Advertisement

ಭಾಷಾ ರಕ್ಷಣೆಗೆ ಹೋರಾಟ ಅಗತ್ಯ

09:42 AM Mar 08, 2019 | |

ಭದ್ರಾವತಿ: ಜಾತ್ಯಾತೀತ ಒಕ್ಕೂಟ ವ್ಯವಸ್ಥೆಯ ದೇಶದಲ್ಲಿರುವ ನಾವು ಬೇರೆ ಭಾಷೆಗಳನ್ನು ಗೌರವಿಸುವಂತೆ ಕನ್ನಡವನ್ನು ಗಟ್ಟಿಗೊಳಿಸಿದಲ್ಲಿ ನಮ್ಮ ಸಂಸ್ಕೃತಿ ಸಾಂಸ್ಕೃತಿಕವಾಗಿ ಮೇಳೈಸುತ್ತದೆ ಎಂದು ಹೊಸಮನೆ ಸರಕಾರಿ ಪ್ರರ್ಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|ಬಿ.ಜಿ.ಧನಂಜಯ ಹೇಳಿದರು. 

Advertisement

 ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಕಸಾಪ 8 ನೇ ತಾಲೂಕು ಸಮ್ಮೇಳನದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು. ಒಂದು ಶತಮಾನದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್‌ ಪ್ರಾತಿನಿಧಿಕ ಸಂಸ್ಥೆಯಾಗಿ ಸಮ್ಮೇಳನಗಳ ಮೂಲಕ ಕನ್ನಡಿಗರಲ್ಲಿ ಗಟ್ಟಿತನ ಮತ್ತು ಜಾಗೃತಿ ಮೂಡಿಸುತ್ತಿದೆ. ಚದುರಿ ಹೋಗಿರುವವರು ಒಂದೆಡೆ ಒಗ್ಗೂಡಿಸುವ ಸಾರ್ವಭೌಮತ್ವದ ಸಂಸ್ಥೆಯಾಗಿದೆ. ಕನ್ನಡವು ಅನ್ನದ ಜೀವನದ ಜೀವಂತ ಭಾಷೆಯಾಗಿರುವುದರಿಂದ ಮಹಾಭಾರತದ ಗ್ರಂಥವನ್ನು ಸಂಸ್ಕೃತ ಭಾಷೆಯ ನಂತರ ಕನ್ನಡದಲ್ಲಿ ಮಾತ್ರ ರಚಿಸಲಾಗಿದೆ. ಚಲನ ಚಿತ್ರ ನಟರು ಸೇರಿದಂತೆ ಕಲಾವಿದರು ಮತ್ತು ಸಾಹಿತಿಗಳು ಭಾಷೆಗೆ ಕುತ್ತು ಬಂದಾಗ ತಮ್ಮ ಅಚಲ ನಿರ್ಧಾರವನ್ನು ಹೊರಹಾಕಿ ಹೋರಾಟದ ಮೂಲಕ ಬೀದಿಗಿಳಿಯಬೇಕು ಎಂದರು.

 ಸಮ್ಮೇಳನಾಧ್ಯಕ್ಷ ಎಚ್‌.ಎನ್‌.ಮಹಾರುದ್ರ ಮಾತನಾಡಿ ದೇಶದ ಭೂಪಟದಲ್ಲಿ ಹೆಸರಾಗಿರುವ ಕೈಗಾರಿಕ ಮತ್ತು ಕೃಷಿ ನಗರದಲ್ಲಿ ಹಿಂದೆ ಜನರು ಸಮೃದ್ಧ ಜೀವನ ಸಾಗಿಸುತ್ತಿದ್ದರು. ಕಾಲ ಕ್ರಮೇಣ ಕಾರ್ಖಾನೆಗಳು ಕ್ಷೀಣಿಸಿ ಕಾರ್ಮಿಕ ಕುಟುಂಬಗಳು ಮತ್ತು ಅವಲಂಬಿತ ಸಾರ್ವಜನಿಕರು ಆತಂಕಕ್ಕೊಳಗಾಗಿರುವುದು ದುರಂತವಾಗಿದೆ ಎಂದರು.
 
ನಗರಸಭಾ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್‌ ಮಾತನಾಡಿ, ಇಂತಹ ಸಭೆ ಸಮಾರಂಭಗಳಿಂದ ನಾಡು ನುಡಿ ಭಾಷೆ ಸಂಸ್ಕೃತಿ ಉಳಿಯುತ್ತದೆ. ಅಲ್ಲದೆ ಕನ್ನಡಿಗರ ಮನಸ್ಸುಗಳನ್ನು ಒಗ್ಗೂಡಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅನೇಕರನ್ನು ಸನ್ಮಾನಿಸಲಾಯಿತು. 10 ನೇ ತರಗತಿ ಕನ್ನಡ ಭಾಷೆಯಲ್ಲಿ 125 ಅಂಕಗಳನ್ನು ಗಳಿಸಿದ 35 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತಾಪಂ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ತುಂಗಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶ್‌ರಾವ್‌, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಬಿ.ರವಿಕುಮಾರ್‌, ಬಿಇಒ ಎಂ.ಸಿ. ಆನಂದ್‌, ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಪಿ. ಕುಮಾರ್‌, ಕೆ.ಎಂ. ಸತೀಶ್‌, ಕಲಾವಿದ ಅಪೇಕ್ಷ ಮಂಜುನಾಥ್‌, ವಿಐಎಸ್‌ಎಲ್‌ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಉಪನ್ಯಾಸಕ ಡಾ| ನಾಸೀರ್‌ ಖಾನ್‌, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಎಸ್‌.ಕೆ. ಮೋಹನ್‌, ಜುಂಜಾನಾಯ್ಕ ಮತ್ತಿತರರು ಸನ್ಮಾನ ಸ್ವೀಕರಿಸಿದರು. ಸ್ಫೂರ್ತಿ ಶಾಲಾ ಮಕ್ಕಳು ನಾಡಗೀತೆ ಹಾಡಿದರು. ಅಣ್ಣಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next