Advertisement
ಯಾವುದೇ ಭಾಷೆ ಜೀವಂತವಾಗಿರಲು ಮಾತು ಮತ್ತು ಬರಹ ಅವಶ್ಯ. ಮಣ್ಣು ಮತ್ತು ಭಾಷೆಗೆ ಭಾವುಕತೆ ಬಹು ಬೇಗನೆ ಅಂಟಿಕೊಂಡು ಬಿಡುತ್ತದೆ. ಸಾಮಾನ್ಯವಾಗಿ ನಾವು ನಮ್ಮ ತಾಯ್ನುಡಿಯ ಬಗ್ಗೆ ಅಪಾರವಾದ ಒಲವನ್ನು ಹೊಂದಿರುತ್ತೇವೆ. ಆದರೆ ನಾವೀಗ ಕನ್ನಡದ ಬಗೆಗೆ ಅಂದಿನ ಒಲವು ಹಾಗೂ ಆತ್ಮೀಯತೆಯನ್ನು ಹೊಂದಿಲ್ಲವೆಂಬುದೂ ವಿಷಾದದ ಸಂಗತಿ. ನಮ್ಮ ಪಾರಂಪರಿಕ ಸಂಪತ್ತನ್ನು ಉಳಿಸಿಕೊಳ್ಳಲು ಭಾಷೆಯಷ್ಟು ಪರಿಣಾಮಕಾರಿ ಯಾದ ಉಪಕರಣ ಮತ್ತೂಂದಿಲ್ಲ. ಶಿಕ್ಷಣದಲ್ಲಿ ತಾಯ್ನುಡಿಗೆ ಪ್ರಾಮುಖ್ಯವಿರಬೇಕಾದುದು ಅತ್ಯ ಗತ್ಯ. ಮಾತೃಭಾಷಾ ಶಿಕ್ಷಣವು ವಿಷಯ ವನ್ನು ಮನಸ್ಸಿಗೆ ನಾಟಿಸಲು, ಸೃಜನ ಶೀಲತೆಯನ್ನು ಅರಳಿಸಲು ಸಹಕಾರಿ. ಹಿಂದೆ ಬಳಕೆಯಲ್ಲಿದ್ದ ಅದೆಷ್ಟೋ ಭಾಷೆಗಳು ಇಂದು ಜಗತ್ತಿನಿಂದಲೇ ಕಣ್ಮರೆಯಾಗಿ ಹೋಗಿವೆ. ತಜ್ಞರ ಪ್ರಕಾರ, ಪ್ರತೀ ವಾರವೂ ಸುಮಾರು ಎರಡು ಭಾಷೆಗಳು ಕಣ್ಮರೆಯಾಗು ತ್ತಿವೆ. ಹೀಗೆ ನುಡಿಯ ಮರಣ ಒಂದು ಸಮುದಾಯದ ಅದುವರೆಗಿನ ಬದುಕು, ಸಾಧನೆಗಳ ಕುರುಹನ್ನೇ ನಿರ್ನಾಮವಾಗಿಸುತ್ತದೆ. ಯಾವುದೇ ಭಾಷೆಯಾಗಲೀ ಅಥವಾ ಸಾಹಿತ್ಯವಾಗಲೀ ಬೆಳೆಯಲು ಅನ್ಯಭಾಷಾ ಸಂಸರ್ಗ ಅಗತ್ಯ. ನಮ್ಮ ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಅನ್ಯಭಾಷೆಯನ್ನು ಆಶ್ರಯಿಸುವುದರ ಮೂಲಕ ಭಾಷೆಯೊಂದು ತನ್ನ ಒಡಲನ್ನು ತುಂಬಿಕೊಳ್ಳುತ್ತದೆ. ಹಾಗೆಯೇ ಕನ್ನಡವೂ ಪೂರ್ವದಲ್ಲಿ ಸಂಸ್ಕೃತ, ಪ್ರಾಕೃತಗಳಿಂದಲೂ, ಅನಂತರ ಮರಾಠಿ, ಹಿಂದೂಸ್ಥಾನಿ, ಪೋರ್ಚುಗೀಸ್ ಮೊದಲಾದ ಭಾಷೆ ಗಳ ಸಂಸರ್ಗದ ಮೂಲಕ ಬೆಳೆದು ಬಂದಿದೆ. ಹೊಸತನ್ನು ಸೇರಿಸಿಕೊಂಡು ಬೆಳೆಯುವುದು ಯಾವುದೇ ಜೀವಂತ ಭಾಷೆಯ ಲಕ್ಷಣವೂ ಹೌದು. ಜನರ ನುಡಿಗಳಲ್ಲಿ ಅನ್ಯಭಾಷಾ ಪದಗಳು ಅಪ್ರಜ್ಞಾಪೂರ್ವಕವಾಗಿ ನುಸುಳುತ್ತವೆ. ಕೊನೆಗೊಮ್ಮೆ ಅವು ಅನ್ಯಭಾಷಾ ಪದಗಳು ಎಂಬ ಸಂದೇಹಕ್ಕೂ ಎಡೆ ಇಲ್ಲದಂತೆ ನಮ್ಮ ಬದುಕಿನ ಭಾಗವಾಗಿ ಬಿಡುತ್ತವೆ. ಕನ್ನಡವನ್ನು ಅಚ್ಚಗನ್ನಡವನ್ನಾಗಿ ಉಳಿಸುವ ಪ್ರಯತ್ನಗಳು ಎಲ್ಲ ಕಾಲ ದಲ್ಲಿಯೂ ನಡೆದಿವೆ. ಆದರೆ ಅವೆಲ್ಲ ವನ್ನೂ ಮೀರಿ ಭಾಷೆಯು ಬೆಳೆ ಯುತ್ತದೆ. ಅಂತೆಯೇ ಕನ್ನಡವೂ ಸಹ ಶುದ್ಧ-ಅಶುದ್ಧತೆಗಳ ಮಡಿವಂತಿಕೆ ಯನ್ನು ಬದಿಗೊತ್ತಿ ಬೆಳೆದಿದೆ.
Related Articles
Advertisement
ಭಾಷೆ ಎನ್ನುವುದು ಸಮಾಜ ವಿಜ್ಞಾ ನಿಗಳು ಭಾವಿಸುವಂತೆ ನಮ್ಮ ಅಸ್ಮಿತೆ ಹೌದಾದರೆ, ನಾವೇ ಭಾಷೆಯನ್ನು ಆಯ್ದುಕೊಂಡರೂ ಅಥವಾ ಭಾಷೆ ಯೇ ನಮ್ಮನ್ನು ಆಯ್ದುಕೊಂಡರೂ ಒಂದಂತೂ ನಿಜ; ಬದುಕಿನ ಭಾಗ ವಾಗದ ಹೊರತು ಯಾವ ಭಾಷೆಯೂ ನಮ್ಮದಾಗುವುದಿಲ್ಲ!
-ಡಾ| ಮೈತ್ರಿ ಭಟ್, ವಿಟ್ಲ