Advertisement
ಮುಂಬಯಿಯಲ್ಲಂತೂ ಈ ವಲಸೆ ಶಬ್ದಗಳು ಅವೆಷ್ಟು ಬಲಿತವೆಂದರೆ ಅವುಗಳಿಂದಾಗಿ ಬಂಬಯ್ಯ ಎಂಬ ಹಿಂದಿಯ ಅಪಭ್ರಂಶ- ಭಾಷೆಯೇ ಸೃಷ್ಟಿಗೊಂಡಿತು. ಹಲವು ಭಾಷೆಗಳಿರುವ ಮುಂಬಯಿಯಲ್ಲಿ ಯಾವೊಂದು ಭಾಷೆಯ ಜನರೂ ಬಹುಸಂಖ್ಯೆಯಲ್ಲಿರಲಿಲ್ಲ. ಇಲ್ಲಿಗೆ ಬರುತ್ತಿದ್ದ ಉತ್ತರಭಾರತೀಯರ ಭಾಷೆಗಳಾದ ಹಿಂದಿ ಮತ್ತು ಉರ್ದುಗಳಿಂದ ಪ್ರೇರಿತವಾಗಿ ರೂಪುಗೊಂಡ ಈ ಪ್ರಭೇದವು ವಿಭಿನ್ನ ಭಾಷೆಗಳ ಜನರಿಗೆ ಪರಸ್ಪರ ಮಾತುಕತೆಯಾಡಲು ಸಂಪರ್ಕ ಭಾಷೆಯಾಯಿತು. ಇದು ಇಲ್ಲಿಯ ಮೂಲ ಭಾಷೆಗಳಾದ ಮರಾಠಿ ಮತ್ತು ಗುಜರಾತಿ ಎರಡನ್ನೂ ಮೀರಿಸಿ ಮುಂಬಯಿಯ ಅಧಿಕೃತ ಭಾಷೆಯಾಗಿ ಬಿಟ್ಟಿದೆ. ಹಿಂದಿ-ಉರ್ದು ಭಾಷೆಗಳ ಮಿಶ್ರಣಕ್ಕೆ ಸಾಕಷ್ಟು ಮರಾಠಿ, ಕೊಂಕಣಿ, ಗುಜರಾತಿ ಶಬ್ದಗಳ ಅಪಭ್ರಂಶಗಳು ಸೇರಿಕೊಂಡು ಆದ ಕಲಸುಮೇಲೋಗರವೇ ಬಂಬಯ್ಯ. ಈ ಆಡುಭಾಷೆಯು ನಿಯಮಗಳ ಬಗ್ಗೆಯಾಗಲಿ, ವ್ಯಾಕರಣದ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ, ಹೊಸಬರು ಇದನ್ನು ಮಾತನಾಡಲಿಕ್ಕೆ ಸಂಕೋಚಿಸುವ ಅಗತ್ಯವಿಲ್ಲ.
Related Articles
Advertisement
ಇನ್ನು ಇಂಗ್ಲಿಷ್ ಭಾಷೆಯ ಶಬ್ದಗಳಂತೂ ದೇಶದ ಎಲ್ಲ ಭಾಷೆಗಳೊಳಗೆ ಉಚಿತ ಪ್ರವೇಶ ಪಡೆದಿವೆ. ತರಕಾರಿ ಮಾರ್ಕೆಟಿನಲ್ಲಿ ಸೊಪ್ಪು ಮಾರುವ ಹೆಂಗಸು ಒಮ್ಮೆ ಕಷ್ಟ-ಸುಖ ಮಾತಾಡುತ್ತ, ತನ್ನ ಗಂಡನದು “ಟೆಂಪರವರಿ ಕೆಲಸ. ಟೆಂಪರವರಿ ಎಂದರೆ ಗೊತ್ತಲ್ಲ?’ ಎಂದು ಕೇಳಿದ್ದಳು. ತಾನು ಉಪಯೋಗಿಸಿದ “ಮರಾಠಿ’ ಶಬ್ದ ನನಗೆ ಅರ್ಥ ಆಗಿದೆಯೋ ಇಲ್ಲವೋ ಎಂಬ ಆತಂಕ ಅವಳಿಗೆ! ಶಾಲೆಗೂ ಹೋಗದ ಆಕೆಯ ಭಾಷೆಯೊಳಗೆ “ಟೆಂಪರರಿ’ಯಂತಹ ಇಂಗ್ಲಿಷ್ ಶಬ್ದವು “ಪರ್ಮನೆಂಟ್’ ಆಗಿ ಸೇರಿಕೊಂಡುಬಿಟ್ಟಿತ್ತು. ಹಾಗೆಯೇ “ಟೇಮ…’, “ಟೆನ್ಶನ್’ನಂತಹ ಶಬ್ದಗಳೂ ಸಾಲುಕಟ್ಟಿ ವಲಸೆ ಬಂದಿದ್ದಾವೆ.
ಜಗತ್ತಿನಾದ್ಯಂತ ವಲಸೆ ಭಾಷೆಗಳು ಮಾಡಿದ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳು ಅಸಾಧಾರಣ. ಉದಾಹರಣೆಗೆ, ಈಜಿಪ್ತ್, ಸಿರಿಯಾ, ಇರಾಕ್ ಮುಂತಾದ ಅರಬ್ ದೇಶಗಳಲ್ಲಿ “ಕೋಪಿಕ್’ನಂಥ ಅಲ್ಲಿಯವೇ ಆದ ಪ್ರಬುದ್ಧ ಭಾಷೆಗಳಿದ್ದವು. ಆದರೆ, ಇಸ್ಲಾಮಿನೊಡನೆ ಅರಬರು ತಂದ ಅರಬ್ಬೀ ಭಾಷೆಯನ್ನು ಅವರು ತಮ್ಮದಾಗಿ ಮಾಡಿಕೊಂಡದ್ದರಿಂದ ಅದು ಇಸ್ಲಾಮೀ ಸಾಮ್ರಾಜ್ಯದ ಅಧಿಕೃತ ಭಾಷೆಯಾಯಿತು. ಇಂದಿಗೆ ಅರಬ್ ದೇಶಗಳು ತೋರಿಕೆಗಾದರೂ ಒಗ್ಗಟ್ಟಿನಲ್ಲಿ¨ªಾವೆಂದು ಕಂಡರೆ ಅದು ಇದೇ ಕಾರಣದಿಂದಾಗಿ. ಇನ್ನು, “ಸೂರ್ಯಾಸ್ತಮಾನವಾಗದ’ ಸಾಮ್ರಾಜ್ಯವನ್ನು ಕಟ್ಟಿ ಆಳಿದ ಬ್ರಿಟಿಷರಿಂದಾಗಿ, ಹಲವಾರು ದೇಶಗಳಲ್ಲಿ ಇಂಗ್ಲಿಷ್ ಇಂದಿಗೆ ರಾಷ್ಟ್ರಭಾಷೆಯಾಗಿದೆ. ಈಗಂತೂ ಅದು ಅನಧಿಕೃತ ಜಾಗತಿಕ ಸಂಪರ್ಕ ಭಾಷೆಯೂ ಆಗಿದ್ದು, ಅದರ ಶಬ್ದಗಳು ವಲಸೆ ಹೋಗದ ಭಾಷೆಗಳಿಲ್ಲ ಎಂಬಂತಾಗಿದೆ. ಇಂಗ್ಲಿಷ್ ಕೂಡ ಅಷ್ಟೇ ಭರದಿಂದ ಇತರ ಭಾಷೆಗಳ ಶಬ್ದಗಳನ್ನು ತನ್ನೊಡಲಲ್ಲಿ ಸೇರಿಸುತ್ತಲೇ ಬಂದಿದೆ.
ಶತಮಾನಗಳ ಹಿಂದೆ ಸಂಸ್ಕೃತವು ಭಾರತದ ಸಂಪರ್ಕ-ಭಾಷೆಯಾಗಿತ್ತು. ಹೀಗಾಗಿ, ದೇಶದ ಎಲ್ಲ ಭಾಷೆಗಳಲ್ಲೂ ಸಂಸ್ಕೃತ ಶಬ್ದಗಳು ಹಾಸುಹೊಕ್ಕಿವೆ. ಆಗ ಭಾರತೀಯರು ಕಾಂಬೋಡಿಯಾ, ಇಂಡೊನೇಶಿಯಾ ಮತ್ತು ಇತರ ದಕ್ಷಿಣ ಏಷ್ಯಾ ದೇಶಗಳಿಗೆ ವಲಸೆ ಹೋಗಿ ಅಲ್ಲಿಯ ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಪಾಲುಗೊಂಡದ್ದರಿಂದ, ಅಲ್ಲಿಯ ಭಾಷೆಗಳಲ್ಲೂ ವಿಪುಲವಾಗಿ ಸಂಸ್ಕೃತ ಶಬ್ದಗಳನ್ನು ಕಾಣಬಹುದು.
ಹೀಗೆ ಭಾಷೆ ಮತ್ತು ಶಬ್ದಗಳ ವಲಸೆಯ ಕತೆ ದೊಡ್ಡದು.
ಮಿತ್ರಾ ವೆಂಕಟ್ರಾಜ್