Advertisement

ಅಮೆರಿಕದಲ್ಲಿ ಐಸಿಸ್‌ ದಾಳಿಗೆ 60 ಬಲಿ

06:00 AM Oct 03, 2017 | |

ಲಾಸ್‌ ಏಂಜಲೀಸ್‌: ಅಮೆರಿಕದ ಇತಿಹಾಸದಲ್ಲೇ ಅತ್ಯಂಕ ಭೀಕರ ಎನ್ನುವಂಥ ಶೂಟೌಟ್‌ ನಡೆದಿದ್ದು, ಸಂಗೀತೋತ್ಸವದ ಸಂಭ್ರಮದಲ್ಲಿ ತೇಲುತ್ತಿದ್ದ ಮಂದಿ ಅಕ್ಷರಶಃ ರಕ್ತದ ಮಡುವಿಗೆ ಬಿದ್ದಿದ್ದಾರೆ. ಲಾಸ್‌ ವೇಗಾಸ್‌ನ ಹೋಟೆಲ್‌ವೊಂದಕ್ಕೆ ನುಗ್ಗಿದ ಶಂಕಿತ ಐಸಿಸ್‌ ಉಗ್ರ ಮನಬಂದಂತೆ ಗುಂಡು ಹಾರಿಸಿ 60 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆಯಲ್ಲಿ 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Advertisement

ದಾಳಿ ನಡೆಸಿದ ಐಸಿಸ್‌ ಉಗ್ರ(?) 64 ವರ್ಷದ ಸ್ಟೀಫ‌ನ್‌ ಪೆಡಾಕ್‌ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿ ದ್ದಾರೆ. ನಾವು ಹೋಟೆಲ್‌ ಪ್ರವೇಶಿಸುತ್ತಿದ್ದಂತೆ, ಆತ ಗುಂಡು ಹಾರಿಸಿಕೊಂಡು ಸತ್ತಿರಬಹುದು ಎಂದು ಅವರು ಶಂಕಿಸಿದ್ದಾರೆ. ದಾಳಿಕೋರನ ಸಂಗಾತಿ ಮರಿಲೊ ಡಾನ್ಲಿ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ನಡೆಸಿದ್ದು ನಾವೇ ಎಂದು ಐಸಿಸ್‌
ಹೊಣೆ ಹೊತ್ತುಕೊಂಡಿದೆ ಎಂದು ಅಮೆರಿಕದ ಪ್ರಾಪಗಂಡಾ ಏಜೆನ್ಸಿ ವರದಿ ಮಾಡಿದೆ.

ಸಂಗೀತದ ನಡುವೆಯೇ ಗುಂಡಿನ ಮೊರೆತ:
ಅಮೆರಿಕದ ಲಾಸ್‌ ವೆಗಾಸ್‌ನಲ್ಲಿ 3 ದಿನಗಳ ಸಂಗೀತೋತ್ಸವ ನಡೆಯುತ್ತಿತ್ತು. ಇದಕ್ಕಾಗಿ ಅಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಅದರ ಪಕ್ಕದ ಕಟ್ಟಡವಾದ ಮ್ಯಾಂಡಲೇ ಬೇ ಕ್ಯಾಸಿನೋ ಎಂಬ ಹೋಟೆಲ್‌ನ 32ನೇ ಮಹಡಿಯಿಂದ ದಾಳಿಕೋರ ಸ್ಟೀಫ‌ನ್‌ ಪೆಡಾಕ್‌ ಅಟೋಮ್ಯಾಟಿಕ್‌ ರೈಫ‌ಲ್‌ನಿಂದ ಗುಂಡು ಹಾರಿಸಲು ಶುರುಮಾಡಿದ. ಸ್ಥಳೀಯ ಕಾಲಮಾನದ ಪ್ರಕಾರ ಆಗ ರಾತ್ರಿ 10 ಗಂಟೆ ಆಗಿತ್ತು. ಎಲ್ಲರೂ ಸಂಗೀತ ಆಲಿಸುವುದರಲ್ಲಿ ತಲ್ಲೀನರಾಗಿದ್ದಂತೆಯೇ ಗುಂಡು ಹಾರಿದ ಸದ್ದು ಕೇಳಿಬಂತು. 

ಆರಂಭದಲ್ಲಿ ಇದು ಪಟಾಕಿಯ ಸದ್ದು ಎಂದೇ ಭಾವಿಸಲಾಗಿತ್ತು. ಆದರೆ, ಒಬ್ಬರ ನಂತರ ಒಬ್ಬರು ಕುಸಿದುಬೀಳುತ್ತಿದ್ದಂತೆ ಘಟನೆಯ ಭೀಕರತೆ ಅರಿವಾಗತೊಡಗಿತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. 64ರ ವ್ಯಕ್ತಿ ಪ್ರೇಕ್ಷಕರತ್ತ ಮನ ಬಂದಂತೆ ಗುಂಡು ಹಾರಿಸುವುದನ್ನು ಹಲವಾರು ಮಂದಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಅವುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಪೊಲೀಸರೂ ಅದನ್ನು ತನಿಖೆಗೆ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಆಗಿದ್ದೇನು?:
“ರೂಟ್‌ 91′ ಎಂಬ ಮೂರು ದಿನಗಳ ಸಂಗೀತ ಕಾರ್ಯಕ್ರಮ ಮ್ಯಾಂಡಲಾ ಬೇ ಕ್ಯಾಸಿನೋ ಮತ್ತು ಹೋಟೆಲ್‌ನ ಆವರಣದ ಸಮೀಪದಲ್ಲಿಯೇ ನಡೆಯುತ್ತಿತ್ತು. ಗುಂಡು ಹಾರಿದ ಶಬ್ದವನ್ನು ಕೆಲವರು ಗಾಜು ತುಂಡಾದ ಸದ್ದು ಎಂದು ಭಾವಿಸಿದರೆ, ಇನ್ನು ಕೆಲವರು ಪಟಾಕಿಯ ಸದ್ದು ಆಗಿರಬಹುದು ಎಂದು ಅಂದಾಜಿಸಿದ್ದಾಗಿ ತಿಳಿಸಿದ್ದಾರೆ. ದಾಳಿಕೋರನು ಒಂದು ಸುತ್ತು ದಾಳಿ ನಡೆಸಿದ ಬಳಿಕ, ರೈಫ‌ಲ್‌ ಅನ್ನು ಮತ್ತೂಮ್ಮೆ ಲೋಡ್‌ ಮಾಡಿ ಗುಂಡು ಹಾರಿಸತೊಡಗಿದ. ಎಲ್ಲರೂ ಗಾಬರಿಗೊಂಡು ಓಡಲಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗುಂಡು ಹಾರಾಟದ ಸುದ್ದಿ ತಿಳಿಯುತ್ತಿದ್ದಂತೆಯೇ ಲಾಸ್‌ ವೇಗಾಸ್‌ನ ಪ್ರಮುಖ ರಸ್ತೆಗಳೆಲ್ಲವನ್ನೂ ಪೊಲೀಸರು ಬಂದ್‌ ಮಾಡಿದರು.

Advertisement

ಅವರೆಲ್ಲ ಸಾಯಲಿದ್ದಾರೆ!:
ಗುಂಡು ಹಾರಾಟ ನಡೆಯುವುದಕ್ಕಿಂತ ಸುಮಾರು 45 ನಿಮಿಷಗಳ ಮೊದಲು 50 ವರ್ಷ ವಯಸ್ಸಿನ ಮಹಿಳೆ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತನ್ನ ಬಾಯ್‌ಫ್ರೆಂಡ್‌ ಜತೆ ಬಂದಿದ್ದಳು. “ಅವರೆಲ್ಲ ಇಲ್ಲಿಯೇ ಇದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮೂರ್ಖರು ಸತ್ತೇ ಹೋಗಲಿದ್ದಾರೆ’ ಎಂದು ಆಕೆ ಕಿರುಚಿದ್ದಳು ಎಂದು ಬ್ರೆನ್ನಾ ಹ್ಯಾಂಡ್ರಿಕ್‌ ಎಂಬುವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಕೆ ಕಂದು ಬಣ್ಣದ ಕೂದಲು ಹೊಂದಿದ್ದಳೆಂದು ಹ್ಯಾಂಡ್ರಿಕ್‌ ತಿಳಿಸಿದ್ದಾರೆ. ಅವಳ ವರ್ತನೆಯು ಆಕೆಗೆ ಉಂಟಾಗುವ ದುರಂತದ ಸೂಚನೆ ಇತ್ತು ಎಂಬುದನ್ನು ತಿಳಿಸುತ್ತದೆ ಎಂದಿದ್ದಾರೆ ಹ್ಯಾಂಡ್ರಿಕ್‌.

ಮುಂದುವರಿದ ಕಾರ್ಯಕ್ರಮ: ಗುಂಡು ಹಾರಾಟದಿಂದ ಗೊಂದಲ, ಗದ್ದಲ ಉಂಟಾಗಿದ್ದರೂ ಖ್ಯಾತ ಗಾಯಕ ಜೇಸನ್‌ ಆಲೆxನ್‌ ಗಾಯನ ಮುಂದುವರಿಸಿದ್ದರು. ಸುಮಾರು 10 ನಿಮಿಷಗಳ ಕಾಲ ಅವರು ಹಾಡು ಹಾಡುತ್ತಿದ್ದರು. ನಂತರ ಅವರು ಕಾರ್ಯಕ್ರಮ ಮೊಟಕುಗೊಳಿಸಿದರು.

ಹತ್ಯೆಕೋರನ ಬಳಿ ಇದ್ದವು ಎಂಟು ಗನ್‌ಗಳು
ಹತ್ಯೆಕೋರ ತಂಗಿದ್ದ ಹೋಟೆಲ್‌ನ ಕೊಠಡಿಯೊಳಗೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕನಿಷ್ಠ ಎಂಟು ಗನ್‌ಗಳು ಸಿಕ್ಕಿವೆ. ಆತ ಹೋಟೆಲ್‌ನ 32 ಮಹಡಿಯಲ್ಲಿ ಕೊಠಡಿಯನ್ನು ಪಡೆದಿದ್ದ ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿಯಾದ ಬಳಿಕ ಶೋಧ ಕಾರ್ಯ ನಡೆಸಲಾಗಿದೆ.

ಮಹಿಳೆ ಆಸೀಸ್‌ ಮೂಲದವಳು
ಐವತ್ತು ಮಂದಿಯ ಸಾವಿಗೆ ಕಾರಣನಾಗಿರುವ ಸ್ಟೀಫ‌ನ್‌ ಪೆಡಾಕ್‌ನ ಗೆಳತಿ ಮರಿಲೋ ಡಾನ್ಲ (62)ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಕೆಯ ವಿಚಾರಣೆ ನಡೆಸಲಾಗುತ್ತಿದೆ. ಏಕಾಏಕಿ ಆತ ಯಾವ ಕಾರಣಕ್ಕೆ ಗುಂಡು ಹಾರಿಸಿದ ಎಂಬ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ. ಆಕೆ ಆಸ್ಟ್ರೇಲಿಯಾಕ್ಕೆ ಸೇರಿದವಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಈ ನಡುವೆ ಅಸುನೀಗಿದ ಹತ್ಯೆಕೋರನ ಸಹೋದರ ಎರಿಕ್‌ ಮಾತನಾಡಿ ಆತನಿಗೆ ಯಾವುದೇ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಯ ಸಂಪರ್ಕ ಇರಲಿಲ್ಲ. ಯಾವ ಕಾರಣಕ್ಕಾಗಿ ಆತ ಇಂಥ ಕುಕೃತ್ಯವೆಸಗಿದ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

32- ಗುಂಡು ಹಾರಿಸಿದ ಮಹಡಿ
40 ಸಾವಿರ- ಸಂಗೀತ ಕಾರ್ಯಕ್ರಮದ ಸ್ಥಳದಲ್ಲಿದ್ದವರ ಸಂಖ್ಯೆ
60- ಅಸುನೀಗಿದವರ ಸಂಖ್ಯೆ
500- ಗಾಯಗೊಂಡವರು

ಹಿಂದಿನ ಭೀಕರ ಶೂಟೌಟ್‌ಗಳು
ಜೂ.12, 2016- ಒರ್ಲಾಂಡೋದಲ್ಲಿ ಸೆಕ್ಯುರಿಟಿ ಗಾರ್ಡ್‌ನಿಂದ 49 ಮಂದಿಯ ಹತ್ಯೆ, 58 ಮಂದಿಗೆ ಗಾಯ
ಡಿ.2, 2015- ಕ್ಯಾಲಿಫೋರ್ನಿಯಾದಲ್ಲಿ 14 ಮಂದಿಯ ಬಲಿ, 20ಕ್ಕೂ ಅಧಿಕ ಮಂದಿಗೆ ಗಾಯ
ಅ.1, 2015- ರೋಸ್‌ಬರ್ಗ್‌ನಲ್ಲಿ ದಾಳಿಗೆ 10 ಮಂದಿ ಸಾವು, 7 ಮಂದಿಗೆ ಗಾಯ
ಜೂ.17, 2015- ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 9 ಆಫ್ರಿಕ-ಅಮೆರಿಕನ್ನರ ಹತ್ಯೆ.
ಸೆ.16, 2012- ಮಾನಸಿಕ ಅಸ್ವಸ್ಥ ವ್ಯಕ್ತಿಯಿಂದ 12 ಮಂದಿಯ ಹತ್ಯೆ
ಡಿ.14, 2012- ಕನೆಕ್ಟಿಕಟ್‌ನಲ್ಲಿ 26 ಮಂದಿಯ ಹತ್ಯೆ, 20 ಮಂದಿಗೆ ಗಾಯ
ಜು.20, 2012-ಕೊಲೆರಾಡೋದಲ್ಲಿ 12 ಮಂದಿಯ ಕೊಲೆ, 70 ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next