Advertisement

ಬಾರ್ ಪೋಷಣೆಗೆ ರಸ್ತೆ ನಾಮಾಂತರ

03:45 AM Apr 05, 2017 | Harsha Rao |

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ 220 ಮೀಟರ್‌ ವ್ಯಾಪ್ತಿಯಲ್ಲಿ ಬರುವ ಬಾರ್‌ಗಳ ತೆರವು ಸಂಬಂಧ ಸುಪ್ರೀಂ ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮಾಲೀಕರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಬರುವ ರಸ್ತೆಗಳನ್ನು ಜಿಲ್ಲಾ ಅಥವಾ ನಗರ ರಸ್ತೆಗಳನ್ನಾಗಿ ಪರಿವರ್ತಿಸಿ ಕಾನೂನಿಗೆ ತಿದ್ದುಪಡಿ ತರುವ ಸಾಧ್ಯತೆಯಿದೆ.

Advertisement

220 ಮೀಟರ್‌ ವ್ಯಾಪ್ತಿಯ ಬಾರ್‌ಗಳನ್ನು ಮುಚ್ಚುವುದರಿಂದ ರಾಜ್ಯ ಸರ್ಕಾರದ ಅಬಕಾರಿ ಆದಾಯಕ್ಕೂ ಕೊಕ್ಕೆ ಬೀಳಲಿರುವ ಹಿನ್ನೆಲೆಯಲ್ಲಿ ಬಾರ್‌ ಮಾಲಿಕರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರ ಸೂಕ್ತ ಕಾನೂನು ತಿದ್ದುಪಡಿ ಮಾಡುವ ಚಿಂತನೆ ನಡೆಸಿದೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಹೆದ್ದಾರಿಗಳಲ್ಲಿ ಬಾರ್‌ಗಳನ್ನು ತೆರವುಗೊಳಿಸದಂತೆ ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿತ್ತು. ಆದರೆ, ಸುಪ್ರೀಂಕೋರ್ಟ್‌ ಈಗ 500 ಮೀಟರ್‌ ಅಂತರದಿಂದ 220 ಮೀಟರ್‌ ಅಂತರಕ್ಕೆ ಇಳಿಸಿದೆ. ಆದರೂ ಲೈಸೆನ್ಸ್‌ ಪಡೆದಿರುವ ಬಾರ್‌ ಮಾಲೀಕರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಆದಾಯದಲ್ಲಿ ನಷ್ಟವಾಗಲಿದೆ.

ಹೀಗಾಗಿ, ಕಾನೂನಿಗೆ ತಿದ್ದುಪಡಿ ಮಾಡುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದರು. ಈಗಾಗಲೇ ಸುಪ್ರೀಂ ಕೋರ್ಟ್‌ ಆದೇಶದಂತೆ ಇತರ ರಾಜ್ಯಗಳು ಅನುಸರಿಸುತ್ತಿರುವ ನಿಯಮಗಳ ಕುರಿತು ಸರ್ಕಾರ ಗಮನ ಹರಿಸಿದ್ದು, ರಾಜಸ್ಥಾನ
ಸರ್ಕಾರ ನಗರದ ವ್ಯಾಪ್ತಿಯಲ್ಲಿ ಬರುವ ಹೈವೆಗಳನ್ನು ನಗರದ ರಸ್ತೆಗಳಾಗಿ ಬದಲಾಯಿಸಲು ಕಾನೂನು ತಿದ್ದುಪಡಿ ಮಾಡಿಕೊಂಡಿದೆ ಎಂಬ ಮಾಹಿತಿ ಇದೆ ಎಂದರು.

ರಾಜಸ್ಥಾನದ “ಮದ್ಯ’ದ ದಾರಿ: ರಾಷ್ಟ್ರೀಯ, ರಾಜ್ಯ ಹೆದ್ದಾರಿ ಪಕ್ಕದಲ್ಲಿ 500 ಮೀ. ವರೆಗೆ ಮದ್ಯದಂಗಡಿಗಳಿಗೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿರುವಂತೆಯೇ, ರಾಜಸ್ಥಾನ ನಗರ ಪ್ರದೇಶಗಳಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಗಳ ಭಾಗಗಳನ್ನು ಡಿನೋಟಿಫೈ ಮಾಡಿದೆ. ಈ ಮೂಲಕ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲಂಘನೆಯಿಂದ ಬಚಾವ್‌ ಆಗುವ ಪ್ಲಾನ್‌ ಮಾಡಿದೆ. ಆದರೆ ಹೀಗೆ ಡಿನೋಟಿಫೈ ಮಾಡಿದ್ದಕ್ಕೂ, ಸುಪ್ರೀಂ ಕೋರ್ಟ್‌ ಆದೇಶಕ್ಕೂ ಸಂಬಂಧವಿಲ್ಲ ಎಂದು ರಾಜಸ್ಥಾನ ಲೋಕೋಪಯೋಗಿ ಇಲಾಖೆ ಸಮಜಾಯಿಷಿ ನೀಡಿದೆ.

Advertisement

ಪ್ರಮುಖ ನಗರ ಪ್ರದೇಶಗಳಲ್ಲಿ ಹಾದು ಹೋದ ಕೆಲ ರಾಜ್ಯ ಹೆದ್ದಾರಿಗಳಲ್ಲಿ ಬೈಪಾಸ್‌ಗಳನ್ನು ನಿರ್ಮಿಸಲಾಗಿದೆ. ಅಂತಹ ಪ್ರಕರಣಗಳಲ್ಲಿ ಮಾತ್ರ ಸೀಮಿತ ಪ್ರದೇಶವನ್ನು ಡಿನೋಟಿಫೈ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಂದೇ ಪ್ರದೇಶದಲ್ಲಿ ಒಂದೇ ಸಂಖ್ಯೆಯ ರಸ್ತೆಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ಬೈಪಾಸ್‌ ಇದ್ದ ಕಡೆ, ನಗರ
ಪ್ರದೇಶಗಳಲ್ಲಿ ಹಾದು ಹೋಗುವ ರಸ್ತೆ ಡಿನೋಟಿಫೈ ಮಾಡಲಾಗಿದೆ ಎಂದಿದ್ದಾರೆ. ಮೂಲಗಳ ಪ್ರಕಾರ ಹೀಗೆ ಡಿನೋಟಿಫೈ ಮಾಡಿದ ಪ್ರದೇಶಗಳಲ್ಲಿ ಸುಮಾರು 450 ಮದ್ಯದಂಗಡಿಗಳು ಇವೆ ಎನ್ನಲಾಗಿದೆ. ರಾಜ್ಯದ 20 ಕಡೆಗಳಲ್ಲಿ ಸರ್ಕಾರ ಹೀಗೆ ಡಿನೋಟಿಫೈ ಮಾಡಿದೆ. 

ರಾಜ್ಯಕ್ಕೆ ವಿದೇಶಿ ಮರಳು?
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಮರಳು ದಂಧೆಯ ಹಾವಳಿ ತಡೆಯಲು ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಮರಳು ಗಣಿಗಾರಿಕೆ ಕುರಿತು ರಚಿಸಲಾಗಿರುವ ಸಂಪುಟ ಉಪ ಸಮಿತಿ ಸಭೆ ನಡೆಸಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ 23 ರಿಂದ 24 ಮಿಲಿಯನ್‌ ಮೆಟ್ರಿಕ್‌ ಟನ್‌ ಮರಳಿನ ಅಗತ್ಯವಿದೆ. ಆದರೆ, ಸದ್ಯ ನೈಸರ್ಗಿಕವಾಗಿ ನಾಲ್ಕರಿಂದ ಐದು ಮಿಲಿಯನ್‌ ಮೆಟ್ರಿಕ್‌ ಟನ್‌ ಮರಳು ದೊರೆಯುತ್ತಿದೆ. ಹೀಗಾಗಿ, ಮರಳಿನ ಅವಶ್ಯಕತೆ ನೀಗಿಸಲು ಇಂಡೋನೇಷಿಯಾ ಮತ್ತು ಮಲೇಷಿಯಾದಿಂದ ಹಡಗು ಮೂಲಕ ಆಮದು ಮಾಡಿಕೊಳ್ಳುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಸದ್ಯ, ಮರಳಿನ ತೀವ್ರ ಕೊರತೆ ಕಾಡುತ್ತಿರುವುದರಿಂದ ಮಲೇಷಿಯಾ ಮತ್ತು ಇಂಡೋನೇಷಿಯಾ ರಾಷ್ಟ್ರಗಳಿಂದ ಮರಳು ಆಮದು ಮಾಡಿಕೊಳ್ಳುವ ಕುರಿತು ಸಂಪುಟ ಉಪ ಸಮಿತಿ ಸಭೆಯಲ್ಲಿ
ಚರ್ಚೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next