ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯಲ್ಲಿ ಅಕ್ರಮ ನಡೆದ ಆರೋಪ ಸಂಬಂಧ ತನಿಖೆಗೆ ಸದನ ಸಮಿತಿ ರಚಿಸಲು ಸರಕಾರ ಒಪ್ಪಿಕೊಂಡಿದೆ.
ಆದರೆ ವಿಪಕ್ಷ ಸದಸ್ಯರು ಒತ್ತಾಯಿಸಿದರು ಎಂದು ಯಾವುದೇ ಚರ್ಚೆಯಿಲ್ಲದೇ ಸದನ ಸಮಿತಿ ರಚಿಸಲು ಉನ್ನತ ಶಿಕ್ಷಣ ಸಚಿವರು ಒಪ್ಪಿಕೊಂಡಿದ್ದರಿಂದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಶುಕ್ರವಾರ ಬಿಜೆಪಿಯ ರಘುನಾಥ್‌ರಾವ್ ಮಲ್ಕಾಪುರೆ ಪ್ರಶ್ನೆ ಕೇಳಿ, ಕಳೆದ ವರ್ಷದ ಲ್ಯಾಪ್‌ಟಾಪ್ ವಿತರಣೆಯಲ್ಲಿ ಆಗಿರುವ ಅಕ್ರಮ ಹಾಗೂ ಪ್ರಸಕ್ತ ಸಾಲಿನಲ್ಲಿ ಲ್ಯಾಪ್‌ಟಾಪ್ ವಿತರಣೆಗೆ ಟೆಂಡರ್ ಕರೆಯಲು ವಿಳಂಬ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಸತ್ಯ ಹೊರಬರಲು ಪ್ರಕರಣವನ್ನು ಸದನ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸಹ ಧ್ವನಿಗೂಡಿಸಿದರು.
ಈ ಕುರಿತಂತೆ ಆಡಳಿತ ಮತ್ತು ವಿಪಕ್ಷದ ನಡುವೆ ಜಟಾಪಟಿ ಆರಂಭ ವಾಯಿತು. ಗದ್ದಲದ ಮಧ್ಯೆಯೇ ಎದ್ದುನಿಂತ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರಡ್ಡಿ, ಸದನ ಸಮಿತಿ ರಚನೆಗೆ ತನ್ನದೇನೂ ಅಭ್ಯಂತರ ವಿಲ್ಲ ಎಂದು ಕುಳಿತಲ್ಲಿಂದಲೇ ಸನ್ನೆ ಮಾಡಿದರು. ತತ್‌ಕ್ಷಣ ಸಭಾನಾಯಕ ಎಂ.ಆರ್. ಸೀತಾರಾಂ ಎದ್ದು ನಿಂತು, ಸದನ ಸಮಿತಿ ರಚನೆಗೆ ಸಚಿವರು ಒಪ್ಪಿಕೊಂಡಿದ್ದಾರೆ ಎಂದುಬಿಟ್ಟರು. ಈ ಹೇಳಿಕೆಯಿಂದ ಇಕ್ಕಟ್ಟಿಗೆ ಸಿಲುಕಿದ ರಾಯರಡ್ಡಿ ಒಲ್ಲದ ಮನಸ್ಸಿನಿಂದಲೇ ಸಮ್ಮತಿ ಸೂಚಿಸಿದರು.
ಉಗ್ರಪ್ಪ ಕೆಂಡಾಮಂಡಲ: ಸದನ ಸಮಿತಿ ರಚನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ವಿ.ಎಸ್. ಉಗ್ರಪ್ಪ, ಸದನ ಸಮಿತಿಗೆ ಅರ್ಥ ಇಲ್ಲವೇ? ಕೇಳಿದ್ದಕ್ಕೆಲ್ಲ ಸದನ ಸಮಿತಿ ರಚಿಸಲು ಇದೇನು ಹುಚ್ಚರಾಟವೇ? ಲ್ಯಾಪ್‌ಟಾಪ್ ಖರೀದಿಗೆ ಟೆಂಡರ್ ಕರೆದಿಲ್ಲ, ಖರೀದಿ ಪ್ರಕ್ರಿಯೆಯೂ ಆರಂಭವಾಗಿಲ್ಲ. ಸದನ ಸಮಿತಿ ರಚನೆ ಮಾಡಿದರೆ, ವರದಿ ಬರುವುದು ಯಾವಾಗ? ಮಕ್ಕಳಿಗೆ ಲ್ಯಾಪ್‌ಟಾಪ್ ಸಿಗುವುದು ಯಾವಾಗ? ಹೀಗಿದ್ದಾಗ ಸದನ ಸಮಿತಿ ರಚನೆಗೆ ಒಪ್ಪಿಕೊಂಡಿರಲ್ಲ, ನಿಮಗೆ ತಲೆ ಇಲ್ಲವೇ ಎಂದು ಸಚಿವ ಬಸವರಾಜ ರಾಯರಡ್ಡಿ ಅವರನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.
ಮಧ್ಯಪ್ರವೇಶಿಸಿದ ಸಚಿವ ಎಚ್.ಕೆ. ಪಾಟೀಲ್, ಸದನ ಸಮಿತಿಗೆ ಸಚಿವರ ಸಮ್ಮತಿ ಇದೆ. ಆದರೆ, ಟೆಂಡರ್ ಕರೆಯದ ವಿಷಯದ ಬಗ್ಗೆ ಸದನ ಸಮಿತಿ ರಚಿಸುವುದು ಎಷ್ಟು ಸಮಂಜಸ ಎಂಬುದನ್ನು ಸದನ ಆಲೋಚಿಸಬೇಕು ಎಂದು ಹೇಳಿದರು.
ಸದನ ಸಮಿತಿ ರಚನೆಗೆ ಕಾಂಗ್ರೆಸ್‌ನ ಎಸ್. ರವಿ, ಸಿ.ಎಂ.ಇಬ್ರಾಹಿಂ, ಶರಣಪ್ಪ ಮಟ್ಟೂರು ಆಕ್ಷೇಪ ವ್ಯಕ್ತಪಡಿಸಿದರು. ಆಗ ನಾನು ಹೇಳಲೇ ಇಲ್ಲ ಎಂದು ರಾಯರಡ್ಡಿ ಎಲ್ಲರಿಗೂ ಸನ್ನೆ ಮಾಡಿ ಹೇಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯರ ವಿರುದ್ಧ ಮುಗಿಬಿದ್ದ ವಿಪಕ್ಷ ಸದಸ್ಯರು, ಸಚಿವರೇ ಸದನ ಸಮಿತಿಗೆ ಒಪ್ಪಿಕೊಂಡಾಗ ನಿಮಗೇನು ಕಷ್ಟ. ಸತ್ಯ ಹೊರಬರಬಾದು ಎಂಬ ದುರುದ್ದೇಶ ನಿಮಗಿದೆ ಎಂದು ಹರಿಹಾಯ್ದರು.