ಶ್ರೀಲಂಕಾದಲ್ಲಿ ಉಂಟಾಗಿರುವ ಬಿಕ್ಕಟ್ಟು ತಲ್ಲಣ ಹುಟ್ಟಿಸುವಂಥದ್ದೇ ಆಗಿದೆ. ಆರ್ಥಿಕವಾಗಿ ಬಿಕ್ಕಟ್ಟು ಆ ದೇಶದ್ದೇ ಆಗಿದ್ದರೂ ಭಾರತ ಸರಕಾರ ಕಣ್ಣುಮುಚ್ಚಿ ಕುಳಿತುಕೊಳ್ಳುವಂತೆಯೇ ಇಲ್ಲ ಎನ್ನುವುದು ಗಮನಾರ್ಹ ವಾಗಿರುವ ಅಂಶ. ಇಂಥ ಒಂದು ಅಂಶವನ್ನು ಉಲ್ಲೇಖೀಸಲು ಬಲವಾ ಗಿರುವ ಕಾರಣಗಳು ಇವೆ. ದ್ವೀಪ ರಾಷ್ಟ್ರದ ಸರಕಾರ ವಿಫಲ ಹೊಂದಲು ಪ್ರಮುಖ ಕಾರಣವೇನೆಂದರೆ ಅಲ್ಲಿ ಆಡಳಿತ ಇರುವ ರಾಜಪಕ್ಸ ಕುಟುಂಬದ ದುರಾಡಳಿತ ಮತ್ತು ನಯವಾಗಿ ಮಾತನಾಡಿ ವಂಚಿಸುವ ಚೀನದ ಸಾಲದ ಸುಳಿಗೆ ಬಿದ್ದದ್ದು.
ಪ್ರಸಕ್ತ ವರ್ಷದ ಆರಂಭದಿಂದಲೇ ಆ ದೇಶದಲ್ಲಿ ಹಲವು ರೀತಿಯ ಬಿಕ್ಕಟ್ಟುಗಳು ಶುರುವಾಗುತ್ತಾ ಋಣಾತ್ಮಕವಾಗಿಯೇ ಸುದ್ದಿಯಾಗ ಲಾರಂಭಿಸಿತ್ತು. ಆ ದೇಶದ ಆಡಳಿತ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ರೀತಿಯ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ದುರದೃಷ್ಟಕರ ವಾಗಿರುವ ಸಂಗತಿ. ಕೊಲಂಬೋದ ಕೇಂದ್ರ ಭಾಗದಲ್ಲಿ ಇರುವ
ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಜನರಿಗೆ ಕೋಟ್ಯಂತರ ಮೌಲ್ಯದ ಶ್ರೀಲಂಕಾ ರೂಪಾಯಿ ನೋಟುಗಳು ಸಿಕ್ಕಿವೆ ಎಂದು ವರದಿಯಾಗಿದೆ. ಅದು ಸತ್ಯವೇ ಆಗಿದ್ದರೆ, ಚೀನ ಮತ್ತು ಇತರ ರಾಷ್ಟ್ರಗಳಿಂದ ಆ ದೇಶದ ಸರಕಾರ ಪಡೆದುಕೊಂಡಿದ್ದ ಸಾಲದ ಮೊತ್ತ ಎಲ್ಲಿಗೆ ಹೋಯಿತು, ದೇಶದ ಅರ್ಥ ವ್ಯವಸ್ಥೆ ಏಕೆ ಕುಸಿಯಿತು ಎಂಬ ಬಗ್ಗೆ ಉತ್ತರಗಳು ಯಾರೂ ಹೇಳದೆಯೇ ಸಿಗುತ್ತದೆ.
ಲಂಕಾ ಸರಕಾರ ಚೀನದಿಂದ ಸಾಲ ಪಡೆದು ಮಾಡಿಕೊಂಡ ತಪ್ಪಿಗೆ ಕೊಲಂಬೋ ಬಂದರು ಪ್ರದೇಶವನ್ನು ಚೀನಕ್ಕೆ ಭೋಗ್ಯಕ್ಕೆ ನೀಡಲಾಗಿದೆ. ಈಗಾಗಲೇ ಆ ನಿರ್ಧಾರದ ಪ್ರತಿಕೂಲ ಪರಿಣಾಮ ಆ ದೇಶದಲ್ಲಿ ಉಂಟಾಗುತ್ತಿದೆ. ನೆರೆಯ ದೇಶಗಳಲ್ಲಿ ಚೀನದ ಹಸ್ತಕ್ಷೇಪ ಹೆಚ್ಚಿದಷ್ಟು ನಮ್ಮ ದೇಶಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ. ಅದನ್ನು ತಪ್ಪಿಸುವ ನಿಟ್ಟಿನಲ್ಲಿಯೇ ದ್ವೀಪರಾಷ್ಟ್ರದ ಹಂಬಂತೋಟ ಬಂದರು ಸಮೀಪ ಇರುವ ಮಟ್ಟಾಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2017ರಲ್ಲಿ ಭಾರತ ಸರಕಾರ ಖರೀದಿಸಿ, ಅದನ್ನು ಪುನರ್ ನಿರ್ಮಾಣ ಮಾಡುತ್ತಿದೆ. ಇದರ ಜತೆಗೆ ಕೊಲಂಬೋ ಬಂದರಿನಲ್ಲಿ 700 ಮಿಲಿಯ ಡಾಲರ್ ವೆಚ್ಚದಲ್ಲಿ ಜೆಟ್ಟಿಯೊಂದನ್ನು ನಿರ್ಮಾಣ ಮಾಡುತ್ತಿದೆ.
ಏಕೆಂದರೆ ಶ್ರೀಲಂಕಾದಲ್ಲಿ ಮುಂದೆ ಅಸ್ತಿತ್ವಕ್ಕೆ ಬರುವ ಸರಕಾರ ಬಹುಸ್ತರದ ಸವಾಲುಗಳನ್ನು ಹೊಂದಿದೆ. ಆ ದೇಶದ ಅರ್ಥ ವ್ಯವಸ್ಥೆ ಸುಧಾರಿಸುವುದು, ಸದ್ಯದ ಉದ್ರಿಕ್ತತೆಯನ್ನು ಶಮನಗೊಳಿಸುವುದು, ಚೀನದ ಹಸ್ತಕ್ಷೇಪ ತಗ್ಗಿಸುವಂತೆ ಮಾಡುವಲ್ಲಿ ಮಾರ್ಗೋಪಾಯಗಳ ಅನುಸರಣೆ, ಆಂತರಿಕ ಭದ್ರತೆ ಮೇಲ್ದರ್ಜೆಗೆ ಏರಿಸುವುದು ಸವಾಲುಗಳು. ಇಂಥ ಸಂದರ್ಭವನ್ನು ಭಾರತ ಸರಕಾರ ತನಗೆ ಅನುಕೂಲವನ್ನಾಗಿ ಮಾರ್ಪಡಿಸಲು ಸುವರ್ಣಾವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಅಲ್ಲಿ ಬಿಕ್ಕಟ್ಟು ಕೈಮೀರಿ ಹೋದ ದಿನದಿಂದಲೂ ಭಾರತ ಸರಕಾರ ವಿತ್ತೀಯ ನೆರವು, ಪೆಟ್ರೋಲ್, ಡೀಸೆಲ್, ಅಕ್ಕಿ ಮತ್ತು ಇತರ ನೆರವು ನೀಡುತ್ತಾ ಬಂದಿದೆ. ಅದನ್ನು ಇನ್ನೂ ಹೆಚ್ಚಿಸುವ ಮೂಲಕ ದ್ವೀಪರಾಷ್ಟ್ರದ ಸದ್ಯದ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮುಖಂಡರ ವಿಶ್ವಾಸ ಗಳಿಸಬೇಕು. ಮುಂದಿನ ದಿನಗಳಲ್ಲಿ ಚೀನ ಸಾಲ ನಂಬಿಕೊಂಡರೆ ಏನು ಆಗುತ್ತದೆ. ಅದಕ್ಕೆ ಸದ್ಯ ನಡೆಯುತ್ತಿರುವ ವಿದ್ಯಮಾನ ಸಾಕ್ಷಿ ಎಂದು ಮನವರಿಕೆ ಮಾಡಿದಲ್ಲಿ ದಕ್ಷಿಣ ಏಷ್ಯಾದಲ್ಲಿ ಭಾರತವೇ ಕಿಂಗ್ ಆಗುವುದರಲ್ಲಿ ಸಂಶಯವಿಲ್ಲ.