ಎಚ್.ಡಿ.ಕೋಟೆ: ಬೋರ್‌ವೆಲ್ ಕೊರೆಯುವ ಯಂತ್ರಕ್ಕೆ ಜೋಡಿಸುವ ಡ್ರಿಲ್ಲಿಂಗ್ ಪೈಪ್‌ಗ್ಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚಿಕ್ಕೆರೆಯೂರು ಕೆರೆ ಸಮೀಪ ಮಂಗಳವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ಜರುಗಿದೆ.
ಛತ್ತೀಸ್‌ಘಡ್ ಮೂಲದ ಅಂತ್‌ಘಡ್ ಜಿಲ್ಲೆಯ ಕೋಹಿಲ್‌ವಾಡ ತಾಲೂಕಿನ ಬಟ್ಟಿಪಾರ ಗ್ರಾಮದ ದಿನೇಶ್(18), ಶರವಣ(16) ಅಪಘಾತ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಗಾಯಗೊಂಡಿದ್ದ ಮೂವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತಾಲೂಕಿನ ಚಿಕ್ಕೆರೆಯೂರು ಗ್ರಾಮದಿಂದ ಮಾದಾಪುರ ಗ್ರಾಮದ ಜಮೀನಿನಲ್ಲಿ ಕೊಳವೆಬಾವಿ ಕೊರೆಯಲು ಬೋರ್‌ವೆಲ್ ಕೊರೆಯುವ ಲಾರಿಯೊಂದಿಗೆ ಡ್ರಿಲ್ಲಿಂಗ್ ಪೈಪ್‌ಗ್ಳನ್ನು ತುಂಬಿಕೊಂಡು ಹಿಂಬದಿಯಲ್ಲಿ ಮತ್ತೂಂದು ಲಾರಿ ಬರುತ್ತಿತ್ತು.
ಮಣ್ಣಿನಲ್ಲಿ ಲಾರಿಯ ಒಂದು ಭಾಗದ ಚಕ್ರಗಳು ರಸ್ತೆ ಬದಿಯಲ್ಲಿ ಹೂತುಕೊಂಡ ಪರಿಣಾಮ ಲಾರಿ ಒಂದೇ ಭಾಗಕ್ಕೆ ವಾಲಿ ಪಲ್ಟಿಯಾಗಿ ಕೆರೆ ಏರಿ ಕೆಳಗೆ ಉರುಳಿ ಬಿದ್ದಿದೆ. ಪರಿಣಾಮ ಡ್ರಿಲ್ಲಿಂಗ್ ತುಂಬಿದ ವಾಹನದಲ್ಲಿದ್ದ 5 ಜನ ಕೂಲಿ ಕಾರ್ಮಿಕರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಲಾರಿ ಅಪಘಾತದಲ್ಲಿ ಮೃತಪಟ್ಟಿರುವ ಛತ್ತೀಸ್‌ಘಡ್ ಮೂಲದ ಇಬ್ಬರು ಯುವಕರ ಮೃತ ದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿರಿಸಲಾಗಿದೆ. ಘಟನಾ ಸ್ಥಳಕ್ಕೆ ಹುಣಸೂರು ಡಿವೈಎಸ್‌ಪಿ ಭಾಸ್ಕರ್ ರೈ, ಎಚ್.ಡಿ.ಕೋಟೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಹರೀಶ್‌ಕುಮಾರ್, ಆರಕ್ಷಕ ಉಪ-ನಿರೀಕ್ಷಕ ಅಶೋಕ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.