Advertisement
ಹೊಸ ಶಿಕ್ಷಣ ನೀತಿ ಮಾರ್ಗಸೂಚಿ ಪ್ರಕಾರ ಪದವಿಯಲ್ಲಿ 2 ಭಾಷೆಗಳ ಪೈಕಿ ಒಂದನ್ನು (ಕನ್ನಡ) ಅನಿವಾರ್ಯಗೊಳಿಸಿ ಮತ್ತೂಂದು ಭಾಷೆಯಾಗಿ ಇತರ ಯಾವುದಾದರೂ ಒಂದನ್ನು ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ. ಮತ್ತೂಂದು ಭಾಷೆಯಾಗಿ ವಿದ್ಯಾರ್ಥಿಗಳು ಬಹುತೇಕ ಇಂಗ್ಲಿಷನ್ನು ಆಯ್ಕೆ ಮಾಡುವುದರಿಂದಾಗಿ ಹಿಂದಿ, ಸಂಸ್ಕೃತ ಸೇರಿದಂತೆ ಇತರ ಭಾಷೆಗಳ ಅಧ್ಯಯನಕ್ಕೆ ಅವಕಾಶ ಇಲ್ಲವಾಗಿದೆ. ರಾಜ್ಯಾದ್ಯಂತ ತಾತ್ಕಾಲಿಕ ನೆಲೆಯಲ್ಲಿ ಇರುವ ಸಾವಿರಾರು ಪ್ರಾಧ್ಯಾಪಕರು ಕೆಲಸ ಕಳಕೊಳ್ಳುವ ಆತಂಕ ಎದುರಾಗಿದೆ.
Related Articles
Advertisement
ಕನ್ನಡದ ಜತೆಗೆ ಒಂದು ಭಾಷೆಯನ್ನು ಮಾತ್ರ ಕಲಿಯಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಿರುವುದರಿಂದ ಹಿಂದಿಯ ಜತೆಗೆ ತುಳು, ಉರ್ದು, ಕೊಂಕಣಿ, ಕೊಡವ ಭಾಷೆಗಳನ್ನು ಕೂಡ ಅಧ್ಯಯನ ಮಾಡಲು ಅವಕಾಶ ಇಲ್ಲ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ತುಳು, ಕೊಂಕಣಿ, ಉರ್ದು ಕಲಿಕೆಗೆ ಇಲ್ಲಿಯವರೆಗೆ ಉತ್ತಮ ಅವಕಾಶ ಲಭಿಸುತ್ತಿತ್ತು. ಆದರೆ ಇನ್ನು ಮುಂದೆ ಇದಕ್ಕೂ ಅವಕಾಶ ಇಲ್ಲವಾದರೆ ಸ್ಥಳೀಯ ಭಾಷಾ ಕಲಿಕೆಗೆ ಬಹುದೊಡ್ಡ ಹೊಡೆತ ಬಿದ್ದಂತಾಗಲಿದೆ.
2 ಭಾಷೆ ಬೋಧನೆಗೆ ಅವಕಾಶ ಸಿಗಲಿ :
ಪ್ರಸ್ತುತ ಇರುವಂತೆ, ಇನ್ನು ಮುಂದೆಯೂ ಯಾವುದಾದರೂ ಎರಡು ಭಾಷೆಗಳ ಬೋಧನೆ ಮತ್ತು ಅಧ್ಯಯನಕ್ಕೆ ಅವಕಾಶ ಕೊಡಬೇಕು. ಒಂದು ಭಾಷೆ ಅನಿವಾರ್ಯವಾದರೆ, ಮತ್ತೂಂದು ಆಯ್ಕೆಯಾಗಿ ಇಂಗ್ಲಿಷ್ ಅನ್ನು ವಿದ್ಯಾರ್ಥಿಗಳು ಪರಿಗಣಿಸುತ್ತಾರೆ. ಇದರಿಂದ ಹಿಂದಿ ಸೇರಿದಂತೆ ಇತರ ಭಾಷೆಯ ಅಧ್ಯಾಪಕರು ಬೀದಿಗೆ ಬೀಳಲಿದ್ದಾರೆ. – ಡಾ| ಎಸ್.ಎ. ಮಂಜುನಾಥ್, ಅಧ್ಯಕ್ಷರು, ಹಿಂದಿ ಪ್ರಾಧ್ಯಾಪಕರ ರಾಜ್ಯ ಸಂಘ
ಕೆಲಸ ಕಳೆದುಕೊಳ್ಳುವ ಆತಂಕ :
ಹೊಸ ಶಿಕ್ಷಣ ನೀತಿಯಿಂದ ಸಂಸ್ಕೃತ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಹೊಡೆತ ಬೀಳಲಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಭಾಷೆಗಳು ಮೌಲ್ಯ ಕಳೆದುಕೊಳ್ಳುವ ಅಪಾಯ ಎದುರಾಗಲಿದೆ. ನೂರಾರು ಪ್ರಾಧ್ಯಾಪಕರು ಮುಂದೆ ಕೆಲಸ ಕಳೆದುಕೊಳ್ಳುವ ಜತೆಗೆ ಸಂಶೋಧನೆ, ಅನುವಾದ ಕ್ಷೇತ್ರಕ್ಕೆ ಸಮಸ್ಯೆಯಾಗಲಿದೆ.– ಡಾ| ಸಿ. ಶಿವಕುಮಾರಸ್ವಾಮಿ, ಅಧ್ಯಕ್ಷರು, ಸಂಸ್ಕೃತ ಪ್ರಾಧ್ಯಾಪಕರ ರಾಜ್ಯ ಸಂಘ
-ದಿನೇಶ್ ಇರಾ