Advertisement

ಅಂತರ್ಜಲ ಮೇಲ್ಮುಖ ಚಲನೆಯಿಂದ ಭೂಕುಸಿತ ಸಂಭವ

12:48 PM Nov 16, 2019 | Suhan S |

ನರಗುಂದ: ತೀವ್ರ ಅಂತರ್ಜಲ ಬಾಧಿತ ಪ್ರದೇಶಗಳಲ್ಲಿ ಅಂತರ್ಜಲದ ಮೇಲ್ಮುಖ ಚಲನೆಯಿಂದ ಭೂಕುಸಿತ ಸಂಭವ ಹೆಚ್ಚಾಗಿರುತ್ತದೆ. ಹೆಚ್ಚಳಗೊಂಡ ಪ್ರದೇಶದಲ್ಲಿ ಶೇಖರಣೆಯಾಗುವ ಅಂತರ್ಜಲ ನೀರನ್ನು ಆದಷ್ಟು ಹೊರಗೆ ಹಾಕುವ ಪ್ರಯತ್ನದಿಂದ ಭೂಕುಸಿತ ತಡೆಗಟ್ಟಬಹುದು ಎಂದು ಭೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಪಟ್ಟಣದ ಐದು ಬಡಾವಣೆಗಳಲ್ಲಿ ತೀವ್ರ ಅಂತರ್ಜಲ ಹೆಚ್ಚಳದಿಂದ ಭೂಕುಸಿತ ಘಟನೆಗಳಕಾರಣ ಕಂಡುಹಿಡಿಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೇಮಕಗೊಂಡ ಭೂ ವಿಜ್ಞಾನಿಗಳ ತಂಡ ಅಧ್ಯಯನದ ಮಧ್ಯಂತರ ವರದಿಯನ್ನು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಐದು ಸೂಚನೆಗಳು: ಫೀಡರ್‌ ಕಾಲುವೆಯಿಂದ ಕೆಂಪಗೆರಿಗೆ ನೀರು ಹರಿಸುವುದು ಸ್ಥಗಿತ, ನೀರಿನ ಮೂಲವಾಗಿ ಸಂರಕ್ಷಿಸಬೇಕಿದ್ದಲ್ಲಿ ಕೆರೆ ನೀರು ಖಾಲಿ ಮಾಡಿ ತಳ ಭಾಗವನ್ನು ಕ್ಲೇ ಪದರ ಅಥವಾ ಎಚ್‌ಡಿಪಿಇ ಪದರ ಅಥವಾ ಸೂಕ್ತ ಇತರೆ ವಿಧಾನದಿಂದ ಪದರವನ್ನು ಅಳವಡಿಸಿ ನೀರು ಇಂಗುವಿಕೆ ತಡೆಹಿಡಿದಲ್ಲಿ ಮಾತ್ರ ಸದರಿ ಪ್ರದೇಶದಲ್ಲಿ ನೀರಿನ ಹೊರಹರಿವು ನಿಯಂತ್ರಿಸಿ ಭೂಕುಸಿತ ತಡೆಗಟ್ಟಬಹುದು.

ಭೂಗತ ಆಹಾರ ಧಾನ್ಯ ತುಂಬುವ ಬಂಕರ್‌ಗಳನ್ನು ಭೌತಿಕವಾಗಿ ಗುರುತಿಸಿ ಕೆಂಪುಮಣ್ಣಿನಿಂದ ಮುಚ್ಚಬೇಕು. ಈ ಪ್ರದೇಶದಲ್ಲಿ ಅಂತರ್ಜಲ ಜಿನುಗುವಿಕೆಯಿಂದ ಸಂಗ್ರಹವಾದ ನೀರನ್ನು ಹೊರಹಾಕಲು ಸೂಕ್ತ ಡ್ರೈನೇಜ್‌ ವ್ಯವಸ್ಥೆ ಮಾಡಬೇಕು. ಮುಖ್ಯ ರಸ್ತೆಯು ಸವದತ್ತಿ ತಾಲೂಕಿಗೆ ಸಂಪರ್ಕಿಸುತ್ತದೆ. ಈ ರಸ್ತೆ ಹಗೇದಕಟ್ಟಿ, ಕಸಬಾ, ಶಂಕರಲಿಂಗನ ಓಣಿ ಇರುವ ಪ್ರದೇಶ ಮುಂಭಾಗದಲ್ಲಿ ಹಾದು ಹೋಗಿದೆ. ರಸ್ತೆಯು ಸಬ್‌ ಸರೆಧೀಸ್‌ ಡೈಕ್‌ ರೀತಿಯಲ್ಲಿ ವರ್ತಿಸುತ್ತಿದ್ದರಿಂದ ಮೇಲ್ಕಂಡ ಸ್ಥಳಗಳಿಂದ ಬರುತ್ತಿರುವ ನೀರಿನ ಸೆಲೆಯು ಬ್ಲಾಕ್‌ ಆಗಿರುವುದು ಕಂಡುಬಂದಿದೆ. ಹೀಗಾಗಿ ಅಂತರ್ಜಲ ಸರಾಗವಾಗಿ ಹರಿಯುವಿಕೆಗೆ ಅಡಚಣೆಯಾಗಿದೆ. ಆದ್ದರಿಂದ ಅಂತರ್ಜಲ ಮೇಲ್ಮುಖ ಚಲನೆಯಿಂದ ಭೂಕುಸಿತ ಹೆಚ್ಚಾಗಿದೆ. ದೇಸಾಯಿ ಬಾವಿ ಇರುವ ಪ್ರದೇಶ ಮುಂಭಾಗದಲ್ಲಿ ಸವದತ್ತಿ ರಸ್ತೆಗೆ ಪೈಪ್‌ ಅಳವಡಿಸಿದಲ್ಲಿ ನೀರಿನ ಸೆಲೆಯು ಸರಾಗವಾಗಿ ಚಲಿಸುವುದರಿಂದ ಅಂತರ್ಜಲ ಜಿನುಗಿವಿಕೆ ಕಡಿಮೆ ಮಾಡಬಹುದು ಎಂಬಿತ್ಯಾದಿ ಐದು ಸೂಚನೆ ಮಧ್ಯಂತರ ವರದಿಯಲ್ಲಿನೀಡಲಾಗಿದೆ.

ಎರಡು ವಿಧದ ಮಣ್ಣು: ಎರಡು ವಿಧವಾದ ಕಪ್ಪು ಮತ್ತು ಕೆಂಪು ಮಣ್ಣು ದೊರೆಯುತ್ತದೆ. ಕಪ್ಪು ಮಣ್ಣಿನ ಪದರವು 0.1 ಮೀಟರ್‌ನಿಂದ 5 ಮೀಟರ್‌ ದಪ್ಪವಿದೆ. ಕೆಂಪು ಮಣ್ಣು ಎತ್ತರ ಪ್ರದೇಶದಲ್ಲಿ ಮತ್ತು ಭೂಕುಸಿತ ಪ್ರದೇಶಗಳ ಇಳಿಜಾರಿನಲ್ಲಿ ಲಭ್ಯವಿದೆ.

Advertisement

ಪುರಾತನ ಧಾನ್ಯಗಳ ಬಂಕರ್‌ ಪತ್ತೆ:  ಹಗೇದಕಟ್ಟಿ, ಬುಲ್ಗನವರ ಗಲ್ಲಿ, ದೇಶಪಾಂಡೆ ಗಲ್ಲಿ, ಕಲಾಲ್‌ ಬಿಲ್ಡಿಂಗ್‌ ಸ್ಥಳಗಳಲ್ಲಿ ಪುರಾತನ ಭೂಗತ ಆಹಾರ ಧಾನ್ಯ ತುಂಬುವ ಬಂಕರ್‌ಗಳ ರಚನೆಯಿದೆ. ಬಂಕರ್‌ಗಳಲ್ಲಿ ಪುರಾತನ ಕಾಲದಲ್ಲಿ ಧಾನ್ಯಸಂಗ್ರಹಣೆ ಮಾಡಿದ್ದು, ಬಂಕರ್‌ಗಳನ್ನು ಮಣ್ಣಿನಿಂದ ಮುಚ್ಚಲಾಗಿದೆ. ಭೂಗತ ಕಾಲುವೆಗಳು ಸಹ ಭೂಕುಸಿತ ಪ್ರದೇಶದಲ್ಲಿ ಇದ್ದು, ಇದರಲ್ಲೊಂದು ವೆಂಕಟೇಶ್ವರ ದೇವಸ್ಥಾನ ಬಳಿ ಕಾಣಬಹುದಾಗಿದೆ ಎಂಬುದು ಭೂ ವಿಜ್ಞಾನಿಗಳ ವರದಿ.

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next