ಕೊರಟಗೆರೆ: ಮಕ್ಕಳ ಶಿಕ್ಷಣದ ಅನುಕೂಲಕ್ಕಾಗಿ ಇನ್ಫೋಸಿಸ್ ವತಿಯಿಂದ ಯುವ ಬ್ರಿಗೇಡ್ ಸಹಯೋಗದೊಂದಿಗೆ ಟ್ಯಾಬ್ ವಿತರಿಸುತ್ತಿರುವುದು ಸಂತಸದ ವಿಷಯ ಎಂದು ಬಾಳೆ ಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಯುವ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರ ಸಮಾಜ ಸೇವೆ ಮತ್ತು ಯುವ ಬ್ರಿಗೇಡ್ ನ ಸಮಾಜ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ. ಇಂದು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ,ಶಾಲೆಯ ಫಲಿತಾಂಶ ಇನ್ನಷ್ಟು ಹೆಚ್ಚು ಗೊಳ್ಳಲಿ ಎಂಬ ಉದ್ದೇಶದಿಂದ ಟ್ಯಾಬ್ ವಿತರಣೆ ಮಾಡುತ್ತಿರುವುದು ಸಂತಸದ ವಿಷಯ.ಯುವ ಬ್ರಿಗೇಡ್ ವತಿಯಿಂದ ನೀಡಿರುವ ಟ್ಯಾಬ್ ಅನ್ನು ಶಿಕ್ಷಣಕ್ಕೆ ಮಾತ್ರ ಬಳಸಿ. ಈ ಟ್ಯಾಬ್ ನ ಉಪಯೋಗದಿಂದ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ಎಂದು ಹೇಳಿದರು.
ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನರಸಿಂಹರಾಜು ಮಾತನಾಡಿ ಇನ್ಫೋಸಿಸ್ ಮತ್ತು ಯುವ ಬ್ರಿಗೇಡ್ ವತಿಯಿಂದ ನಮ್ಮ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ಟ್ಯಾಬ್ ವಿತರಣೆ ಮಾಡುತ್ತಿರುವುದು ಸಂತಸದ ವಿಷಯ.ನಮ್ಮ ಶಾಲೆಯ ಅದೆಷ್ಟೋ ಬಡ ಕುಟುಂಬದಿಂದ ಮಕ್ಕಳು ನಮ್ಮ ಶಾಲೆಗೆ ಬರುತ್ತಾರೆ. ಅಂತವರಿಗೆ ಟ್ಯಾಬ್ ಅವಶ್ಯಕತೆ ಇದ್ದ, ಸಂದರ್ಭದಲ್ಲಿ ಟ್ಯಾಬ್ ವಿತರಣೆ ಮಾಡಿ ನಮ್ಮ ಶಾಲೆಯ ಫಲಿತಾಂಶ ಇನ್ನಷ್ಟು ಹೆಚ್ಚು ಗೊಳ್ಳಲು ಸಹಾಯ ಮಾಡಿದ್ದಾರೆ. ನಮ್ಮ ಶಾಲೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ವತಿಯಿಂದ ಅವರಿಗೆ ಧನ್ಯವಾದಗಳನ್ನು ತಿಳಿಸಲು ಇಚ್ಚೀಸುತ್ತೇನೆ ಎಂದು ಹೇಳಿದರು.
ಯುವ ಬ್ರಿಗೇಡ್ ನ ಜಿಲ್ಲಾ ಸಂಚಾಲಕರಾದ ಅಭಿಷೇಕ್ ಮಾತನಾಡಿ ನಮ್ಮ ಯುವ ಬ್ರಿಗೇಡ್ ತಂಡದ ಸಹಯೋಗದೊಂದಿಗೆ ಇನ್ಫೋಸಿಸ್ ವತಿಯಿಂದ ಮಕ್ಕಳು ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿಹೊಂದಲು ಸಹಾಯವಾಗಲಿ ಎಂಬ ಹಿತ ದೃಷ್ಟಿಯಿಂದ ಟ್ಯಾಬ್ ವಿತರಣೆ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ 50 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ನಮ್ಮ ತುಮಕೂರು ಜಿಲ್ಲೆಯ ದೊಡ್ಡವೀರನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಕೊರಟಗೆರೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಎರಡು ಶಾಲೆಗಳನ್ನು ಆಯ್ಕೆ ಮಾಡಿ ಟ್ಯಾಬ್ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಾಸವಿ ಬ್ಯಾಂಕರ್ಸ್ ಮಾಲೀಕರಾದ ಬದ್ರಿಪ್ರಸಾದ್, ಗುಪ್ತ ಜ್ಯೂಯಲರ್ಸ್ ಮಾಲೀಕರಾದ ನವೀನ್ ಕುಮಾರ್,ಯುವ ಬ್ರಿಗೇಡ್ ನ ರಂಜಿತ್,ಸಿದ್ದಾರ್ಥ್, ಗೌತಮ್,ಆನಂದ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.