ನೀರಿನಲ್ಲಿ ಆಟವಾಡುತ್ತಿದ್ದ ಚಿಕ್ಕ ಮೀನಿಗೆ ಒಮ್ಮೆ ಕೊಳದಿಂದ ಹೊರಕ್ಕೆ ಹೋಗಬೇಕೆಂಬ ಆಸೆ ಉಂಟಾಯಿತು. ಮುಂದೇನಾಯ್ತು?
ಅದು ಪರಿಶುದ್ಧವಾದ ನೀರಿನಿಂದ ತುಂಬಿದ ಸುಂದರವಾದ ಕೊಳ. ಬಣ್ಣ ಬಣ್ಣದ ನೂರಾರು ಮೀನುಗಳು ಅಲ್ಲಿ ಸ್ವತ್ಛಂದವಾಗಿ ವಿಹರಿಸುತ್ತಾ ಆನಂದದಿಂದ ಇದ್ದವು. ಇದೇ ಕೊಳದಲ್ಲಿ ಚಿಕ್ಕಮೀನೊಂದು ತನ್ನ ತಾಯಿಯೊಂದಿಗೆ ವಾಸವಾಗಿತ್ತು. ಕೊಳದ ಪಕ್ಕದಲ್ಲೇ ಇದ್ದ ಮಂಡೂಕ ಮರಿಯೊಂದಿಗೆ ಚಿಕ್ಕ ಮೀನು ಗೆಳೆತನ ಬೆಳೆಸಿತು. ಅವೆರಡೂ ಪ್ರತಿದಿನ ಜೊತೆಯಾಗಿ ಆಡುತ್ತಾ ನೀರಿನಲ್ಲಿದ್ದ ಸಣ್ಣ ಪುಟ್ಟ ಹುಳುಹುಪ್ಪಟೆಗಳನ್ನು ಭಕ್ಷಿಸುತ್ತಿದ್ದವು.
ನೀರಿನಲ್ಲಿ ಆಟವಾಡಿದ ನಂತರ ಮಂಡೂಕ ಮರಿ ಕೊಳದಿಂದ ಹೊರ ಜಿಗಿದು ಮರೆಯಾಗುತ್ತಿತ್ತು. ಒಂದು ದಿನ ಚಿಕ್ಕ ಮೀನು ಮರಿ ಮಂಡೂಕನ ಬಳಿ “ನೀನು ನನ್ನಂತೆ ನೀರಿನಲ್ಲೇ ವಾಸಮಾಡುವ ಬದಲು ಹೊರ ಜಿಗಿದು ಎಲ್ಲಿಗೆ ಹೋಗುತ್ತೀಯಾ?’ ಎಂದು ಪ್ರಶ್ನಿಸಿತು. ಆಗ ಮರಿ ಮಂಡೂಕವು “ಗೆಳೆಯಾ, ನಾನು ನನ್ನ ಅಮ್ಮನ ಜೊತೆ ಊರೆಲ್ಲಾ ಸುತ್ತಾಡಿ ಬರುತ್ತೇನೆ. ಅಲ್ಲದೆ ಅಲ್ಲಿ ದೊರೆಯುವ ರುಚಿಕರವಾದ ಎಲೆಗಳ ಚಿಗುರು, ಹುಳುಗಳನ್ನು ಸೇವಿಸುತ್ತೇನೆ. ಕೊಳದಿಂದ ಹೊರಗಡೆ ನೀನು ನೋಡದ ಸುಂದರವಾದ ಲೋಕವಿದೆ’ ಎಂದಿತು.
“ಅರೆ! ನಾನು ಈ ಕೊಳವೊಂದೇ ಪ್ರಪಂಚ ಎಂದುಕೊಂಡಿದ್ದೆ. ಇದಕ್ಕಿಂತ ಬೇರೆ ಸುಂದರವಾದ ಜಾಗ ಇರುವುದೇ?’ ಎಂದು ಅಚ್ಚರಿಪಟ್ಟಿತು ಚಿಕ್ಕ ಮೀನು. ಮರಿ ಮಂಡೂಕ ಹೇಳಿದ ವಿಷಯವನ್ನು ಕೇಳಿ ಚಿಕ್ಕ ಮೀನಿಗೂ ಕೊಳದಿಂದ ಹೊರ ಹೋಗಿ ವಿಹರಿಸಬೇಕೆಂದು ಆಸೆಯಾಯಿತು. ಅಮ್ಮನಲ್ಲಿ ತನ್ನ ಮನದ ಆಸೆಯನ್ನು ಹೇಳಿಕೊಂಡಿತು. ಆಗ ಅಮ್ಮ ಮೀನು “ನೋಡು, ಹೊರಕ್ಕೆ ಹೋದರೆ ಅಲ್ಲಿನ ವಾತಾವರಣದಲ್ಲಿ ನಾವು ಬದುಕುವುದಿಲ್ಲ. ನಮ್ಮ ಶರೀರ ರಚನೆ ನೀರಿನಲ್ಲಿ ವಾಸ ಮಾಡಲು ಸೂಕ್ತವಾಗಿದೆ. ಅನ್ಯರ ಬಣ್ಣದ ಮಾತಿಗೆ ಮರುಳಾಗಿ ಜೀವ ಕಳೆದುಕೊಳ್ಳುವಂಥ ದುಸ್ಸಾಹಸಕ್ಕೆ ಕೈಹಾಕುವುದು ಬೇಡ’ ಎಂದಿತು.
ಅಮ್ಮನ ಹಿತವಚನ ಕೇಳಿ ಅರೆಗಳಿಗೆ ಸುಮ್ಮನಾದರೂ ಮರಿಮಂಡೂಕನನ್ನು ಕಂಡಾಗ ಮತ್ತೆ ಚಿಕ್ಕ ಮೀನಿಗೆ ಕೊಳದಿಂದ ಹೊರಹೋಗಬೇಕೆಂಬ ಬಯಕೆ ಹೆಚ್ಚಾಗತೊಡಗಿತು. ಒಂದು ದಿನ ಅಮ್ಮನಿಗೆ ತಿಳಿಯದಂತೆ ಮರಿ ಮಂಡೂಕನೊಡನೆ ಚಿಕ್ಕ ಮೀನು ಕೊಳದಿಂದ ಹೊರ ಜಿಗಿಯಿತು. ನೀರಿನಿಂದ ಹೊರ ಬಂದ ಅರೆಕ್ಷಣದಲ್ಲಿ ಚಿಕ್ಕ ಮೀನು ಉಸಿರು ಕಟ್ಟಿದಂತಾಗಿ ವಿಲ ವಿಲ ಒದ್ದಾಡತೊಡಗಿದಾಗ ಗಾಬರಿಗೊಂಡ ಮರಿ ಮಂಡೂಕ ಕೂಡಲೇ ಕೊಳದಲ್ಲಿದ್ದ ಇನ್ನಿತರ ಮೀನುಗಳಿಗೆ ವಿಷಯವನ್ನು ತಿಳಿಸಿತು. ಅವೆಲ್ಲವೂ ದಡದ ಬಳಿ ನೆರೆದವು. ಚಿಕ್ಕ ಮೀನು ನೆಲದ ಮೇಲಿತ್ತು, ಹೀಗಾಗಿ ಇತರೆ ಮೀನುಗಳು ಅದರ ಸಹಾಯಕ್ಕೆ ಧಾವಿಸಲು ಆಗಲಿಲ್ಲ. ಕಡೆಗೆ ಮಂಡೂಕ ಮರಿ ತನ್ನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಮೀನಿನ ಮರಿಯನ್ನು ಒದೆಯಿತು. ಆ ಏಟಿಗೆ ಚಿಕ್ಕ ಮೀನು ಒಂದೇ ಬಾರಿಗೆ ಕೊಳದೊಳಕ್ಕೆ ಬಂದು ಬಿತ್ತು. ಅಮ್ಮನ ಎಚ್ಚರಿಕೆಯ ನುಡಿಯನ್ನು ನಿರ್ಲಕ್ಷಿಸಿ ತಾನು ವಾಸಿಸುವ ವಾತಾವರಣವನ್ನು ಬಿಟ್ಟು ಕಾಣದ ಲೋಕದ ಆಸೆಗೆ ಹೊರ ಜಿಗಿದ ಚಿಕ್ಕ ಮೀನು ಪ್ರಾಣಕ್ಕೆ ಸಂಚಕಾರ ತಂದುಕೊಂಡಿತ್ತು. ಅದು ಅಮ್ಮನಲ್ಲಿ ಕ್ಷಮೆ ಕೋರಿತು. ಮಂಡೂಕ ಮರಿ ಮತ್ತು ಚಿಕ್ಕ ಮೀನು ನೀರಿನಲ್ಲೇ ತಮ್ಮ ಆಟವನ್ನು ಮುಂದುವರಿಸಿದವು.
– ವಂದನಾ ರವಿ ಕೆ. ವೈ.