅಡ್ಡಿ ಯಾಗಲಿಲ್ಲ. ಆದರೆ ಬುಧವಾರದ ಹವಾ ಮಾನ ತುಸು ಭಿನ್ನ. ಹೀಗಾಗಿ ಭಾರತ- ಶ್ರೀಲಂಕಾ ಸರಣಿಗೆ ಮಳೆಯೇ ಮಂಗಳ ಹಾಡಿದರೂ ಅಚ್ಚರಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next